‘ಸಹಕಾರ ವೈಭವ’ ಸಾಂಸ್ಕೃತಿಕ ಸ್ಪರ್ಧೆ: ಪಡುಬಿದ್ರೆ ಸಹಕಾರಿ ಸಂಘಕ್ಕೆ ಪ್ರಶಸ್ತಿ

ಉಡುಪಿ, ಡಿ.17: ಬಡಗಬೆಟ್ಟು ಕ್ರೆಡಿಟ್ ಕೋಆಪರೇಟಿವ್ ಸೊಸೈಟಿಯ ಶತಮಾನೋತ್ಸವ ಸಂ್ರಮಾಚರಣೆಯ ಅಂಗವಾಗಿ ಸಹಕಾರಿ ಕ್ಷೇತ್ರದ ಸಿಬ್ಬಂದಿ ಗಳಿಗೆ ಹಾಗೂ ಆಡಳಿತ ಮಂಡಳಿ ಸದಸ್ಯರಿಗೆ ಪ್ರಪ್ರಥಮ ಬಾರಿಗೆ ಉಡುಪಿಯ ಅಮ್ಮಣ್ಣಿ ರಾಮಣ್ಣ ಶೆಟ್ಟಿ ಸಭಾಭವನದಲ್ಲಿ ರವಿವಾರ ಆಯೋಜಿಸಲಾದ ಜಿಲ್ಲಾ ಮಟ್ಟದ ಸಾಂಸ್ಕೃತಿಕ ಸ್ಪರ್ಧೆ ‘ಸಹಕಾರ ವೈಭವ’ದಲ್ಲಿ ಪಡುಬಿದ್ರೆ ವ್ಯವಸಾಯ ಸೇವಾ ಸಹಕಾರಿ ಸಂಘವು ಪ್ರಥಮ ಬಹುಮಾನ ಗೆದ್ದುಕೊಂಡಿತು.
ಸಾಸ್ತಾನ ವ್ಯವಸಾಯ ಸೇವಾ ಸಹಕಾರಿ ಸಂಘ ದ್ವಿತೀಯ ಹಾಗೂ ಉಡುಪಿ ಇಂಡಸ್ತ್ರೀಯಲ್ ಕೋ-ಆಪರೇಟಿವ್ ಸೊಸೈಟಿ ತೃತೀಯ ಬಹುಮಾನ ಪಡೆದು ಕೊಂಡಿವೆ. ಸಂಜೆ ನಡೆದ ಸಮಾರೋಪ ಸಮಾರಂಭದ ವಿಜೇತ ತಂಡಗಳಿಗೆ ಬಹುಮಾನಗಳನ್ನು ವಿತರಿಸಲಾಯಿತು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಉಡುಪಿ ಜಿಲ್ಲಾ ಪಂಚಾಯತ್ ಉಪಾ ಧ್ಯಕ್ಷೆ ಶೀಲಾ ಕೆ.ಶೆಟ್ಟಿ ಮಾತನಾಡಿ, ಪರಸ್ಪರ ಸಹಕಾರ ಮನೋಭಾವ ಬೆಳೆಸಿ ಕೊಂಡಾಗ ಮಾತ್ರ ಸಹಕಾರಿ ಕ್ಷೇತ್ರದ ಅಭಿವೃದ್ಧಿ ಹಾಗೂ ಸದಸ್ಯರ ಏಳಿಗೆ ಸಾಧ್ಯ ಎಂದು ಅಭಿಪ್ರಾಯ ಪಟ್ಟರು.
ಮುಖ್ಯ ಅತಿಥಿಗಳಾಗಿ ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ ಅಧ್ಯಕ್ಷ ರವಿರಾಜ್ ಹೆಗ್ಡೆ, ದ.. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನ ನಿರ್ದೇಶಕ ರಮೇಶ್ ಶೆಟ್ಟಿ, ಶತಮಾನೋತ್ಸವ ಸಮಿತಿ ಸದಸ್ಯ ಇಂದು ರಮಾನಂದ ಭಟ್, ಸಂಘದ ಉಪಾಧ್ಯಕ್ಷ ಎಲ್.ಉಮಾನಾಥ್ ಮೊದಲಾದವರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ರಾಜ್ಯ ಸಹಕಾರ ರತ್ನ ಪ್ರಶಸ್ತಿ ಪುರಸ್ಕತ ಹಿರಿಯ ಸಹಕಾರಿ ಸರಳಾ ಬಿ.ಕಾಂಚನ್ ಹಾಗೂ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಮನೋಹರ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು. ಸಂಘದ ಅಧ್ಯಕ್ಷ ಸಂಜೀವ ಕಾಂಚನ್ ಸ್ವಾಗತಿಸಿದರು. ಪ್ರಧಾನ ವ್ಯವಸ್ಥಾಪಕ ಜಯಕರ ಶೆಟ್ಟಿ ಇಂದ್ರಾಳಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಮಲ್ಪೆ ಶಾಖಾ ವ್ಯವಸ್ಥಾಪಕ ನವೀನ್ ಕೆ. ವಂದಿಸಿದರು.