ಉಡುಪಿ: ಆಹಾರ ಶುದ್ಧತೆ ಪರಿಶೀಲಿಸಲು ಆಗ್ರಹ
ಉಡುಪಿ, ಡಿ.17: ಜಿಲ್ಲಾಡಳಿತ, ಆಹಾರ ಇಲಾಖೆ ಅನ್ನಪ್ರಸಾದ ವಿತರಣಾ ಕೇಂದ್ರಗಳಿಗೆ ಆಹಾರ ಶುದ್ಧತೆ, ಶುಚಿತ್ವ ಪರಿಶೀಲನೆಗೆ ಆಹಾರ ಅಧಿಕಾರಿಗಳ ಗಸ್ತು ನಿಯೋಜಿಸಬೇಕೆಂದು ಉಡುಪಿ ಜಿಲ್ಲಾ ನಾಗರಿಕ ಸಮಿತಿ ಒತ್ತಾಯಿಸಿದೆ.
ಧಾರ್ಮಿಕ ದತ್ತಿ ಇಲಾಖೆಗೆ ಒಳಪಟ್ಟ ಹಾಗೂ ಹತ್ತು ಸಮಸ್ತರ ಆಡಳಿತ ದಿಂದ ನಡೆಸಲ್ಪಡುವ ದೇವಸ್ಥಾನಗಳಲ್ಲಿ ಪ್ರಸಾದ ರೂಪದಲ್ಲಿ ಭಕ್ತರಿಗೆ ಅನ್ನದಾನ ನಡೆಯುವ ಧಾರ್ಮಿಕ ಸಂಪ್ರದಾಯ ಇದೆ. ಕೆಲವು ಕಡೆಗಳಲ್ಲಿ ಪಾಕಶಾಲೆ, ನೀರಿನ ಸ್ಥಾವರಗಳು ಶುಚಿತ್ವದಲ್ಲಿ ಇರುವುದಿಲ್ಲ. ಅಲ್ಲದೆ ಜೇಡರ ಬಲೆಗಳಿಂದ ಕಸ ಕೀಟಗಳು ಜೀವ ಜಂತುಗಳು ಆಹಾರದ ಪಾತ್ರೆಗಳಿಗೆ ಸೇರುವ ಸಾಧ್ಯತೆ ಇರುತ್ತದೆ. ಮಲೀನ ನೀರು ಅಡಿಗೆ ತಯಾರಿಕೆಗೆ ಬಳಕೆಯಾಗುತ್ತದೆ.
ಕಲಾಯಿ ಹಾಕದ ತಾಮ್ರದ ಪಾತ್ರೆಗಳಲ್ಲಿ ಅಡುಗೆ ತಯಾರಿಸಿದಾಗ ಆಹಾರ ವಿಷ ಆಹಾರವಾಗುವ ಸಾಧ್ಯತೆ ಇರುತ್ತದೆ. ಈ ಹಿಂದೆ ಅನ್ನ ಪ್ರಸಾದ ವಿಷ ಆಹಾರದಿಂದ ದುರಂತಗಳು ಸಂಭವಿಸಿರುವುದು ಸುದ್ಧಿಯಾಗಿದೆ. ಬಾಣಸಿಗರು ಗುಟ್ಕ ಮದ್ಯಪಾನ ಸೇವಿಸಿ ಅಡಿಗೆ ತಯಾರಿಸುವುದು ಇರುತ್ತದೆ. ಹೀಗಾಗಿ ಈ ಬಗ್ಗೆ ಮುಂಜಾಗ್ರತ ಕ್ರಮ ತೆಗೆದುಕೊಳ್ಳಬೇಕೆಂದು ಸಮಿತಿಯ ಪದಾಧಿ ಕಾರಿಗಳಾದ ನಿತ್ಯಾನಂದ ಒಳಕಾಡು, ತಾರಾನಾಥ್ ಮೇಸ್ತ ಶಿರೂರು, ವಿನಯ ಚಂದ್ರ ಸಾಸ್ತಾನ ಪ್ರಕಟಣೆಯಲ್ಲಿ ಒತ್ತಾಯಿಸಿದ್ದಾರೆ.