ಟಿವಿ ಸುದ್ದಿ ನಿರೂಪಕಿ ನಾಲ್ಕನೇ ಮಹಡಿಯಿಂದ ಬಿದ್ದು ಸಾವು
ಲಕ್ನೊ, ಡಿ.15: ಖಾಸಗಿ ಟಿವಿಯಲ್ಲಿ ಸುದ್ದಿ ನಿರೂಪಕಿಯಾಗಿದ್ದ ಯುವತಿಯೊಬ್ಬಳು ತಾನು ವಾಸವಿದ್ದ ನಾಲ್ಕನೇ ಮಹಡಿಯ ಅಪಾರ್ಟ್‌ಮೆಂಟ್‌ನ ಬಾಲ್ಕನಿಯಿಂದ ಕೆಳಗೆ ಬಿದ್ದು ಸಾವನ್ನಪ್ಪಿರುವ ಘಟನೆ ನಡೆದಿದೆ. ರಾಜಸ್ತಾನದ ನಿವಾಸಿ ರಾಧಿಕಾ ಕೌಶಿಕ್ ಮೃತಪಟ್ಟವರು.
ಸಾವಿಗೆ ಕಾರಣವೇನು ಎಂಬುದನ್ನು ಇನ್ನಷ್ಟೇ ಖಚಿತಪಡಿಸಿಕೊಳ್ಳಬೇಕಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಸೆಕ್ಟರ್ 77ರಲ್ಲಿರುವ ‘ಅಂತರಿಕ್ಷ ಫಾರೆಸ್ಟ್ ಅಪಾರ್ಟ್‌ಮೆಂಟ್’ನ ನಾಲ್ಕನೇ ಮಹಡಿಯಲ್ಲಿ ರಾಧಿಕಾ ವಾಸವಿದ್ದರು. ತನ್ನ ಸಹೋದ್ಯೋಗಿಯೊಂದಿಗೆ ಬಾಲ್ಕನಿಗೆ ಬಂದಾಗ ಈ ಘಟನೆ ನಡೆದಿದೆ. ಈ ಸಂದರ್ಭ ಇಬ್ಬರೂ ಮದ್ಯದ ಅಮಲಿನಲ್ಲಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆಯ ಬಗ್ಗೆ ಕಟ್ಟಡದ ಭದ್ರತಾ ಸಿಬ್ಬಂದಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಅಗತ್ಯ ಬಿದ್ದರೆ ಆಕೆಯೊಂದಿಗಿದ್ದ ಸಹೋದ್ಯೋಗಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ. ರಾಧಿಕಾ ತನ್ನನ್ನು ಡಿನ್ನರ್‌ಗೆ ಕರೆದಿದ್ದರಿಂದ ಮನೆಗೆ ಹೋಗಿದ್ದೆ.ರಾತ್ರಿ ಬಾಲ್ಕನಿಗೆ ಬಂದಿದ್ದಾಗ ಆಕಸ್ಮಿಕವಾಗಿ ಆಯತಪ್ಪಿ ಕೆಳಗೆ ಬಿದ್ದಿದ್ದಾಳೆ ಎಂದು ಆಕೆಯೊಂದಿಗಿದ್ದ ಸಹೋದ್ಯೋಗಿ ತಿಳಿಸಿದ್ದಾನೆ.
ಅಪಾರ್ಟ್‌ಮೆಂಟ್‌ನ ಬಾಲ್ಕನಿಗೆ ಅಳವಡಿಸಿದ್ದ ಕಂಬಿ ತಡೆ(ರೇಲಿಂಗ್) ಅತ್ಯಂತ ಕೆಳಮಟ್ಟದಲ್ಲಿದ್ದು ಅಸುರಕ್ಷಿತವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.