ಮನು, ಗೋಳ್ವಾಲ್ಕರ್ ಅನುಯಾಯಿಗಳು ಅಧಿಕಾರದಲ್ಲಿರುವಾಗ ಮಹಿಳೆಗೆ ಸ್ವಾತಂತ್ರ್ಯ ಅಸಾಧ್ಯ: ಇಂದಿರಾ ಜೈಸಿಂಗ್

ಮಂಗಳೂರು, ಡಿ. 17: ಮಹಿಳೆಯರ ವಿರುದ್ಧ ಕಠೋರ ನಿಲುವುಗಳನ್ನು ತಳೆದ ಮನುವಿನ ಪ್ರತಿಮೆಯನ್ನು ಹೈಕೋರ್ಟ್ ನಂತಹ ನ್ಯಾಯದಾನದ ಪವಿತ್ರ ಸ್ಥಳದೊಳಗೆ ಇಟ್ಟುಕೊಂಡಿರುವ ಹಾಗು ಮಹಿಳೆಯರ ಬಗ್ಗೆ ಪ್ರತಿಗಾಮಿ ಧೋರಣೆಗಳುಳ್ಳ ಗೋಳ್ವಾಲ್ಕರ್ ರನ್ನು ತನ್ನ ಗುರು ಕರೆಯುವ ಪ್ರಧಾನಿ ಇರುವ ದೇಶದಲ್ಲಿ ನಾವು ಮಹಿಳೆಯರಿಗೆ ಅವರ ಹಕ್ಕುಗಳು ಸಿಗುತ್ತವೆ ಎಂದು ನಿರೀಕ್ಷಿಸುವುದು ಹೇಗೆ ಎಂದು ಹಿರಿಯ ನ್ಯಾಯವಾದಿ ಇಂದಿರಾ ಜೈಸಿಂಗ್ ಪ್ರಶ್ನಿಸಿದ್ದಾರೆ.
ಮಂಗಳೂರು ವಿಶ್ವವಿದ್ಯಾನಿಲಯ ಕಾಲೇಜು ಮತ್ತು ಮಂಗಳೂರು ವಿಶ್ವವಿದ್ಯಾನಿಲಯ ಸಂಜೆ ಕಾಲೇಜು ಸಹಯೋಗದಲ್ಲಿ ವಿಶ್ವವಿದ್ಯಾನಿಲಯದ ಡಾ. ಶಿವರಾಮ ಕಾರಂತ ಸಭಾಭವನದಲ್ಲಿ ಬಿ.ವಿ. ಕಕ್ಕಿಲಾಯ ಪ್ರೇರಿತ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ರಾಜಸ್ಥಾನದ ಹೈಕೋರ್ಟ್ ಒಳಗೆ ಮನುವಿನ ಪ್ರತಿಮೆಯನ್ನು ಇಡಲಾಗಿದೆ. ಮಹಿಳಾ ವಿರೋಧಿ ಮನುವಿನ ಪ್ರತಿಮೆಯನ್ನು ತೆಗೆಯಬೇಕೆಂದು ಅಲ್ಲಿ ಮಹಿಳೆಯರು ಸುದೀರ್ಘ ಕಾಲದಿಂದ ಹೋರಾಟ ನಡೆಸುತ್ತಾ ಬಂದಿದ್ದಾರೆ. ಆದರೆ ಆ ಮೂರ್ತಿ ಇಂದಿಗೂ ಅಲ್ಲೇ ಇದೆ. ಮಾತ್ರವಲ್ಲ ಆ ಮೂರ್ತಿಯನ್ನು ತೆಗೆಯಲು ಆಗ್ರಹಿಸುತ್ತಿರುವ ಮಹಿಳೆಯರ ವಿರುದ್ಧವೇ ವ್ಯವಸ್ಥೆಯಿಂದ ಆಕ್ರಮಣಕಾರಿ ಧೋರಣೆ ತಳೆಯಲಾಗುತ್ತಿದೆ. ಇನ್ನು ಆರೆಸ್ಸೆಸ್ ನ ಗೋಳ್ವಾಲ್ಕರ್ ತಮ್ಮ ಪುಸ್ತಕಗಳಲ್ಲಿ ಮಹಿಳೆ ಕೇವಲ ಗಂಡು ಮಕ್ಕಳನ್ನು ಹೆರಲು ಮನೆಯೊಳಗಿರಬೇಕಾದಳು ಎಂದು ಬಣ್ಣಿಸಿದ್ದಾರೆ. ಅಂತಹ ಧೋರಣೆಯ ವ್ಯಕ್ತಿಯನ್ನು ನಮ್ಮ ದೇಶದ ಪ್ರಧಾನಿ ತನ್ನ ಗುರು ಎಂದು ಹೇಳಿಕೊಳ್ಳುತ್ತಾರೆ. ಇಂತಹ ಪರಿಸ್ಥಿತಿಯಲ್ಲಿ ಇಲ್ಲಿ ಮಹಿಳೆಯರ ಹಕ್ಕುಗಳ ರಕ್ಷಣೆ ಆಗುವುದು ಹೇಗೆ ? ಎಂದು ಇಂದಿರಾ ಜೈಸಿಂಗ್ ಪ್ರಶ್ನಿಸಿದರು.
ನಮ್ಮ ದೇಶದಲ್ಲಿ ಇತ್ತೀಚಿಗೆ ಮಹಿಳೆಯರ ಪರ ಕೆಲವು ಬೆಳವಣಿಗೆಗಳು ಆಗಿರುವುದು ಯಾವುದೇ ಸರಕಾರಗಳಿಂದಲ್ಲ. ನ್ಯಾಯಾಲಯಗಳ ಮೂಲಕ ಮಹಿಳೆಯರ ಹಕ್ಕುಗಳನ್ನು ರಕ್ಷಿಸುವ, ಸಮಾನ ಅವಕಾಶ ನೀಡುವ ನಿಟ್ಟಿನಲ್ಲಿ ಕೆಲವು ಮಹತ್ವದ ತೀರ್ಪುಗಳು ಬಂದಿವೆ. ಆದರೆ ನ್ಯಾಯಾಲಯಗಳು ನೀಡಿರುವ ಈ ತೀರ್ಪನ್ನು ಸಂಬಂಧಪಟ್ಟ ಸರಕಾರಗಳು ಅನುಷ್ಠಾನ ಮಾಡುವುದಿಲ್ಲ ಮಾತ್ರವಲ್ಲ ಅವುಗಳನ್ನು ಜಾರಿ ಮಾಡದಂತೆ ಪೊಲೀಸರು ಇತ್ಯಾದಿ ಇಲಾಖೆಗಳಿಗೆ ತಡೆಯೊಡ್ಡುತ್ತಿರುವುದು ಆಘಾತಕಾರಿ ಬೆಳವಣಿಗೆಯಾಗಿದೆ ಎಂದು ಇಂದಿರಾ ಹೇಳಿದರು.
ದೆಹಲಿಯಲ್ಲಿ 2012 ರಲ್ಲಿ ನಡೆದ ಬರ್ಬರ ಸಾಮೂಹಿಕ ಅತ್ಯಾಚಾರ ಪ್ರಕರಣದ ಬಳಿಕ ನಿರ್ಭಯ ನಿಧಿಯನ್ನು ಸ್ಥಾಪಿಸಲಾಯಿತು. ಅದು ಕೇವಲ ಮಹಿಳೆಯರ ವಿರುದ್ಧದ ದೌರ್ಜನ್ಯ, ಹಿಂಸೆ ಮಾತ್ರ ಬಳಕೆಯಾಗಬೇಕು ಎಂಬ ಶರತ್ತಿದೆ. ಆದರೆ ಆ ನಿಧಿಯ ದೊಡ್ಡ ಮೊತ್ತ ಬಳಕೆಯೇ ಆಗದೆ ಬಿದ್ದುಕೊಂಡಿದೆ. ಈಗಿನ ಕೇಂದ್ರ ಸರಕಾರ 'ಬೇಟಿ ಬಚಾವೋ , ಬೇಟಿ ಪಡಾವೋ ' ಯೋಜನೆ ಜಾರಿಗೆ ತಂದಿತು. ಆದರೆ ಆ ಯೋಜನೆಯಿಂದ ಯಾವುದೇ ಗಮನಾರ್ಹ ಪ್ರಯೋಜನವಾಗಿಲ್ಲ ಎಂಬುದನ್ನು ಅಂಕಿ ಅಂಶಗಳೇ ಹೇಳುತ್ತಿವೆ. ಇವುಗಳ ನಡುವೆ ಕೆಲವೊಮ್ಮೆ ಒಂದೊಂದು ಸರಕಾರಿ ಯೋಜನೆಗಳು ಪರಿಣಾಮಕಾರಿ ಯಾಗಿ ಕೆಲಸ ಮಾಡುತ್ತವೆ ಎಂದು ಇಂದಿರಾ ಹೇಳಿದರು.
ನಾವು ತ್ರಿವಳಿ ತಲಾಕ್ ರದ್ದು ಪಡಿಸಬೇಕು ಎಂದು ಹೋರಾಟ ನಡೆಸಿದೆವು. ಅದನ್ನು ಸುಪ್ರೀಂ ಕೋರ್ಟ್ ಅಸಂವಿಧಾನಿಕ ಎಂದು ಘೋಷಿಸಿದ ಕೂಡಲೇ ತಡ ಮಾಡದ ಕೇಂದ್ರ ಸರಕಾರ ತಾನೇ ಅದನ್ನು ಮಾಡಿಸಿದೆ ಎಂದು ಅದರ ಕೀರ್ತಿ ಬಾಚಲು ಪ್ರಯತ್ನಿಸಿತು. ತಕ್ಷಣ ತ್ರಿವಳಿ ತಲಾಕ್ ಅನ್ನು ಅಪರಾಧ ಎಂದು ಕಾನೂನು ತಂದಿತು. ಈಗ ಆ ಕಾನೂನು ಸಂಸತ್ತಿನಲ್ಲಿ ಬಾಕಿಯಾಗಿದೆ. ಅಸಂವಿಧಾನಿಕ ಎಂದ ಮೇಲೆ ಮತ್ತೆ ಅದನ್ನು ಅಪರಾಧ ಎಂದು ಪ್ರತ್ಯೇಕವಾಗಿ ಘೋಷಿಸುವ ಅಗತ್ಯವೇ ಇರಲಿಲ್ಲ. ಆದರೂ ಕೇಂದ್ರ ಆ ಕ್ರಮ ಕೈಗೊಂಡಿತು. ಆದರೆ ಅದೇ ಕೇಂದ್ರ ಸರಕಾರ ಶಬರಿಮಲೆ ವಿಚಾರದಲ್ಲಿ ಸುಪ್ರೀಂ ಕೋರ್ಟ್ ತೀರ್ಪು ಬಂದಾಗ ಅದನ್ನು ಜಾರಿಗೊಳಿಸಲು ಪ್ರಯತ್ನಿಸಲಿಲ್ಲ. ಮಾತ್ರವಲ್ಲ ಅವರದೇ ಪಕ್ಷದವರು ಸುಪ್ರೀಂ ತೀರ್ಪನ್ನು ಜಾರಿಗೊಳಿಸ ಬೇಡಿ ಎಂದು ಬೀದಿಗಿಳಿದರು. ಇಂತಹ ರಾಜಕೀಯಗಳಿಂದ ಮಹಿಳೆಯರಿಗೆ ಮುಕ್ತಿ ಬೇಕಾಗಿದೆ ಎಂದು ಇಂದಿರಾ ಹೇಳಿದರು.
ಮೀಟೂ ಅಭಿಯಾನವನ್ನು ಅತ್ಯಂತ ಸ್ವಾಗತಾರ್ಹ ಬೆಳವಣಿಗೆ ಎಂದು ಬಣ್ಣಿಸಿದ ಇಂದಿರಾ ಇದರಿಂದ ಮಹಿಳೆಯರು ಮುಕ್ತವಾಗಿ ತಮ್ಮ ವಿರುದ್ಧದ ದೌರ್ಜನ್ಯಗಳ ಬಗ್ಗೆ ಮಾತಾಡುವ ವಾತಾವರಣ ಸೃಷ್ಟಿಯಾಗಿದೆ. ಮಹಿಳೆಗೆ ಮನೆಯೇ ಸೂಕ್ತ ಎಂದು ವಾದಿಸುವವರಲ್ಲಿ ಆಕೆಗೆ ಮನೆ ಸಂಪೂರ್ಣ ಸುರಕ್ಷಿತವೇ ಎಂದು ಕೇಳಬೇಕಾಗಿದೆ. ಇತ್ತೀಚಿನ ವರದಿಯೊಂದರ ಪ್ರಕಾರ ಜಾಗತಿಕವಾಗಿ ಮಹಿಳೆಯರು ತಮ್ಮ ಅತ್ಯಂತ ಸಮೀಪ ಸಂಬಂಧಿಗಳಿಂದಲೇ ಹತ್ಯೆಯಾಗುವ ಪ್ರಮಾಣದಲ್ಲಿ ಭಾರೀ ಏರಿಕೆಯಾಗಿದೆ ಎಂದು ಕಂಡುಬಂದಿದೆ. ಇದನ್ನು ತಡೆಯಲು ಮಹಿಳೆಗೆ ಆಯ್ಕೆಯ ಸ್ವಾತಂತ್ರ್ಯದ ಜೊತೆ ಆರ್ಥಿಕ ಸ್ವಾತಂತ್ಯ ಸಿಗುವಂತಾಗಬೇಕು. ಆಕೆ ಖರ್ಚಿಗೆ ಪತಿಯೆದುರು ಕೈಚಾಚುವಂತಾಗಬಾರದು. ಹಾಗಾದರೆ ಮಾತ್ರ ಮಹಿಳೆ ನಿಜವಾಗಿ ಸ್ವತಂತ್ರಳಾಗುತ್ತಾಳೆ ಎಂದು ಹೇಳಿದರು.
" ಬಿಕಾಸ್ ಆಫ್ ದಟ್ ... "
ಶಬರಿಮಲೆಗೆ ಮಹಿಳೆಯರಿಗೆ ಪ್ರವೇಶ ನೀಡಬೇಕು ಎಂದು ತಾನು ಸುಪ್ರೀಂ ಕೋರ್ಟ್ ನಲ್ಲಿ ವಾದಿಸಿದಾಗಿನ ಕೆಲವು ಘಟನೆಗಳನ್ನು ಇಂದಿರಾ ಜೈಸಿಂಗ್ ನೆನಪಿಸಿಕೊಂಡರು. ಹತ್ತರಿಂದ ಐವತ್ತು ವರ್ಷದ ಮಹಿಳೆಯರಿಗೆ ಮುಟ್ಟಾಗುವುದರಿಂದ ಶಬರಿಮಲೆಗೆ ಹೋಗಬಾರದು ಎಂದು ವಾದಿಸುತ್ತಿದ್ದ ವಕೀಲರು ' ಮುಟ್ಟು ' ಎಂಬ ಪದವನ್ನು ಹೇಳಲು ಕೂಡ ಸಿದ್ಧರಿರಲಿಲ್ಲ. ಕೇವಲ " ಬಿಕಾಸ್ ಆಫ್ ದಟ್ ... ( ಅದಕ್ಕಾಗಿ ) " ಎಂದೇ ಮತ್ತೆ ಮತ್ತೆ ಹೇಳುತ್ತಿದ್ದರು. ಕೊನೆಗೆ ನಾನೆ " ವಾಟ್ ಇಸ್ ದಾಟ್ ( ಅದು ಯಾವುದು )" ಎಂದು ಕೇಳಬೇಕಾಯಿತು. ಆಗಲೂ ಅವರು ಬಾಯಿಬಿಡಲಿಲ್ಲ. ಆಗ ನಾನೇ " ನೀವು ಮುಟ್ಟಾಗುವ ಬಗ್ಗೆ ಹೇಳುತ್ತಿದ್ದೀರಾ " ಎಂದು ಕೇಳಬೇಕಾಯಿತು ಎಂದು ಹೇಳಿದರು.
ಡಾ. ಶ್ರೀನಿವಾಸ ಕಕ್ಕಿಲಾಯ ಸ್ವಾಗತಿಸಿದರು.