ಆಂಧ್ರದಲ್ಲಿ ಫೆಥಾಯ್ ಚಂಡಮಾರುತದ ಅಬ್ಬರ: ಭೂಕುಸಿತಕ್ಕೆ ಒಬ್ಬ ವ್ಯಕ್ತಿ ಬಲಿ
ಹೈದರಾಬಾದ್, ಡಿ.17: ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತದಿಂದ ಸೃಷ್ಟಿಯಾಗಿರುವ ಫೆಥಾಯ್ ಚಂಡಮಾರುತ ಆಂಧ್ರಪ್ರದೇಶದಲ್ಲಿ ಅಬ್ಬರಿಸಿದ್ದು ವಿಜಯವಾಡದಲ್ಲಿ ಭೂಕುಸಿತದಿಂದ ಓರ್ವ ವ್ಯಕ್ತಿ ಮೃತಪಟ್ಟಿದ್ದಾನೆ. ಭಾರೀ ಮಳೆ, ಗಾಳಿಯ ಕಾರಣ ರಾಜ್ಯದಲ್ಲಿ ಜನಜೀವನ ಅಸ್ತವ್ಯಸ್ತವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕನಿಷ್ಟ 23 ಪ್ರಯಾಣಿಕ ರೈಲುಗಳ ಸಂಚಾರವನ್ನು ರದ್ದುಗೊಳಿಸಲಾಗಿದ್ದು, ಒಂದು ರೈಲಿನ ಮಾರ್ಗ ಬದಲಿಸಲಾಗಿದೆ. ಗಂಟೆಗೆ 16 ಕಿ.ಮೀ. ವೇಗದಲ್ಲಿ ಪೂರ್ವ ಗೋದಾವರಿ ಜಿಲ್ಲೆಯತ್ತ ಚಂಡಮಾರುತ ಸಾಗುತ್ತಿದ್ದು ಮುಂಜಾಗರೂಕತಾ ಕ್ರಮವಾಗಿ ಸರಕಾರ ಕರಾವಳಿ ಜಿಲ್ಲೆಗಳ ಶಿಕ್ಷಣ ಸಂಸ್ಥೆಗಳಿಗೆ ಸೋಮವಾರ ರಜೆ ಘೋಷಿಸಿತ್ತು.
ಪ್ರಾಣಹಾನಿಯಾಗದಂತೆ ಗರಿಷ್ಟ ಮುಂಜಾಗರೂಕತೆ ವಹಿಸುವಂತೆ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಕರಾವಳಿ ಜಿಲ್ಲೆಗಳ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಉತ್ತರ ಕರಾವಳಿ ತೀರದ 300ಕ್ಕೂ ಹೆಚ್ಚು ಗ್ರಾಮಗಳಲ್ಲಿ ‘ಹೈ ಅಲರ್ಟ್ ’ ಘೋಷಿಸಲಾಗಿದೆ. 1 ಸಾವಿರ ಪೊಲೀಸರು, 500 ವಿಪತ್ತು ನಿರ್ವಹಣಾ ತಂಡದ ಸಿಬ್ಬಂದಿಗಳ ಸಹಿತ ಸುಮಾರು 10 ಸಾವಿರ ಸರಕಾರಿ ಸಿಬ್ಬಂದಿಗಳನ್ನು ಪರಿಹಾರ ಮತ್ತು ರಕ್ಷಣಾ ಕಾರ್ಯಕ್ಕೆ ನಿಯೋಜಿಸಲಾಗಿದೆ. ಗೃಹ ಸಚಿವ ಎನ್.ಚಿನ್ನರಾಜಪ್ಪ ಬಾಧಿತ ಪ್ರದೇಶಗಳಿಗೆ ಭೇಟಿ ನೀಡಿ ಪರಿಹಾರ ಕಾರ್ಯಾಚರಣೆಯ ನಿಗಾ ವಹಿಸಿದ್ದಾರೆ.
ಪೂರ್ವ ಘಟ್ಟ ಪ್ರದೇಶಗಳು, ಪಶ್ಚಿಮ ಗೋದಾವರಿ, ವಿಶಾಖಪಟ್ಟಣಂ, ವಿಜಯನಗರಂ ಜಿಲ್ಲೆಗಳಲ್ಲಿ ಭಾರೀ ಮಳೆ ಸುರಿದಿದೆ. ಬಾಳೆಹಣ್ಣು ಮತ್ತು ಇತರ ತೋಟಗಾರಿಕಾ ಬೆಳೆಗಳಿಗೆ ರಕ್ಷಣೆ ಒದಗಿಸುವಂತೆ ರೈತರಿಗೆ ಸೂಚಿಸಲಾಗಿದೆ. ಈ ಬೆಳೆಗಳಿಗೆ ಹೊದಿಸಲು ಟರ್ಪಾಲುಗಳನ್ನು ಕೃಷಿ ಅಧಿಕಾರಿಗಳನ್ನು ಸಂಪರ್ಕಿಸಿ ಪಡೆಯುವಂತೆ ಅಧಿಕಾರಿಗಳು ತಿಳಿಸಿದ್ದಾರೆ. ಅಲ್ಲದೆ ತಗ್ಗುಪ್ರದೇಶದ ನಿವಾಸಿಗಳಿಗೆ ಸುರಕ್ಷಿತ ಪ್ರದೇಶಕ್ಕೆ ತೆರಳುವಂತೆ ಸೂಚಿಸಲಾಗಿದೆ. ಆಂಧ್ರದ ಏಳು ಕರಾವಳಿ ಜಿಲ್ಲೆಗಳಲ್ಲಿ ಮಂಗಳವಾರವೂ ಬಿರುಗಾಳಿ ಸಹಿತ ಮಳೆಯಾಗುವ ನಿರೀಕ್ಷೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.