ಚೂರಿ ಇರಿತ ಪ್ರಕರಣ: ಬಾಲಕನ ಬಂಧನ
ಕುಂದಾಪುರ, ಡಿ. 17: ಕುಂದಾಪುರದ ಜೂನಿಯರ್ ಕಾಲೇಜಿನ ಆವರಣ ದಲ್ಲಿ ವಿದ್ಯಾರ್ಥಿಗೆ ಚೂರಿ ಇರಿತ ಪ್ರಕರಣಕ್ಕೆ ಸಂಬಂಧಿಸಿ 17ರ ಹರೆಯದ ಹಳೆ ವಿದ್ಯಾರ್ಥಿಯನ್ನು ಕುಂದಾಪುರ ಪೊಲೀಸರು ಕೊಪ್ಪಳ ಜಿಲ್ಲೆಯ ಕುಷ್ಟಗಿಯ ಹನುಮನಾಳ ಎಂಬಲ್ಲಿ ಸೋಮವಾರ ಬಂಧಿಸಿದ್ದಾರೆ.
ಬಂಧಿತ ಬಾಲಕನನ್ನು ಉಡುಪಿಗೆ ಕರೆತಂದಿರುವ ಪೊಲೀಸರು, ಉಡುಪಿಯ ಬಾಲ ನ್ಯಾಯ ಮಂಡಳಿಯ ನ್ಯಾಯಾಧೀಶರ ಮುಂದೆ ಹಾಜರುಪಡಿಸಿದರು. ನ್ಯಾಯಾಧೀಶರು ಆತನನ್ನು 2 ದಿನಗಳ ಕಾಲ ನಿಟ್ಟೂರಿನ ಪರಿವೀಕ್ಷಣಾಲಯಕ್ಕೆ ಒಪ್ಪಿಸಿ ಆದೇಶ ನೀಡಿದರು.
ಕೊಪ್ಪಳದ ಹನುಮನಾಳದ ನಿವಾಸಿಯಾಗಿರುವ ಈತ ನ. 29ರಂದು ಕುಂದಾಪುರ ಬೋರ್ಡ್ ಹೈಸ್ಕೂಲಿನ ವಿದ್ಯಾರ್ಥಿ ಅನೂಪ್ ಶೇರಿಗಾರ್ (17) ಎಂಬಾತನ ಹೊಟ್ಟೆ, ಎದೆ, ಕುತ್ತಿಗೆ, ಕೆನ್ನೆಗೆ ಚೂರಿಯಿಂದ ತಿವಿದು ಕೊಲೆಗೆ ಯತ್ನಿಸಿ ಪರಾರಿಯಾಗಿದ್ದನು. ಪ್ರೀತಿ ವಿಚಾರಕ್ಕೆ ಸಂಬಂಧಿಸಿ ಈ ಕೊಲೆಯತ್ನ ನಡೆದಿದೆ ಎನ್ನಲಾಗಿದೆ.
ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story