ರಫೇಲ್ ತೀರ್ಪಿನಲ್ಲಿ ಸಿಎಜಿ, ಪಿಎಸಿ ಉಲ್ಲೇಖದ ತಿದ್ದುಪಡಿ ಕೋರಿ ಸುಪ್ರೀಂಗೆ ಅರ್ಜಿ ಸಲ್ಲಿಸಿದ ಕೇಂದ್ರ
ಹೊಸದಿಲ್ಲಿ, ಡಿ. 15: ರಫೇಲ್ ಒಪ್ಪಂದದ ಕುರಿತು ನೀಡಿದ ತೀರ್ಪಿನ ಸಾಲುಗಳಲ್ಲಿ ಮಹಾಲೇಖಪಾಲರ (ಸಿಎಜಿ) ವರದಿ ಹಾಗೂ ಸಂಸತ್ತಿನ ಸಾರ್ವಜನಿಕ ಲೆಕ್ಕಪತ್ರ ಸಮಿತಿ (ಪಿಎಸಿ) ಕುರಿತ ತಪ್ಪು ವ್ಯಾಖ್ಯಾನ ಸರಿಪಡಿಸುವಂತೆ ಕೋರಿ ಕೇಂದ್ರ ಸರಕಾರ ಶನಿವಾರ ಸುಪ್ರೀಂ ಕೋರ್ಟ್‌ನಲ್ಲಿ ಮನವಿ ಸಲ್ಲಿಸಿದೆ.
ಸಿಎಜಿ ಹಾಗೂ ಪಿಎಸಿಗೆ ಸಂಬಂಧಿಸಿ ನ್ಯಾಯಾಲಯಕ್ಕೆ ದಾಖಲೆಗಳನ್ನು ಮುಚ್ಚಿದ ಲಕೋಟೆಯಲ್ಲಿ ಸಲ್ಲಿಸಿರುವ ವಿಚಾರಕ್ಕೆ ಸಂಬಂಧಿಸಿ ತಪ್ಪು ವ್ಯಾಖ್ಯಾನ ಸ್ಪಷ್ಟಪಡಿಸುವಂತೆ ಕೋರಿ ಈ ಮನವಿ ಸಲ್ಲಿಸಲಾಗಿದೆ ಎಂದು ಕಾನೂನು ಅಧಿಕಾರಿ ತಿಳಿಸಿದ್ದಾರೆ. ಸುಪ್ರೀಂ ಕೋರ್ಟ್ ತೀರ್ಪಿನ 25ನೇ ಪ್ಯಾರಾದಲ್ಲಿ ಸಿಎಜಿ ಹಾಗೂ ಪಿಎಸಿ ವಿಷಯದ ಕುರಿತು ಉಲ್ಲೇಖಿಸಲಾಗಿದೆ. ಫ್ರಾನ್ಸ್‌ನಿಂದ 36 ರಪೇಲ್ ಜೆಟ್‌ಗಳನ್ನು ಹೊಂದುವುದರಲ್ಲಿ ಯಾವುದೇ ಭ್ರಷ್ಟಾಚಾರ ನಡೆದಿಲ್ಲ ಎಂದು ಇದೇ ಪ್ಯಾರಾದಲ್ಲಿ ಹೇಳಲಾಗಿದೆ.
ಜೆಟ್‌ನ ಬೆಲೆ ವಿವರಗಳನ್ನು ಸಿಎಜಿಯೊಂದಿಗೆ ಹಂಚಿಕೊಳ್ಳಲಾಗಿದೆ ಹಾಗೂ ಸಿಎಜಿ ವರದಿಯನ್ನು ಪಿಎಸಿ ಪರಿಶೀಲನೆ ನಡೆಸಿದೆ ಎಂದು 29 ಪುಟಗಳ ತೀರ್ಪು ಹೇಳಿದೆ. ಆದರೆ, ಪಿಎಸಿಯ ಮುಖ್ಯಸ್ಥ ಮಲ್ಲಿಕಾರ್ಜುನ ಖರ್ಗೆ ಶನಿವಾರ, ತಾನು ವರದಿಯನ್ನು ನೋಡಿಲ್ಲ ಎಂದು ಹೇಳಿದ್ದಾರೆ ಹಾಗೂ ಕ್ಲೀನ್ ಚಿಟ್ ಪಡೆಯಲು ಸರಕಾರ ಸುಪ್ರೀಂ ಕೋರ್ಟ್‌ನ ಮುಂದೆ ಸುಳ್ಳು ಹೇಳಿದೆ ಎಂದಿದ್ದಾರೆ.