‘ಚರ್ಚ್ ನಾಶ ಮಾಡಿದ ಟಿಪ್ಪುವಿನ ಜಯಂತಿಯಲ್ಲಿ ನಾನು ಭಾಗವಹಿಸದಂತೆ ದೇವರೇ ಮಾಡಿದ್ದಾರೆ’
ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ವೀಡಿಯೊ ವೈರಲ್

ಉಡುಪಿ, ಡಿ.17: ‘ರಾಜ್ಯ ಸರಕಾರ ಟಿಪ್ಪು ಜಯಂತಿ ಆಚರಣೆ ಮಾಡಿರುವುದು ಸರಿಯೋ ತಪ್ಪೋ. ಆದರೆ ಟಿಪ್ಪು ಸೈನ್ಯ ಪೇತ್ರಿಯ ಹಿಂದಿನ ಚರ್ಚ್ ನಾಶ ಮಾಡಿದಕ್ಕಾಗಿ ನಾನು ಶಾಸಕ ಹಾಗೂ ಮಂತ್ರಿಯಾಗಿದ್ದಾಗ ಟಿಪ್ಪು ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿದಂತೆ ದೇವರು ಮಾಡಿದ್ದಾರೆ’ ಎಂದು ಉಡುಪಿ ಜಿಲ್ಲಾ ಮಾಜಿ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಹೇಳಿದ್ದಾರೆ.
ಡಿ.10ರಂದು ನಡೆದ ಬ್ರಹ್ಮಾವರ ಸಮೀಪದ ಪೇತ್ರಿಯ ಸೈಂಟ್ ಪೀಟರ್ಸ್ ಚರ್ಚ್‌ನ ಸುವರ್ಣ ಮಹೋತ್ಸವ ಸಮಾರಂಭದಲ್ಲಿ ಈ ಕುರಿತು ಮಾತನಾಡು ತ್ತಿರುವ ಅವರ ವೀಡಿಯೊ ತುಣುಕು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ಅವರು ತಮ್ಮ ಭಾಷಣದಲ್ಲಿ ‘ಪೇತ್ರಿಯ ಹಿಂದಿನ ಚರ್ಚ್‌ನ್ನು ಟಿಪ್ಪು ಸುಲ್ತಾನ್‌ನ ಸೈನ್ಯ ನಾಶ ಮಾಡಿತ್ತು ಎಂಬ ಪ್ರಸ್ತಾಪವನ್ನು ಸಮಾರಂಭ ದಲ್ಲಿ ಮಾಡಲಾಯಿತು. ನಾನು ಶಾಸಕ ಹಾಗೂ ಮಂತ್ರಿಯಾಗಿದ್ದಾಗ ನಮ್ಮ ಸರಕಾರ ಸರಿಯೋ ತಪ್ಪೋ ಟಿಪ್ಪು ಜಯಂತಿಯನ್ನು ಆಚರಣೆ ಮಾಡಿತ್ತು. ಆದರೆ ಆ ಟಿಪ್ಪು ಜಯಂತಿಯಲ್ಲಿ ಭಾಗವಹಿಲು ನನಗೆ ಅವಕಾಶವೇ ಸಿಕ್ಕಿರಲಿಲ್ಲ. ಇದು ಟಿಪ್ಪು ಸೈನ್ಯ ಈ ಚರ್ಚ್‌ನ್ನು ಆಗ ನಾಶ ಮಾಡಿರುವುದಕ್ಕೆ ದೇವರು ನನ್ನನ್ನು ಹೋಗದಾಗೆ ಮಾಡಿದ್ದಾರೆ ಎಂದರು.
2015ರಲ್ಲಿ ಟಿಪ್ಪು ಜಯಂತಿ ಆಚರಣೆಯನ್ನು ಸರಕಾರ ಆರಂಭಿಸಿದಾಗ ಪ್ರಮೋದ್ ಮಧ್ವರಾಜ್ ಉಡುಪಿ ಕ್ಷೇತ್ರದ ಶಾಸಕರಾಗಿದ್ದರು. ಉಡುಪಿ ಬನ್ನಂಜೆ ಯಲ್ಲಿ ಜಿಲ್ಲಾಡಳಿತ ಆಯೋಜಿಸಿದ್ದ ಟಿಪ್ಪು ಜಯಂತಿ ಕಾರ್ಯಕ್ರಮಕ್ಕೆ ಪ್ರಮೋದ್ ಗೈರುಹಾಜರಾಗಿದ್ದರು.
2016ರ ಟಿಪ್ಪು ಜಯಂತಿ ಆಚರಣೆ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಪ್ರಮೋದ್ ಮಧ್ವರಾಜ್, ಬ್ರಹ್ಮಗಿರಿಯ ಲಯನ್ಸ್ ಭವನದಲ್ಲಿ ನಡೆದ ಟಿಪ್ಪು ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸದೆ ಗೈರು ಹಾಜರಾಗಿದ್ದರು. ಪೂರ್ವನಿಗದಿಯಾಗಿದ್ದ ಟಿಪ್ಪು ಜಯಂತಿ ದಿನದಂದೇ ಬೆಂಗಳೂರಿಗೆ ತೆರಳಿದ್ದ ಸಚಿವರ ವಿರುದ್ಧ ಆ ಸಂದರ್ಭದಲ್ಲಿ ಸಾರ್ವಜನಿಕರು ಅಸಮಧಾನ ವ್ಯಕ್ತಪಡಿಸಿದ್ದರು.
ಅದೇ ರೀತಿ 2017ರಲ್ಲಿ ಮಣಿಪಾಲದ ರಜತಾದ್ರಿಯಲ್ಲಿ ಜಿಲ್ಲಾಡಳಿತ ಹಮ್ಮಿ ಕೊಂಡಿದ್ದ ಟಿಪ್ಪು ಜಯಂತಿಯನ್ನು ಉದ್ಘಾಟಿಸಬೇಕಾಗಿದ್ದ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್, ಉಡುಪಿಯಲ್ಲಿದ್ದುಕೊಂಡು ಕಾರ್ಯಕ್ರಮಕ್ಕೆ ಆಗಮಿಸದೆ ಗೈರು ಹಾಜರಾಗುವ ಮೂಲಕ ವಿವಾದಕ್ಕೆ ಕಾರಣರಾಗಿದ್ದರು. ಮಧ್ಯಾಹ್ನ 12ಗಂಟೆಗೆ ಮುಗಿದ ಟಿಪ್ಪು ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸದ ಪ್ರಮೋದ್, 12.30ಕ್ಕೆ ರಜತಾದ್ರಿಯಲ್ಲೇ ನಡೆದ ಅನಿಲಭಾಗ್ಯ ಯೋಜನೆ ಕುರಿತ ಸಭೆಯಲ್ಲಿ ಭಾಗವಹಿಸುವ ಮೂಲಕ ಅವರ ವಿರುದ್ಧ ಅಸಮಧಾನ ವ್ಯಕ್ತವಾಗಿತ್ತು.