ಬಡ ಮುಸ್ಲಿಮರಿಗೆ 1 ಲಕ್ಷ ಮನೆ ನಿರ್ಮಾಣದ ಗುರಿ: ಸಚಿವ ಝಮೀರ್ ಅಹ್ಮದ್

ಬೆಂಗಳೂರು, ಡಿ.16: ವಕ್ಫ್ ಆಸ್ತಿ ವ್ಯಾಪ್ತಿಯಲ್ಲಿಯೇ ರಾಜ್ಯದ ಬಡ ಮುಸ್ಲಿಮರಿಗೆ ಸೂರು ಕಲ್ಪಿಸಲು ಮುಂದಾಗಿದ್ದು, ಈ ಸಂಬಂಧ ಒಂದು ಲಕ್ಷ ಮನೆ ನಿರ್ಮಾಣದ ಗುರಿ ಹೊಂದಲಾಗಿದೆ ಎಂದು ರಾಜ್ಯ ಹಜ್ ಮತ್ತು ವಕ್ಫ್ ಸಚಿವ ಬಿ. ಝೆಡ್.ಝಮೀರ್ ಅಹ್ಮದ್ ಖಾನ್ ತಿಳಿಸಿದರು.
ರವಿವಾರ ನಗರದ ಕನ್ನಿಂಗ್ ಹ್ಯಾಮ್ ರಸ್ತೆಯಲ್ಲಿರುವ ವಕ್ಫ್ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಬೆಂಗಳೂರು ಸೇರಿದಂತೆ ರಾಜ್ಯದೆಲ್ಲೆಡೆ ಕಬಳಿಕೆ ಆಗಿದ್ದ ವಕ್ಫ್ ಆಸ್ತಿಯನ್ನು ವಶಕ್ಕೆ ಪಡೆಯಲಾಗಿದೆ. ಈ ಆಸ್ತಿಯಲ್ಲಿಯೇ 1 ಲಕ್ಷ ಮನೆಗಳನ್ನು ನಿರ್ಮಾಣ ಮಾಡುವ ಗುರಿ ಹೊಂದಲಾಗಿದ್ದು, ಈ ಸಂಬಂಧ ಸಮಿತಿಯೊಂದನ್ನು ರಚಿಸಿ ಸರ್ವೆ ಮಾಡಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ನಿರ್ಗತಿಕ ಮತ್ತು ಬಡ ಮುಸ್ಲಿಮರಿಗೆ ಸೂರಿನ ಅವಶ್ಯಕತೆ ಇದೆ. ಹೀಗಾಗಿ, ಪ್ರತಿ ತಾಲೂಕು ಮತ್ತು ನಗರ ವ್ಯಾಪ್ತಿಯಲ್ಲಿ ಬಹು ಮಹಡಿ ಕಟ್ಟಡಗಳನ್ನು ನಿರ್ಮಿಸಿ, 330 ಅಡಿ ಮತ್ತು 180 ಅಡಿ ಜಾಗದ ಮನೆಗಳನ್ನು ವಕ್ಫ್ ವಸತಿ ಸಮಿತಿಯಿಂದಲೇ ನಿರ್ಮಿಸಲಾಗುವುದು. ಈ ಬಗ್ಗೆ ಮುಖ್ಯಮಂತ್ರಿಗಳೊಂದಿಗೆ ಶೀಘ್ರದಲ್ಲಿಯೇ ಚರ್ಚೆ ನಡೆಸಲಾಗುವುದು ಎಂದು ಝಮೀರ್ ತಿಳಿಸಿದರು.
ಕೊಳಗೇರಿ ಪ್ರದೇಶದಲ್ಲಿ ವಾಸ ಮಾಡುವ ಮತ್ತು ಬೀದಿಯಲ್ಲಿ ಮಲಗುವ ಬಡ ಮುಸ್ಲಿಮರಿಗೆ ಈ ಯೋಜನೆ ತಲುಪಬೇಕು. ಈ ನಿಟ್ಟಿನಲ್ಲಿ ಈಗಾಗಲೇ ಸಮಿತಿಯ ಸದಸ್ಯರು ಜಾಗ ಮತ್ತು ಫಲಾನುಭವಿಗಳನ್ನು ಗುರುತಿಸುತ್ತಿದ್ದಾರೆ. ಜೊತೆಗೆ ಸರಕಾರಕ್ಕೂ ಶೀಘ್ರದಲ್ಲಿಯೇ ಮಾಹಿತಿ ನೀಡಲಿದ್ದೇನೆ ಎಂದು ನುಡಿದರು.
ಒತ್ತುವರಿ ತೆರವು: ಬೆಂಗಳೂರು ಸೇರಿದಂತೆ ಹಲವು ವಕ್ಫ್ ಆಸ್ತಿ ಒತ್ತುವರಿ ತೆರವು ಕಾರ್ಯ ಮುಂದುವರೆದಿದೆ. ಪ್ರಭಾವಿಗಳು ಒತ್ತುವರಿ ಮಾಡಿದ್ದರೂ, ಬಿಡುವುದಿಲ್ಲ. ಅಷ್ಟೇ ಅಲ್ಲದೆ, ಮೊದಲು ಪ್ರಭಾವಿಗಳ ಜಾಗವನ್ನು ತೆರವುಗೊಳಿಸಬೇಕು. ಆ ನಂತರ, ಸಾಮಾನ್ಯ ವರ್ಗದವರು ಒತ್ತುವರಿ ಮಾಡಿದ್ದರೆ ತೆರವುಗೊಳಿಸುವಂತೆ ಈಗಾಗಲೇ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿರುವುದಾಗಿ ತಿಳಿಸಿದರು.







