ಮಂಗಳೂರು: ಕನ್ನಡ -ತುಳು ನಾಟಕ ರಂಗದ ಕಲಾವಿದೆ ಉಷಾ ಭಂಡಾರಿಗೆ 'ಕರ್ನಾಟಕ ನಾಟಕ ಅಕಾಡಮಿ ಪ್ರಶಸ್ತಿ'

ಮಂಗಳೂರು, ಡಿ.14: ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನ ರಂಗ ಭೂಮಿ, ಕಿರು ತೆರೆ, ಚಲನಚಿತ್ರ ರಂಗದ ಕಲಾವಿದೆ ಹೆಗ್ಗೋಡಿನ ನಿನಾಸಂ ನಲ್ಲಿ ರಂಗ ಶಿಕ್ಷಣ ಪಡೆದು ನಾಟಕ ರಂಗದಲ್ಲಿ ತಮ್ಮನ್ನು ತೊಡಗಿಸಿಕೊಂಡ ಉಷಾ ಭಂಡಾರಿ ಅವರು 2018ನೆ ಸಾಲಿನ ಕರ್ನಾಟಕ ನಾಟಕ ಅಕಾಡಮಿ ಪ್ರಶಸ್ತಿಗೆ ಪಾತ್ರರಾಗಿದ್ದರೆ.
ಉಳ್ಳಾಲದ ತೊಕ್ಕೊಟ್ಟಿನಲ್ಲಿ ಜನಿಸಿದ ಉಷಾ ಭಂಡಾರಿ ಮಂಗಳೂರಿನ ಸೈಂಟ್ ಆ್ಯಗ್ನೇಸ್ ಕಾಲೇಜಿನಲ್ಲಿ ಬಿಎಸ್‌ಸಿ ಪದವಿ ಪಡೆದ ಬಳಿಕ ನಿನಾಸಂನಲ್ಲಿ ರಂಗ ಶಿಕ್ಷಣ ಪಡೆದು ಕನ್ನಡ -ತುಳು ರಂಗ ಭೂಮಿಯಲ್ಲಿ ತಮ್ಮನ್ನು ತೊಡಗಿಸಿಕೊಂಡವರು.
''ಖ್ಯಾತ ಸಾಹಿತಿ ಬೊಳುವಾರು ಮುಹಮ್ಮದ್ ಕುಂಞಿಯವರ ಮುತ್ತುಚ್ಚೇರಿ ನಾಟಕವನ್ನು 1989ರಲ್ಲಿ ಪ್ರಥಮವಾಗಿ ಮಂಗಳೂರಿನ ರೋಶನಿ ನಿಲಯದ ಅಂತರ್ ಕಾಲೇಜು ಸ್ಪರ್ಧೆಯಲ್ಲಿ ಪ್ರದರ್ಶಿಸಿ ನಾಟಕ ರಂಗಕ್ಕೆ ನಾನು ಪ್ರವೇಶಿಸಿರುವುದು ನನ್ನ ಅವಿಸ್ಮರಣೀಯ ಅನುಭವ. ನಿರಂತರವಾಗಿ 30 ವರ್ಷಗಳಿಂದ ಈ ಕ್ಷೇತ್ರದಲ್ಲಿ ಕಲಾವಿದೆಯಾಗಿ ನಾನು ಕಾರ್ಯನಿರ್ವಹಿಸುತ್ತಿದ್ದೇನೆ. ಕರಾವಳಿ ಮುಖ್ಯವಾಗಿ ಮೈಸೂರಿನ ಬಹುತೇಕ ನಾಟಕ ತಂಡಗಳಲ್ಲಿ ನಾನು ನಟಿಸಿದ್ದೇನೆ. ಕಳೆದ ಎರಡು ವರ್ಷಗಳಿಂದ ಎಸ್.ಎನ್. ಸೀತಾರಾಮರು ಬರೆದು ನಿರ್ದೇಶಿಸಿದ ಅತೀತ ನಾಟಕ 82 ಪ್ರದರ್ಶನಗಳನ್ನು ಕಂಡಿದೆ. ಇನ್ನೂ ಪ್ರದರ್ಶನ ನಡೆಯುತ್ತಿದೆ. ಪ್ರಶಸ್ತಿ ಬಂದಿರುವುದು ಇನ್ನಷ್ಟು ಪೊತ್ಸಾಹ ನೀಡಿದಂತಾಗಿದೆ ’’ಎಂದು ಉಷಾ ಭಂಡಾರಿ ವಾರ್ತಾಭಾರತಿಯೊಂದಿಗೆ ತಮ್ಮ ಸಂತಸ ಹಂಚಿಕೊಂಡರು.
ಉಷಾ ಭಂಡಾರಿಯವರು ನಕ್ಕಳಾ ರಾಜ ಕುಮಾರಿ, ದೇವರ ಕಾಡು, ಬೆಳದಿಂಗಳ ಬಾಲೆ, ಒಂದು ಮುತ್ತಿನ ಕಥೆ, ಎಡಕಲ್ಲು ಗುಡ್ಡದ ಮೇಲೆ ಮದಿಮೆ, ಅಪ್ಪೆ ಟೀಚರ್ ಸೇರಿದಂತೆ 20ಕ್ಕೂ ಹೆಚ್ಚು ಚಲನ ಚಿತ್ರದಲ್ಲಿ ನಟಿಸಿದವರು.
ತುಳು ರಂಗ ಭೂಮಿಯ ವಿಜಯ ಕುಮಾರ್ ಕೊಡಿಯಾಲ ಬೈಲ್ ನಿರ್ದೇಶಿಸಿದ ತುಳು ನಾಟಕಗಳಾದ ಒರಿಯರ್‌ದ್ ಒರಿ ಅಸಲ್, ದೇವು ಪೂಂಜ, ಮಂಡೆ ಬಲಿಪುಜಿ, ಅಕ್‌ಲೆಕ್ಕ ಎಂಕುಲತ್ತ್, ಕುಸೆಲ್ದ ಪರಬೆ, ಸಂಸಾರದ ಸರ್ಕಸ್, ಅಸಲ್ ಮೂರ್ತಿಲು, ಡಿ.ಕೆ.ಚವಟರ ಧರ್ಮೆತ್ತಿ ಮಾಯೆ, ಮೂಜಿನ ಮುತ್ತು, ಮೂಜಿ ಲೋಕದಲ್ಲಿ ನಟಿಸಿದ್ದಾರೆ.