ಕದ್ರಿ ಹಿಲ್ಸ್‌ನಲ್ಲಿ ‘ವಿಜಯ ದಿವಸ’ ಕಾರ್ಯಕ್ರಮ

ಮಂಗಳೂರು, ಡಿ.16: ಜಿಲ್ಲಾ ಮಾಜಿ ಸೈನಿಕರ ಸಂಘ, ಲಯನ್ಸ್ ಕ್ಲಬ್ ಇಂಟರ್‌ನ್ಯಾಷನಲ್ 317 ಡಿ, ರೋಟರಿ ಇಂಟರ್‌ನ್ಯಾಷನಲ್ ಡಿಸ್ಟ್ರಿಕ್ಟ್ 3181, ನಿಟ್ಟೆ ಎಜುಕೇಶನ್ ಟ್ರಸ್ಟ್ ಮತ್ತು ಶಾಸ್ತಾವು ಭೂತನಾಥೇಶ್ವರ ದೇವಸ್ಥಾನ ಟ್ರಸ್ಟ್ ಸಹಯೋಗದಲ್ಲಿ ನಗರದ ಕದ್ರಿ ಹಿಲ್ಸ್‌ನಲ್ಲಿರುವ ಯುದ್ಧ ಸ್ಮಾರಕದಲ್ಲಿ ರವಿವಾರ ‘ವಿಜಯ ದಿವಸ’ ಕಾರ್ಯಕ್ರಮ ನಡೆಯಿತು. ಈ ಸಂದರ್ಭ ಯುದ್ಧ ಸ್ಮಾರಕಕ್ಕೆ ಹೂಹಾರ-ಗುಚ್ಛಗಳನ್ನು ಅರ್ಪಿಸಿ ವೀರ ಮರಣ ಹೊಂದಿದ ಯೋಧರಿಗೆ ನಮನ ಸಲ್ಲಿಸಲಾಯಿತು.
ಬಳಿಕ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ಶಶಿಕಾಂತ್ ಸೆಂಥಿಲ್ ಹಲವು ಶಕ್ತಿಗಳು ಭಾರತೀಯರನ್ನು ವಿಭಜಿಸಲು ಪ್ರಯತ್ನಿಸುತ್ತಿದೆ. ಈ ಶಕ್ತಿಗಳ ವಿರುದ್ಧ ಹೋರಾಟ ನಡೆಸಬೇಕಿದೆ. ಈ ಮಧ್ಯೆ ದೇಶರಕ್ಷಣೆಯಲ್ಲಿ ತೊಡಗಿಸಿಕೊಂಡಿರುವ ಸೈನಿಕರ ಬಲಿದಾನಗಳು ನಮಗೆ ಸ್ಪೂರ್ತಿಯಾಗಬೇಕು ಎಂದರು.
ವಿಧಾನಪರಿಷತ್ ಮಾಜಿ ಸದಸ್ಯ ಗಣೇಶ್ ಕಾರ್ಣಿಕ್ ಮಾತನಾಡಿ ಸೈನಿಕರು ಗಡಿಭಾಗದಲ್ಲಿ ವರ್ಷದ 365 ದಿನ, 24 ಗಂಟೆಗಳ ಕಾಲ 58 ಡಿಗ್ರಿ ಸೆಲ್ಸಿಯಸ್ ಉಷ್ಣತೆಯಲ್ಲಿಯೂ ದೇಶದ ಕಾವಲು ಕಾಯುತ್ತಾ ದೇಶಸೇವೆ ಮಾಡುತ್ತಾರೆ. ಅವರ ಸ್ಮರಣೆ ಕೇವಲ ಒಂದು ದಿನಕ್ಕೆ ಮಾತ್ರ ಸೀಮಿತವಾಗಬಾರದು. ಅವರ ದೇಶಸೇವೆ ನಮಗೆ ಸ್ಪೂರ್ತಿಯಾಗಬೇಕಿದೆ ಎಂದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರವಿಕಾಂತೇ ಗೌಡ ಮಾತನಾಡಿ ಸೈನಿಕರ ಬಲಿದಾನವನ್ನು ಪ್ರತಿದಿನವೂ ನೆನಪಿಸುವ ಕಾರ್ಯವಾಗಬೇಕು. ದೇಶಕ್ಕೆ ಯಾವ ರೀತಿಯಲ್ಲಿ ಕೊಡುಗೆ ನೀಡಬಹುದು ಎಂಬುದನ್ನು ಚಿಂತಿಸಬೇಕು ಎಂದರು.
ಸಂಘದ ಮಾಜಿ ಅಧ್ಯಕ್ಷ ಎನ್.ಎಸ್. ಭಂಡಾರಿ ಮಾತನಾಡಿ, 1971ನೇ ಇಸವಿ ಡಿ.16ರಂದು ಭಾರತವು ಪಾಕಿಸ್ಥಾನದ ವಿರುದ್ಧ ವಿಜಯ ಸಾಧಿಸಿದ ದಿನವಿದು. ಅಂದು ಭಾರತೀಯ ಯೋಧರು ಮಾಡಿದ ತ್ಯಾಗ ಮತ್ತು ಬಲಿದಾನವನ್ನು ನೆನಪಿಸುವ ನಿಟ್ಟಿನಲ್ಲಿ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದರು.
ಸಂಘಟನಾಧ್ಯಕ್ಷ ದೀಪಕ್ ಅಡ್ಯಂತಾಯ ಸ್ವಾಗತಿಸಿದರು. ಕಾರ್ಯಕ್ರಮದಲ್ಲಿ ಪೊಲೀಸ್ ಆಯುಕ್ತ ಟಿ.ಆರ್. ಸುರೇಶ್, ಜಿಪಂ ಸಿಇಒ ಡಾ. ಸೆಲ್ವಮಣಿ, ಮನಪಾ ಆಯುಕ್ತ ಮುಹಮ್ಮದ್ ನಝೀರ್, ಕೆ.ದೇವದಾಸ ಭಂಡಾರಿ, ರೋಹಿನಾತ್ ಪಡೆ, ವಿಕ್ರಮ್ ದತ್ತ, ಎ.ಎಂ. ಐರನ್, ಬಾಲಕೃಷ್ಣ ಎನ್., ರಾಘವೇಂದ್ರ ಭಟ್, ಮಾಜಿ ಸೈನಿಕ ಎಂ.ಸಿ. ಭದ್ರಯ್ಯ ಉಪಸ್ಥಿತರಿದ್ದರು.