ಮಂಗಳೂರು: ಇಂದು ಹಿರಿಯ ನ್ಯಾಯವಾದಿ ಇಂದಿರಾ ಜೈಸಿಂಗ್ ರಿಂದ ಬಿ.ವಿ. ಕಕ್ಕಿಲಾಯ ಪ್ರೇರಿತ ಉಪನ್ಯಾಸ

ಮಂಗಳೂರು, ಡಿ. 17: ಸರ್ವೋಚ್ಚ ನ್ಯಾಯಾಲಯದ ಹಿರಿಯ ಮಹಿಳಾ ನ್ಯಾಯವಾದಿ ಮತ್ತು ಭಾರತದ ಮಾಜಿ ಹೆಚ್ಚುವರಿ ಸಾಲಿಸಿಟರ್ ಜನರಲ್ ಇಂದಿರಾ ಜೈಸಿಂಗ್ ಅವರು ಇಂದು (ಡಿ.17) ಮಂಗಳೂರಿನಲ್ಲಿ ಬಿ.ವಿ. ಕಕ್ಕಿಲಾಯ ಪ್ರೇರಿತ ಉಪನ್ಯಾಸ ನೀಡಲಿದ್ದಾರೆ.
ಉಪನ್ಯಾಸ ಭಾಗವಾಗಿ ಪದ್ಮಶ್ರೀ ಪುರಸ್ಕೃತೆ ಇಂದಿರಾ ಜೈಸಿಂಗ್ ಅವರು ನಗರದ ಹಂಪನಕಟ್ಟೆಯಲ್ಲಿರುವ ವಿಶ್ವವಿದ್ಯಾನಿಲಯ ಕಾಲೇಜಿನ ಡಾ. ಶಿವರಾಮ ಕಾರಂತ ಸಭಾಭವನದಲ್ಲಿ, ಭಾರತದಲ್ಲಿ ಲಿಂಗ ನ್ಯಾಯದ ಕುರಿತು ಮಾತನಾಡಲಿದ್ದಾರೆ ಎಂದು ಬೆಂಗಳೂರಿನ ಹೊಸತು, ಎಂ.ಎಸ್ ಕೃಷ್ಣನ್ ಸ್ಮಾರಕ ಪ್ರತಿಷ್ಟಾನ, ಬೆಂಗಳೂರು, ಸಮದರ್ಶಿ ವೇದಿಕೆ ಮಂಗಳೂರು ಪರವಾಗಿ ಡಾ. ಶ್ರೀನಿವಾಸ ಕಕ್ಕಿಲಾಯ ಅವರು ತಿಳಿಸಿದ್ದಾರೆ.
ಈ ಕಾರ್ಯಕ್ರಮವು ಮಂಗಳೂರು ವಿಶ್ವವಿದ್ಯಾನಿಲಯ ಕಾಲೇಜು ಮತ್ತು ಮಂಗಳೂರು ವಿಶ್ವವಿದ್ಯಾನಿಲಯ ಸಂಜೆ ಕಾಲೇಜು ಸಹಯೋಗದಲ್ಲಿ ನಡೆಯಲಿದೆ. ಬೆಂಗಳೂರು ವಿಶ್ವವಿದ್ಯಾನಿಲಯದಲ್ಲಿ ಪದವಿ ಮತ್ತು ಬಾಂಬೆ ವಿಶ್ವವಿದ್ಯಾನಿಲಯದಲ್ಲಿ ಎಲ್‌ಎಲ್‌ಎಂ ಪೂರ್ಣಗೊಳಿಸಿದ ನಂತರ ಇಂದಿರಾ ಜೈಸಿಂಗ್ ಅವರು 1970ರಲ್ಲಿ ಲಂಡನ್‌ನ ಅಡ್ವಾನ್ಸ್ಡ್ ಲೀಗಲ್ ಸ್ಟಡೀಸ್ ಸಂಸ್ಥೆಯಲ್ಲಿ ಫೆಲೊಶಿಪ್ ಮುಂದುವರಿಸಿದರು.
1986ರಲ್ಲಿ ಬಾಂಬೆ ಉಚ್ಚ ನ್ಯಾಯಾಲಯದ ಹಿರಿಯ ನ್ಯಾಯವಾದಿಯಾಗಿ ನೇಮಕಗೊಳ್ಳುವ ಮೂಲಕ ಈ ಸ್ಥಾನಕ್ಕೇರಿದೆ ಮೊದಲ ಮಹಿಳೆ ಎಂಬ ಖ್ಯಾತಿಯನ್ನು ಪಡೆದರು. 2009ರಲ್ಲಿ ಅವರು ಭಾರತದ ಹೆಚ್ಚುವರಿ ಸಾಲಿಸಿಟರ್ ಜನರಲ್ ಆಗಿ ನೇಮಕಗೊಂಡರು. ಸಾಮಾಜಿಕ ನ್ಯಾಯ, ಮಾನವ ಹಕ್ಕುಗಳು ಮತ್ತು ಮಹಿಳಾ ಸಮಾನತೆಗಾಗಿ ಅವರು ಅರ್ಧ ಶತಮಾನಕ್ಕೂ ಹೆಚ್ಚು ಕಾಲ ದುಡಿದಿದ್ದಾರೆ.
1980ರಲ್ಲಿ ಜೈಸಿಂಗ್ ಅವರು ಲಾಯರ್ಸ್ ಕಲೆಕ್ಟಿವ್ ಸಂಘವನ್ನು ಸ್ಥಾಪಿಸಿದರು. ಈ ಸಂಘವು ನಾಗರಿಕ ಹಕ್ಕುಗಳು, ಕಾರ್ಮಿಕರ ಹಕ್ಕುಗಳು, ಮಹಿಳೆಯರು ಮತ್ತು ಎಲ್‌ಜಿಬಿಟಿಕ್ಯೂ, ಕೌಟುಂಬಿಕ ಹಿಂಸಾಚಾರ, ಕೆಲಸದ ಸ್ಥಳದಲ್ಲಿ ಲೈಂಗಿಕ ಕಿರುಕುಳ ಇತ್ಯಾದಿಗಳು ವಿರುದ್ಧ ಕಾನೂನು ತರುವಲ್ಲಿ ಗಮನಾರ್ಹ ಪಾತ್ರವನ್ನು ನಿರ್ವಹಿಸಿದೆ.
2017ರ ಮೇನಲ್ಲಿ ಜೈಸಿಂಗ್ ಅವರನ್ನು ಮ್ಯಾನ್ಮಾರ್‌ನಲ್ಲಿ ರೊಹಿಂಗ್ಯಾ ಮುಸಲ್ಮಾನರ ಮೇಲಾಗುತ್ತಿದ್ದ ಜನಾಂಗೀಯ ಹಿಂಸಾಚಾರದ ತನಿಖೆ ನಡೆಸಲು ರಚಿಸಲಾದ ವಿಶ್ವಸಂಸ್ಥೆಯ ತಂಡದ ಮುಖ್ಯಸ್ಥೆಯನ್ನಾಗಿ ನೇಮಿಸಲಾಯಿತು. ತ್ರಿವಳಿ ತಲಾಕ್, ಮಹಿಳೆಯರಿಗೆ ಶಬರಿಮಲೆ ದೇವಸ್ಥಾನಕ್ಕೆ ಪ್ರವೇಶ, ತನ್ನಿಷ್ಟದ ಧರ್ಮವನ್ನು ಆರಿಸುವ ಹದಿಯಾಳ ಹೋರಾಟ, ಭೋಪಾಲ್ ಅನಿಲ ಸೋರಿಕೆಯ ಸಂತ್ರಸ್ತರು, ಕೆಲಸದ ಸ್ಥಳಗಳಲ್ಲಿ ಲೈಂಗಿಕ ಕಿರುಕುಳ ಹಾಗೂ ಇತರ ಅನೇಕ ಪ್ರಕರಣಗಳಲ್ಲಿ ಆಕೆ ಯಶಸ್ವಿಯಾಗಿ ತನ್ನ ನಿಲುವನ್ನು ಸಮರ್ಥಿಸಿಕೊಂಡಿದ್ದಾರೆ. ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
2018ರ ಫಾರ್ಚ್ಯೂನ್‌ನ 50 ಅತ್ಯುತ್ತಮ ನಾಯಕರ ಪಟ್ಟಿಯಲ್ಲಿ ಭಾರತದ ಕಡುಬಡವರ ಧ್ವನಿಯಾಗಿ ಜೈಸಿಂಗ್ ಅವರು 20ನೇ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಈ ಪಟ್ಟಿಯಲ್ಲಿ ಏಕೈಕ ನ್ಯಾಯವಾದಿ ಆಕೆಯಾಗಿದ್ದಾರೆ. ಅನೇಕ ಪುಸ್ತಕಗಳನ್ನೂ ಬರೆದಿರುವ ಜೈಸಿಂಗ್ ಅವರು ಪೆನ್ ಕಾನೂನು ವಿಶ್ವವಿದ್ಯಾನಿಲಯ ಮತ್ತು ಕೊಲಂಬಿಯಾ ವಿಶ್ವವಿದ್ಯಾನಿಲಯದ ಸಂದರ್ಶಕ ವಿದ್ವಾಂಸರಾಗಿದ್ದಾರೆ. 2005ರಲ್ಲಿ ಜೈಸಿಂಗ್ ಅವರಿಗೆ ಪದ್ಮಶ್ರೀ ನೀಡಿ ಗೌರವಿಸಲಾಗಿದೆ.