ಉಡುಪಿ: ಕಟ್ಟಡ ಕಾರ್ಮಿಕರಿಗೆ ಗೃಹಭಾಗ್ಯ ಯೋಜನೆ ಜಾರಿಗೆ ಒತ್ತಾಯ

ಉಡುಪಿ, ಡಿ.17: ಕಟ್ಟಡ ಕಾರ್ಮಿಕರಿಗೆ ಮನೆ ಕಟ್ಟಲು 5 ಲಕ್ಷ ರೂ.ವರೆಗೆ ಸಹಾಯಧನವನ್ನು ಕಾರ್ಮಿಕ ಗೃಹಭಾಗ್ಯ ಯೋಜನೆಯಡಿ ನೀಡುವುದಾಗಿ ಕರ್ನಾಟಕ ಕಟ್ಟಡ ಕಾರ್ಮಿಕರ ಕಲ್ಯಾಣ ಮಂಡಳಿ ಘೋಷಣೆ ಮಾಡಿದ್ದು, ಆದರೆ ಇದುವರೆಗೆ ಕಟ್ಟಡ ಕಾರ್ಮಿಕರಿಗೆ ಈ ಯೋಜನೆಯ ಪ್ರಯೋಜನ ಪಡೆ ಯಲು ಸಾಧ್ಯವಾಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ಕಟ್ಟಡ ಕಾರ್ಮಿಕರಿಗೆ ಗೃಹ ಭಾಗ್ಯ ಯೋಜನೆಯನ್ನು ಶೀಘ್ರವಾಗಿ ಜಾರಿಗೊಳಿಸಬೇಕು ಹಾಗೂ ಸಹಾಯ ಧನವನ್ನು ನೀಡಬೇಕು ಎಂದು ಉಡುಪಿ ಜಿಲ್ಲಾ ಕಟ್ಟಡ ಕಾರ್ಮಿಕ ಮತ್ತು ಇತರ ನಿರ್ಮಾಣ ಕಾರ್ಮಿಕರ ಸಂಘ (ಎಐಟಿಯುಸಿ) ಒತ್ತಾಯಿಸಿದರು.
ಉಡುಪಿಯ ಕಬ್ಯಾಡಿ ಶ್ರೀದುರ್ಗಾಂಬಾ ಭವಾನಿ ದೇವಸ್ಥಾನದ ಸಭಾಂಗಣ ದಲ್ಲಿ ಇತ್ತೀಚೆಗೆ ನಡೆದ ಸಂಘದ ಎರಡನೇ ವಾರ್ಷಿಕ ಮಹಾಸಭೆಯಲ್ಲಿ ಈ ಒತ್ತಾಯ ಮಾಡಲಾಯಿತು. ಸಂಘದ ಅಧ್ಯಕಷ ಹಿರಿಯಡಕ ಗಣಪತಿ ಪ್ರಭು ಸಭೆಯ ಅಧ್ಯಕ್ಷತೆ ವಹಿಸಿದ್ದರು.
ಸಂಘದ ಪ್ರಧಾನ ಕಾರ್ಯದರ್ಶಿ ಕೆ.ವಿ.ಭಟ್ ಅವರು ಮಂಡಿಸಿದ ಸಂಘದ ಚಟುವಟಿಕೆ ವರದಿ, ಲೆಕ್ಕಪತ್ರವನ್ನು ಸಭೆ ಚರ್ಚೆಯ ಬಳಿಕ ಸರ್ವಾನುಮತ ದಿಂದ ಅಂಗೀಕರಿಸಿತು. ಕಟ್ಟಡ ಕಾರ್ಮಿಕರ ಭವಿಷ್ಯದ ಪ್ರಮುಖ ಬೇಡಿಕೆಗಳ ನಿರ್ಣಯವನ್ನು ಮಂಡಿಸಿ, ಸಭೆಯಲ್ಲಿ ಚರ್ಚೆ ನಡೆದು ಅನುಮೋದಿಸಲಾಯಿತು.
ಮುಂದಿನ ಅವಧಿಗೆ 26 ಸದಸ್ಯರ ಕಾರ್ಯಕಾರಿ ಸಮಿತಿಯನ್ನು ರಚಿಸಲಾಯಿತು. ಗಣಪತಿ ಪ್ರಭು (ಅಧ್ಯಕ್ಷರು), ಗೋಪಾಲ ನಾಯ್ಕ, ಲೋಕೇಶ ಕರ್ಕೇರ, ಸತೀಶ್ ಕುಲಾಲ (ಉಪಾಧ್ಯಕ್ಷರು), ಕೆ.ವಿ.ಭಟ್ (ಪ್ರಧಾನ ಕಾರ್ಯದಶಿ), ದಿನೇಶ್ ಕನ್ನಡ, ಸುಧಾಕರ ನಾಯ್ಕ, ಶಿವಪೂಜಾರಿ (ಸಹ ಕಾರ್ಯದರ್ಶಿ), ಶಶಿಕಲಾ ಗರೀಶ್ (ಖಜಾಂಚಿ) ಆಯ್ಕೆಯಾದರು. ವಾರಿಜ ನಾಯ್ಕ ಅವರು ಎಐಟಿಯುಸಿ ವಲಯ ಸಂಚಾಲಕರಾಗಿ ಸರ್ವಾನುಮತದಿಂದ ಆಯ್ಕೆಯಾದರು.
ಸಭೆಯ ನಿರ್ಣಯಗಳು: ಕಟ್ಟಡ ಕಾರ್ಮಿಕರಿಗೆ ಮಾಸಿಕ ಪಿಂಚಣಿ 6,000 ರೂ.ನಿಗದಿಪಡಿಸಬೇಕು, ಪಿಂಚಣಿಗೆ ಅರ್ಜಿ ಸಲ್ಲಿಸಲು ವಯೋಮಿತಿ 55 ವರ್ಷಕ್ಕೆ ಇಳಿಸಬೇಕು. ವೈದ್ಯಕೀಯ ಸಹಾಯಧನ ಮಂಜೂರಾತಿಯಲ್ಲಿ ಫಲಾನುಭವಿ ಆಸ್ಪತ್ರೆಗಳಲ್ಲಿ ಪಾವತಿಸಿದ ಸಂಪೂರ್ಣ ಮೊತ್ತವನ್ನು ಮರು ಪಾವತಿಸಲು ಕ್ರಮಕೈಗೊಳ್ಳಬೇಕು. ಫಲಾನುಭವಿ ಕುಟುಂಬದ ಅವಲಂಬಿತರಿಗೂ ಅನ್ವಯಿಸಬೇಕು.
ಗೃಹ ನಿರ್ಮಾಣ ಭಾಗ್ಯ ಯೋಜನೆಯಡಿ ಮನೆ ಕಟ್ಟಲು ಹಾಗೂ ಖರೀದಿಸಲು ನೀಡಲಾಗುವ ಸಹಾಯಧನ ಹಾಗೂ ಸಾಲವನ್ನು ಪಡೆಯಲು ವಿಧಿಸಿರುವ ಷರತ್ತು ಮತ್ತು ನಿಯಮಗಳನ್ನು ಸರಳೀಕರಿಸಬೇಕು. ಮನೆ ಕಟ್ಟಲು ಕಾರ್ಮಿಕರಿಗೆ ಕಲ್ಯಾಣಮಂಡಳಿಯಿಂದ 2 ಲಕ್ಷ ರೂ.ನೀಡಬೇಕು. ಅಂತ್ಯಕ್ರಿಯೆ ವೆಚ್ಚ 10000 ರೂ.ವನ್ನು ಸಹಾಯಧನವಾಗಿ ನೀಡಬೇಕು.
ಸಭೆಯಲ್ಲಿ ಕಟ್ಟಡ ಕಾರ್ಮಿಕರ ದ.ಕ. ಮತ್ತು ಉಡುಪಿ ಜಿಲ್ಲಾ ಸಂಘದ ಪ್ರಧಾನ ಕಾರ್ಯದರ್ಶಿ ಎಂ.ಕರುಣಾಕರ, ಸಹಕಾರ್ಯದರ್ಶಿ ತಿಮ್ಮಪ್ಪ ಕಾವೂರು, ಎಐಟಿಯುಸಿ ದ.ಕ. ಮತ್ತು ಉಡುಪಿ ಜಿಲ್ಲಾ ಉಪಾಧ್ಯಕ್ಷ ಬಿ.ಶೇಖರ್, ಎಐಟಿಯುಸಿ ಉಡುಪಿ ಜಿಲ್ಲಾ ನಾಯಕರಾದ ರಾಜು ಪೂಜಾರಿ, ಸಂಜೀವ ಶೇರಿಗಾರ್, ರಾಮ ಮೂಲ್ಯ, ಶಾಂತನಾಯಕ್, ಶಶಿಕಲ ಗಿರೀಶ್, ವಾರಿಜಾ ಆತ್ರಾಡಿ ಮುಂತಾದವರು ಉಪಸ್ಥಿತರಿದ್ದರು. ಸಂಘದ ಪ್ರಧಾನ ಕಾರ್ಯದರ್ಶಿ ಕೆ.ವಿ.ಭಟ್ ಸ್ವಾಗತಿಸಿ, ವಂದಿಸಿದರು.







