ಕುಂದಾಪುರ: ಆರೋಪಿ ಪತ್ರಕರ್ತನ ನ್ಯಾಯಾಂಗ ಬಂಧನ ಅವಧಿ ವಿಸ್ತರಣೆ
ಬಾಲಕರಿಗೆ ಲೈಂಗಿಕ ದೌರ್ಜನ್ಯ ಪ್ರಕರಣ

ಉಡುಪಿ, ಡಿ.17: ಶಾಲಾ ಬಾಲಕರಿಗೆ ಲೈಂಗಿಕ ದೌರ್ಜನ್ಯ ಎಸಗಿದ ಪೋಕ್ಸೊ ಪ್ರಕರಣದ ಆರೋಪಿ ಕುಂದಾಪುರದ ಪತ್ರಕರ್ತ ಚಂದ್ರ ಕೆ.ಹೆಮ್ಮಾಡಿ (40)ಯ ನ್ಯಾಯಾಂಗ ಬಂಧನವನ್ನು ಉಡುಪಿ ನ್ಯಾಯಾಲಯವು 14 ದಿನಗಳ ಕಾಲ ವಿಸ್ತರಿಸಿ ಆದೇಶ ನೀಡಿದೆ.
ಉಡುಪಿ ಜಿಲ್ಲಾ ಸತ್ರ ಮತ್ತು ವಿಶೇಷ ನ್ಯಾಯಾಧೀಶರ ವರ್ಗಾವಣೆ ಹಾಗೂ ಕುಂದಾಪುರ ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶರ ರಜೆಯ ಹಿನ್ನೆಲೆಯಲ್ಲಿ ಆರೋಪಿಯನ್ನು ಉಡುಪಿಯ ಹೆಚ್ಚುವರಿ ಸಿವಿಲ್ ನ್ಯಾಯಾಧೀಶರ ನ್ಯಾಯಾಲಯ ಮತ್ತು ಹೆಚ್ಚುವರಿ ಮುಖ್ಯನ್ಯಾಯಿಕ ದಂಡಾಧಿಕಾರಿಗಳ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಯಿತು.
ಬೈಂದೂರು ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಮೊದಲ ಪೋಕ್ಸೋ ಪ್ರಕರಣಕ್ಕೆ ಸಂಬಂಧಿಸಿ ಡಿ. 3ರಿಂದ ನ್ಯಾಯಾಂಗ ಬಂಧನದಲ್ಲಿದ್ದ ಆರೋಪಿ ಚಂದ್ರ ಹೆಮ್ಮಾಡಿಯ 14 ದಿನಗಳ ನ್ಯಾಯಾಂಗ ಬಂಧನ ಅವಧಿ ಇಂದಿಗೆ ಪೂರ್ಣಗೊಂಡಿದ್ದು, ಈ ಹಿನ್ನೆಲೆಯಲ್ಲಿ ಹಿರಿಯಡ್ಕ ಜಿಲ್ಲಾ ಕಾರಾಗೃಹದಲ್ಲಿದ್ದ ಆರೋಪಿ ಯನ್ನು ಬೈಂದೂರು ಪೊಲೀಸರು ನ್ಯಾಯಾಲಯದ ಮುಂದೆ ಹಾಜರುಪಡಿಸಿದರು.
ಈ ಬಗ್ಗೆ ವಿಚಾರಣೆ ನಡೆಸಿದ ನ್ಯಾಯಾಧೀಶ ವಿ.ಎಸ್.ಪಂಡಿತ್ ಆರೋಪಿಯ ನ್ಯಾಯಾಂಗ ಬಂಧನವನ್ನು ಡಿ.31ರವರೆಗೆ ವಿಸ್ತರಿಸಿ ಆದೇಶ ನೀಡಿದರು. ಈ ಸಂದರ್ಭದಲ್ಲಿ ಜಿಲ್ಲಾ ವಿಶೇಷ ಸರಕಾರಿ ಅಭಿಯೋಜಕ ವಿಜಯ ವಾಸು ಪೂಜಾರಿ ಹಾಜರಿದ್ದರು. ಆರೋಪಿ ಪರವಾಗಿ ಇಂದು ಯಾವುದೇ ವಕೀಲರು ವಕಾಲತ್ತು ಹಾಕಿಲ್ಲ ಎಂದು ತಿಳಿದುಬಂದಿದೆ.
‘ಪೋಕ್ಸೋ ಕಾಯಿದೆಯಡಿ ಒಬ್ಬ ಆರೋಪಿ ವಿರುದ್ಧ 21 ಪ್ರಕರಣಗಳು ದಾಖಲಾಗಿರುವುದು ಕರ್ನಾಟಕದ ಇತಿಹಾಸದಲ್ಲೇ ಪ್ರಥಮ ಆಗಿದ್ದು, ಈ ಪ್ರಕರಣದ ವಿಚಾರಣೆಯನ್ನು ಶೀಘ್ರವೇ ಆರಂಭಿಸುವಂತೆ ನ್ಯಾಯಾಲಯಕ್ಕೆ ಮನವಿ ಸಲ್ಲಿಸಲಾಗುವುದು’ ಎಂದು ಜಿಲ್ಲಾ ವಿಶೇಷ ಸರಕಾರಿ ಅಭಿಯೋಜಕ ವಿಜಯ ವಾಸು ಪೂಜಾರಿ ತಿಳಿಸಿದ್ದಾರೆ.
20 ಪ್ರಕರಣಗಳಿಗೆ ಬಾಡಿ ವಾರೆಂಟ್
ಆರೋಪಿ ಚಂದ್ರ ಹೆಮ್ಮಾಡಿ, ಬೈಂದೂರು ಠಾಣೆಯಲ್ಲಿ ದಾಖಲಾಗಿರುವ ಮೊದಲ ಒಂದು ಪ್ರಕರಣಕ್ಕೆ ಸಂಬಂಧಿಸಿ ಇದೀಗ ನ್ಯಾಯಾಂಗ ಬಂಧನದಲ್ಲಿದ್ದು, ಆತನ ಮೇಲಿನ ಉಳಿದ 20 ಪ್ರಕರಣಗಳ ಬಾಡಿ ವಾರೆಂಟ್‌ಗಾಗಿ ತನಿಖಾಧಿಕಾರಿ ಪರವಾಗಿ ಅಭಿಯೋಜಕರು ಇಂದು ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದರು. ಅದನ್ನು ಪುರಸ್ಕರಿಸಿದ ನ್ಯಾಯಾಧೀಶರು ಈ ಎಲ್ಲ ಪ್ರಕರಣ ಗಳ ನ್ಯಾಯಾಂಗ ಬಂಧನದ ಅವಧಿಯನ್ನು ಡಿ.31ರವರೆಗೆ ವಿಸ್ತರಿಸಿ ಆದೇಶ ನೀಡಿದರು.
ಚಂದ್ರ ಹೆಮ್ಮಾಡಿ ವಿರುದ್ಧ ಬೈಂದೂರು ಪೊಲೀಸ್ ಠಾಣೆಯಲ್ಲಿ 16, ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಮೂರು ಹಾಗೂ ಕುಂದಾಪುರ ಗ್ರಾಮಾಂತರ ಮತ್ತು ಕೊಲ್ಲೂರು ಪೊಲೀಸ್ ಠಾಣೆಗಳಲ್ಲಿ ತಲಾ ಒಂದು ಪ್ರಕರಣಗಳು ಪೋಕ್ಸೊ ಕಾಯಿದೆಯಡಿ ದಾಖಲಾಗಿದ್ದು, ಬೈಂದೂರು ವೃತ್ತ ನಿರೀಕ್ಷಕರು ಈ ಎಲ್ಲ ಪ್ರಕರಣಗಳ ತನಿಖಾಧಿಕಾರಿಯಾಗಿದ್ದಾರೆ.