ಶ್ರೀನಿವಾಸ ಆಸ್ಪತ್ರೆಯಲ್ಲಿ ಇಇಜಿ ಯಂತ್ರ ಸೌಲಭ್ಯ, ರಿಯಾಯಿತಿ ದರದ ಆರೋಗ್ಯ ತಪಾಸಣಾ ಶಿಬಿರ

ಮಂಗಳೂರು, ಡಿ.17:ಶ್ರಿ ನಿವಾಸ ವೈದ್ಯಕೀಯ ವಿಜ್ಞಾನ ಮತ್ತು ಸಂಶೋಧನಾ ಕೇಂದ್ರದಲ್ಲಿ ನೂತನ ಇಇಜಿ ಯಂತ್ರವನ್ನು ಶ್ರೀನಿವಾಸ ವಿಶ್ವ ವಿದ್ಯಾನಿಲಯದ ಕುಲಪತಿಗಳಾದ ಎ.ರಾಘವೇಂದ್ರ ರಾವ್ ಸೋಮವಾರ ಉದ್ಘಾಟಿಸಿದರು.
ಇದೇ ಸಂದರ್ಭದಲ್ಲಿ ಕ್ರಿಸ್ಮಸ್ ಮತ್ತು ಹೊಸ ವರ್ಷದ ಕೊಡುಗೆಯಾಗಿ ರಿಯಾಯಿತಿ ದರದ ಆರೋಗ್ಯ ತಪಾಸಣಾ ಸೌಲಭ್ಯವನ್ನು ನೀಡಲಾಗುತ್ತಿದೆ ಎಂದು ರಾಘವೇಂದ್ರ ರಾವ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ನೂತನ ಇ.ಇ.ಜಿ ಯಂತ್ರ ಇಲೆಕ್ಟೊ ಎನ್ಸೆಫೆಲೋಗ್ರಾಫಿ ಮೆದುಳಿನಲ್ಲಿ ಉಂಟಾಗುವ ವಿದ್ಯುತ್ ಚಟುವಟಿಕೆಗಳನ್ನು ಪತ್ತೆ ಹಚ್ಚಲು ಬಳಸಲಾಗುತ್ತದೆ. ಇತ್ತೀಚಿನ ಡಿಜಿಟಲ್ ತಂತ್ರಜ್ಞಾನದಿಂದಾಗಿ ಮಿದುಳಿನ ಚಟುವಟಿಕೆಗಳನ್ನು ಇಇಜಿಯಿಂದ ದಾಖಲಿಸಲಾಗುತ್ತದೆ. ಇದರಿಂದ ಬಹುರೀತಿಯ ವಿಶ್ಲೇಷಣೆ ಸಾಧ್ಯವಾಗುತ್ತದೆ ಮತ್ತು ಯಾವೂದೇ ಕ್ಲಿನಿಕಲ್ ಘಟನೆಯ ಬಗ್ಗೆ ವೀಡಿಯೊ ಕೂಡಾ ಲಭ್ಯವಾಗುತ್ತದೆ. ಮೂರ್ಛೆರೋಗ, ಲಕ್ವ ಸೇರಿದಂತೆ ಮೆದುಳಿಗೆ ಸಂಬಂಧಿಸಿದ ರೋಗ ಪತ್ತೆ ಹಾಗೂ ಚಿಕಿತ್ಸೆಗೆ ಸಹಾಯವಾಗಲಿದೆ. ಕಳೆದ 30-40 ವಷಗಳಲ್ಲಿ ಅಭಿವೃದ್ಧಿ ಪಡಿಸಲಾದ ಮಿದುಳಿನ ಬಗ್ಗೆ ಹೆಚ್ಚಿನ ಮಾಹಿತಿ ಸಂಗ್ರಹಿಸುವ ಸುಧಾರಿತ ಸಾಧನವಾಗಿದೆ ಎಂದರು.
ಶ್ರೀನಿವಾಸ ವೈದ್ಯ ವಿಜ್ಞಾನ ಸಂಸ್ಥೆ ಮತ್ತು ಸಂಶೋಧನಾ ಕೇಂದ್ರ ಶಾಮರಾವ್ ಪ್ರತಿಷ್ಠಾನದಿಂದ ಪ್ರಾಯೋಜಿಸಲ್ಪಟ್ಟ ಪ್ರಮುಖ ವೃತ್ತಿಪರ ಕಾಲೇಜು ಆಗಿದ್ದು ಮೂವತ್ತು ವರ್ಷಗಳ ಕಾಲ ಕಾರ್ಯಾಚರಣೆಯ ದಾಖಲೆಯನ್ನು ಹೊಂದಿದೆ. ಪ್ರತಿಷ್ಠಾನವು 14 ಪ್ರಾಖ್ಯಾತ ಶಿಕ್ಷಣ ಸಂಸ್ಥೆಗಳನ್ನು ನಡೆಸುತ್ತಿದೆ. ಖ್ಯಾತ ವೈದ್ಯರಾದ ಸಂಸ್ಥೆಯಲ್ಲಿ ನುರಿತ, ಅನುಭವಿ ವೈದ್ಯರ ತಂಡವಿದೆ ಎಂದು ರಾಘವೇಂದ್ರ ರಾವ್ ತಿಳಿಸಿದರು.
ರಿಯಾಯಿತಿ ದರದ ಸಮಗ್ರ ಆರೋಗ್ಯ ತಪಾಸಣಾ ಕೊಡುಗೆ
ಹೊಸ ವರ್ಷ ಹಾಗೂ ಕ್ರಿಸ್ಮಸ್ ಹಬ್ಬದ ಪ್ರಯುಕ್ತ ರಿಯಾಯಿತಿ ದರದ ಸಮಗ್ರ ಆರೋಗ್ಯ ತಪಾಸಣಾ ಶಿಬಿರವನ್ನು ಶ್ರೀನಿವಾಸ ವೈದ್ಯ ವಿಜ್ಞಾನ ಮತ್ತು ಸಂಶೋಧನಾ ಕೇಂದ್ರದಲ್ಲಿ ನಡೆಸಲಾಗುವುದು.
ಈ ತಪಾಸಣೆಯ ವೆಚ್ಚ 4,000 ರೂ. ಬದಲಾಗಿ 3,000 ರೂ.ಗಳಿಗೆ 2019ನೆ ಜನವರಿ 30ರವರೆಗೆ ಮಾಡಲಾಗುತ್ತದೆ. ಈ ಆರೊಗ್ಯ ತಪಾಸಣೆಯಲ್ಲಿ ಸಮಗ್ರ ರಕ್ತ ತಪಾಸಣೆ, ರಕ್ತದೊತ್ತಡ, ಕಿಡ್ನಿ ಸ್ಥಿತಿ ಗತಿ, ಲಿವರ್ ಕಾರ್ಯಾಚರಣೆ, ಮೂತ್ರ ಪರೀಕ್ಷೆ, ಟಿ.ಎಸ್.ಎಚ್, ಕ್ಯಾಲ್ಸಿಯಂ, ಫಾಸ್ಫರಸ್, ಇ.ಸಿ.ಜಿ, ಎಕೋ, ಕಲರ್ ಡಾಪ್ಲರ್, ಟಿ.ಎಂ.ಟಿ. ಹೃದಯ ಭಾಗದ ಎಕ್ಸರೇ, ಹೊಟ್ಟೆಯ ಭಾಗದ ಅಲ್ಟ್ರಾ ಸೌಂಡ್, ವರದಿಯ ಅನ್ವಯ ವೈದ್ಯರ ಸಲಹೆ ಸೌಲಭ್ಯಗಳನ್ನು ಈ ಯೋಜನೆಯಲ್ಲಿ ಅಳವಡಿಸಲಾಗಿದೆ ಎಂದು ಶಾಮರಾವ್ ಪ್ರತಿಷ್ಠಾನದ ಉಪಾಧ್ಯಕ್ಷ ಹಾಗೂ ಶ್ರೀನಿವಾಸ ವಿಶ್ವವಿದ್ಯಾನಿಲಯದ ಸಹ ಕುಲಪತಿಗಳಾದ ಡಾ. ಎ.ಶ್ರೀನಿವಾಸರಾವ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಉದ್ಘಾಟನಾ ಕಾರ್ಯಕ್ರಮದ ಅತಿಥಿಯಾಗಿ ಭಾಗವಹಿಸಿದ ಕಾಟಿಪಳ್ಳ ಜುಮಾ ಮಸೀದಿಯ ಅಧ್ಯಕ್ಷ ಮುಹಮ್ಮದ್ ತಮೀಮ್ ಮತ್ತು ಸುದ್ದಿಗೋಷ್ಠಿಯಲ್ಲಿ ಸಂಸ್ಥೆಯ ಡೀನ್ ಡಾ.ಉದಯ ಕುಮಾರ್ ರಾವ್, ಮೆಡಿಕಲ್ ಸುಪರಿಂಟೆಂಡೆಂಟ್ ಡಾ. ಆರೀಫ್ ಮುಹಮ್ಮದ್ ಮೊದಲಾದವರು ಉಪಸ್ಥಿತರಿದ್ದರು.