‘ಕೃಷಿಯಿಂದ ಭೂಮಿಯ ಋಣ ತೀರಿಸಲು ಸಾಧ್ಯ’

ಚಾರ (ಹೆಬ್ರಿ), ಡಿ.14: ಹಿರಿಯರು ತಮ್ಮ ಮಕ್ಕಳನ್ನು ಕೃಷಿ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳಲು ಮುಂದಾಗಬೇಕು. ಇದರಿಂದ ಬದುಕಲು ನೆಲೆ ಕಲ್ಪಿಸಿದ ಭೂಮಿಯ ಋಣ ತೀರಿಸಲು ಸಾಧ್ಯ ಎಂದು ಅದಮಾರು ಮಠದ ಶ್ರೀ ವಿಶ್ವಪ್ರಿಯ ತೀರ್ಥ ಸ್ವಾಮೀಜಿ ಹೇಳಿದ್ದಾರೆ.
ಚಾರ ಗ್ರಾಪಂ ವ್ಯಾಪ್ತಿಯ ಹಂದಿಕಲ್ಲು- ಬಾವಿಗದ್ದೆ ಎಂಬಲ್ಲಿ ಮುಂಬರುವ ಅದಮಾರು ಮಠದ ಪರ್ಯಾಯಕ್ಕಾಗಿ ಅಗತ್ಯವಿರುವ ಬಾಳೆ ಎಲೆಗಾಗಿ ಈ ಗ್ರಾಮದ ಸುತ್ತಮುತ್ತ ಸುಮಾರು 10 ಎಕರೆ ಪ್ರದೇಶದಲ್ಲಿ ಬಾಳೆ ಕೃಷಿಗೆ ಚಾಲನೆ ನೀಡಿ ಅವರು ಮಾತನಾಡುತಿದ್ದರು. ಬಾಳೆ ಗಿಡದ ಪ್ರತೀ ಅಂಗವೂ ಔಷಧ ರೂಪದಲ್ಲಿದ್ದು, ಬಾಳೆಹಣ್ಣು ಮತ್ತು ತೆಂಗಿನಕಾಯಿ ಫಲವಸ್ತುಗಳಲ್ಲೇ ಅತ್ಯಂತ ಶುದ್ಧವಾಗಿದೆ. ಹೀಗಾಗಿ ದೇವಸ್ಥಾನ ಗಳಿಗೆ ಇವೆರಡನ್ನೂ ತೆಗೆದುಕೊಂಡು ಹೋಗುವ ಸಂಪ್ರದಾಯ ಬೆಳೆದು ಬಂದಿದೆ ಎಂದರು.
ಕೃಷಿ ಆಧಾರಿತ ಪರ್ಯಾಯ: ಸಮಾರಂಭದಲ್ಲಿ ಆಶೀರ್ವಚನ ನೀಡಿದ ಅದಮಾರು ಮಠದ ಕಿರಿಯ ಯತಿಗಳಾದ ಶ್ರೀ ಈಶಪ್ರಿಯ ತೀರ್ಥ ಸ್ವಾಮೀಜಿ ಮಾತನಾಡಿ, ಅದಮಾರು ಮಠದ ಮುಂಬರುವ ಪರ್ಯಾಯವನ್ನು ಕೃಷಿ ಆಧಾರಿತ ಪರ್ಯಾಯವಾಗಿ ರೂಪಿಸುವ ಯೋಜನೆಯನ್ನು ಹಾಕಿಕೊಳ್ಳಲಾಗಿದೆ ಎಂದರು.
ದೇಶದ ಇಂದಿನ ಸ್ಥಿತಿ ಬದಲಾಗಬೇಕಿದ್ದರೆ ಎಲ್ಲರೂ ಕೃಷಿಕರನ್ನು ಬೆಂಬಲಿಸ ಬೇಕು. ಪರ್ಯಾಯದ ಮೂಲಕ ನಾವು ಈ ದಿಕ್ಕಿನಲ್ಲಿ ಹೆಜ್ಜೆ ಇಟ್ಟಿದ್ದೇವೆ. ನಮ್ಮ ಪಕ್ಕದ ಊರಿನಿಂದಲೇ ಕೃಷ್ಯುತ್ಪನ್ನ ಪಡೆದರೆ ಶುದ್ಧತೆ ಮತ್ತು ಬದ್ಧತೆ ಇರುತ್ತದೆ. ಯಾರೇ ಆದರೂ ಸಮರ್ಪಣಾ ಭಾವದಿಂದ ಮಾಡಿದ ಸೇವೆ ದೇವರಿಗೆ ಸಲ್ಲುತ್ತದೆ ಎಂದರು.
ಸಮಾರಂಭದಲ್ಲಿ ಉಪಸ್ಥಿತರಿದ್ದ ಮಾಜಿ ಸಂಸದ ಜಯಪ್ರಕಾಶ್ ಹೆಗ್ಡೆ ಮಾತನಾಡಿ, ರೈತರ ಬೆಳೆಯನ್ನು ಪರ್ಯಾಯ ಮಠ ನೇರವಾಗಿ ಖರೀದಿಸುತ್ತಿ ರುವುದು ಉತ್ತಮ ಬೆಳವಣಿಗೆ. ಸಾಲಮನ್ನಾದಿಂದ ಅವಿಭಜಿತ ದ.ಕ. ಜಿಲ್ಲೆ ರೈತರಿಗೆ ಹೆಚ್ಚಿನ ಪ್ರಯೋಜನವಿಲ್ಲ. ಸಾಲಮನ್ನಾಕ್ಕೆ ಬದಲು ಕೃಷಿ ಪ್ರಾರಂಭ ದಲ್ಲೇ ಉತ್ತಮ ಬೀಜ, ಗೊಬ್ಬರ, ಸಬ್ಸಿಡಿಗಳನ್ನು ಪ್ರಾರಂಭದ್ಲೇ ನೀಡಬೇಕು ಎಂದು ಹೇಳಿದರು.
ಚೇರ್ಕಾಡಿ ಗ್ರಾಪಂ ಅಧ್ಯಕ್ಷ ಹರೀಶ್ ಶೆಟ್ಟಿ, ವಿವೇಕಾನಂದ ವೇದಿಕೆ ಅಧ್ಯಕ್ಷೆ ಸುಮತಿ, ಕಾರ್ಯದರ್ಶಿ ಮಿಥುನ್ ಶೆಟ್ಟಿ, ಸ್ಥಾಪಕಾಧ್ಯಕ್ಷ ರವೀಂದ್ರನಾಥ ಶೆಟ್ಟಿ, ಪ್ರಗತಿಪರ ಕೃಷಿಕ ರಾಜೇಶ್ ಪೂಜಾರಿ ಮುಂತಾದವರು ಉಪಸ್ಥಿತರಿದ್ದರು.