ಛತ್ತೀಸ್‌ಗಢದ ನೂತನ ಮುಖ್ಯಮಂತ್ರಿಯಾಗಿ ಭೂಪೇಶ್ ಬಘೇಲ್ ಆಯ್ಕೆ

ಹೊಸದಿಲ್ಲಿ, ಡಿ.16: ಛತ್ತೀಸ್‌ಗಢದ ನೂತನ ಮುಖ್ಯಮಂತ್ರಿಯಾಗಿ ಭೂಪೇಶ್ ಬಘೇಲ್ ರನ್ನು ನೇಮಿಸಲಾಗಿದೆ ಎಂದು ಕಾಂಗ್ರೆಸ್ ರವಿವಾರ ಅಧಿಕೃತ ಘೋಷಣೆ ಮಾಡಿದೆ.
ರಾಯ್‌ಪುರದಲ್ಲಿ 68 ಸದಸ್ಯರನ್ನು ಒಳಗೊಂಡ ಕಾಂಗ್ರೆಸ್ ಶಾಸಕಾಂಗ ಸಭೆ ರವಿವಾರ ನಡೆದಿದೆ. ಸಭೆ ಬಳಿಕ ಎಐಸಿಸಿ ವೀಕ್ಷಕ ಹಾಗೂ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಭೂಪೇಶ್‌ರನ್ನು ಮುಖ್ಯಮಂತ್ರಿಯಾಗಿ ಆಯ್ಕೆ ಮಾಡಿದ್ದಾಗಿ ಘೋಷಿಸಿದರು.
57ರ ಹರೆಯದ ಭೂಪೇಶ್ ಕಳೆದ 5 ವರ್ಷಗಳಿಂದ ಛತ್ತೀಸ್‌ಗಢ ಪ್ರದೇಶ ಕಾಂಗ್ರೆಸ್ ಅಧ್ಯಕ್ಷರಾಗಿ ಪಕ್ಷ ಅಧಿಕಾರಕ್ಕೆ ಬರಲು ಯತ್ನಿಸಿದ್ದಾರೆ. ಭೂಪೇಶ್ ಹಾಗೂ ಇತರ ಮೂವರು ಮುಖ್ಯಮಂತ್ರಿ ಹುದ್ದೆಯ ಆಕಾಂಕ್ಷಿಯಾಗಿದ್ದರು.
ನಾಲ್ವರು ಶನಿವಾರ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರನ್ನು ಭೇಟಿಯಾಗಿದ್ದರು. ರಾಹುಲ್ ದಿಲ್ಲಿಯ ತುಘಲಕ್ ಲೇನ್‌ನಲ್ಲಿರುವ ತನ್ನ ನಿವಾಸದಲ್ಲಿ ಬಘೇಲ್, ಟಿಎಸ್ ಸಿಂಗ್ ದೇವೊ, ತಾಮ್ರಧ್ವಜ ಸಾಹು ಹಾಗೂ ಚರಣ್‌ದಾಸ್ ಮಹಂತಾರೊಂದಿಗೆ ಹಲವು ಸುತ್ತಿನ ಮಾತುಕತೆ ನಡೆಸಿದ್ದರು.
ಇದೀಗ ಕಾಂಗ್ರೆಸ್ ಫಲಿತಾಂಶ ಪ್ರಕಟವಾಗಿ ಐದು ದಿನಗಳ ಬಳಿಕ ಮೂರು ರಾಜ್ಯಗಳಾದ ಛತ್ತೀಸ್‌ಗಢ, ಮಧ್ಯಪ್ರದೇಶ ಹಾಗೂ ರಾಜಸ್ಥಾನದ ಮುಖ್ಯಮಂತ್ರಿಗಳ ಅಭ್ಯರ್ಥಿ ಆಯ್ಕೆಯನ್ನು ಅಂತಿಮಗೊಳಿಸಿದೆ.