ಶಬರಿಮಲೆ ದೇವಸ್ಥಾನ ಪ್ರವೇಶಿಸಲು ಯತ್ನ: ತೃತೀಯ ಲಿಂಗಿಗಳನ್ನು ತಡೆದ ಪೊಲೀಸರು
ತಿರುವನಂತಪುರಂ, ಡಿ.16: ಮಹಿಳೆಯರಂತೆ ಬಟ್ಟೆ ಧರಿಸಿಕೊಂಡಿದ್ದ ನಾಲ್ವರು ತೃತೀಯ ಲಿಂಗಿಗಳು ಶಬರಿಮಲೆ ದೇವಸ್ಥಾನ ಪ್ರವೇಶಿಸುವುದನ್ನು ಪೊಲೀಸರು ತಡೆದಿದ್ದಾರೆ. ತಮ್ಮೊಂದಿಗೆ ಪೊಲೀಸರು ಅನುಚಿತವಾಗಿ ವರ್ತಿಸಿದ್ದಾರೆ ಎಂದು ತೃತೀಯ ಲಿಂಗಿಗಳು ಆರೋಪಿಸಿದ್ದಾರೆ.
ಅನನ್ಯ, ತೃಪ್ತಿ, ಆವಂತಿಕಾ ಮತ್ತು ರಂಜು - ಈ ನಾಲ್ವರು ಅಯ್ಯಪ್ಪ ವೃತಾಧಾರಿಗಳಾಗಿದ್ದು ರವಿವಾರ ಬೆಳಿಗ್ಗೆ ಅಯ್ಯಪ್ಪ ದೇವಸ್ಥಾನದತ್ತ ತೆರಳಿದ್ದರು. ಆದರೆ ಅವರನ್ನು ಏರುಮಲೆ ಪೊಲೀಸ್ ಠಾಣೆಯ ಬಳಿ ಪೊಲೀಸರು ತಡೆದಿದ್ದಾರೆ. ಪುರುಷರಂತೆ ಬಟ್ಟೆ ಧರಿಸಿದರೆ ಸೂಕ್ತ ಭದ್ರತೆ ಒದಗಿಸುವುದಾಗಿ ಪೊಲೀಸರು ತಿಳಿಸಿದರು. ಇದಕ್ಕೆ ಒಪ್ಪಿದರೂ ಬಳಿಕ ದೇವಸ್ಥಾನದತ್ತ ಮುಂದೆ ಸಾಗಲು ಬಿಡಲಿಲ್ಲ ಎಂದು ತೃತೀಯ ಲಿಂಗಿಗಳು ಆರೋಪಿಸಿದ್ದಾರೆ.
ಪ್ಯಾಂಟ್ ಶರ್ಟ್ ಅಥವಾ ಪಂಚೆ ಮತ್ತು ಶರ್ಟ್ ಧರಿಸಿದರೆ ದೇವಸ್ಥಾನ ಪ್ರವೇಶಿಸಲು ಅವಕಾಶ ನೀಡುವುದಾಗಿ ಮೊದಲು ತಿಳಿಸಿದ್ದರು. ನಾವು ಒಪ್ಪಿದಾಗ ಮಾತು ಬದಲಿಸಿದರು ಎಂದು ಅನನ್ಯ ಮಾಧ್ಯಮದವರಿಗೆ ತಿಳಿಸಿದ್ದಾರೆ. ನಮಗೆ ನಿರಂತರ ಕಿರುಕುಳ ನೀಡಿದರಲ್ಲದೆ ನಮ್ಮನ್ನು ಕ್ರಿಮಿನಲ್‌ಗಳಂತೆ ನಡೆಸಿಕೊಂಡರು. ಪುರುಷರೊಂದಿಗೆ ಮಾತನಾಡುವಂತೆ ತಮ್ಮೊಂದಿಗೆ ಮಾತನಾಡುತ್ತಾ ಅನುಚಿತವಾಗಿ ನಡೆದುಕೊಂಡಿದ್ದಾರೆ. ಅಲ್ಲದೆ ನಮ್ಮ ವಾಹನದ ಚಾಲಕನನ್ನೂ ಪೊಲೀಸರು ಬೆದರಿಸಿದ್ದಾರೆ ಎಂದು ಅನನ್ಯ ದೂರಿದ್ದಾರೆ. ಬಳಿಕ ನಾಲ್ಕು ಮಂದಿಯೂ ಪೊಲೀಸ್ ಭದ್ರತೆಯೊಂದಿಗೆ ಕೊಟ್ಟಾಯಂಗೆ ವಾಪಸಾದರು.