ಮಂಗಳೂರು: ಯೂನಿಯನ್ ಬ್ಯಾಂಕ್ ಮಿಡ್ ಕಾರ್ಪೋರೇಟ್ ಶಾಖೆ ಆರಂಭ

ಮಂಗಳೂರು, ಡಿ.17: ಗ್ರಾಮೀಣ ಪ್ರದೇಶದ ಜನರಿಗೆ ಕ್ಷಿಪ್ರವಾಗಿ ಬ್ಯಾಂಕ್ ಸೇವೆ ನೀಡುವ ಉದ್ದೇಶದಿಂದ ಯೂನಿಯನ್ ಬ್ಯಾಂಕ್ ವತಿಯಿಂದ ಆರಂಭಿಸಲಾಗಿರುವ ‘ಯೂನಿಯನ್ ಸಮೃದ್ಧಿ ಕೇಂದ್ರ’ಗಳನ್ನು ವರ್ಷಾಂತ್ಯದೊಳಗೆ 30ಕ್ಕೇರಿಸುವ ಗುರಿ ಹೊಂದಿರುವುದಾಗಿ ಯೂನಿಯನ್ ಬ್ಯಾಂಕ್‌ನ ಎಂಡಿ ಮತ್ತು ಸಿಇಒ ರಾಜ್‌ಕಿರಣ್ ರೈ ಹೇಳಿದ್ದು, ಕಾರ್ಯಕ್ರಮಕ್ಕೆ ಇಂದು ಚಾಲನೆ ನೀಡಿದರು.
ಸಾರ್ವಜನಿಕ ವಲಯದ ಯೂನಿಯನ್ ಬ್ಯಾಂಕ್ ವತಿಯಿಂದ ದೇಶದ 24ನೇ ಮಿಡ್ ಕಾರ್ಪೊರೇಟ್ ಶಾಖೆ (ಎಂಸಿಬಿ)ಯನ್ನು ಅವರು ನಗರದ ಪಾಂಡೇಶ್ವರದಲ್ಲಿರುವ ಅರಿಸ್ತಾ ಎನ್‌ಕ್ಲೇವ್ ಕಟ್ಟಡದಲ್ಲಿ ಉದ್ಘಾಟಿಸಿ ಮಾತನಾಡಿದರು.
ಈ ಹಿಂದೆ ಗ್ರಾಹಕರ 50 ಕೋಟಿ ರೂ. ಒಳಗಿನ ಸಾಲವನ್ನು ಪ್ರಾದೇಶಿಕ ಶಾಖೆಗಳಲ್ಲೇ ನಿರ್ವಹಿಸಲಾಗುತ್ತಿತ್ತು. 50 ಕೋಟಿ ರೂ.ಗಿಂತ ಹೆಚ್ಚಿನ ಸಾಲ ಪಡೆಯಲು ಬ್ಯಾಂಕ್‌ನ ಮುಖ್ಯ ಕಚೇರಿಗೆ ಹೋಗಬೇಕಿತ್ತು. ಇದರಿಂದ ಸಾಲ ನೀಡುವಿಕೆಯಲ್ಲಿ ವಿಳಂಬವಾಗುತ್ತಿತ್ತು. ಅದಕ್ಕಾಗಿಯೇ ಮಿಡ್ ಕಾರ್ಪೊರೇಟ್ ಶಾಖೆ ಆರಂಭಿಸಲಾಗಿದ್ದು, 50 ರಿಂದ 150 ಕೋಟಿ ರೂ.ವರೆಗಿನ ಸಾಲ ಪಡೆಯಲಿಚ್ಛಿಸುವವರು ಈ ಶಾಖೆಯನ್ನು ಸಂಪರ್ಕಿಸಬಹುದು. ಮಧ್ಯಮ ವರ್ಗದ ಉದ್ದಿಮೆದಾರರಿಗೆ ಈ ಸೌಲಭ್ಯದಿಂದ ಸಹಾಯವಾಗಲಿದೆ ಎಂದು ಹೇಳಿದರು.
ಈ ಆರ್ಥಿಕ ವರ್ಷಾಂತ್ಯದೊಳಗೆ ದೇಶದಲ್ಲಿ ಒಟ್ಟು 25 ಮಿಡ್ ಕಾರ್ಪೊರೇಟ್ ಶಾಖೆ ತೆರೆಯುವ ಉದ್ದೇಶವಿದ್ದು, 50 ಸಾವಿರ ಕೋಟಿ ರೂ. ವ್ಯವಹಾರ ನಡೆಸುವ ಗುರಿ ಹಾಕಿಕೊಳ್ಳಲಾಗಿದೆ. ಈಗಾಗಲೇ 36 ಸಾವಿರ ಕೋಟಿ ರೂ.ಗಳ ವ್ಯವಹಾರ ನಡೆದಿದೆ ಎಂದು ರಾಜ್‌ಕಿರಣ್ ತಿಳಿಸಿದರು.
ಮಂಗಳೂರು ಉದ್ದಿಮೆದಾರರಿಗೆ ಉತ್ತಮ ಪ್ರದೇಶವಾಗಿದ್ದು, ಬ್ಯಾಂಕ್ ನಿಗದಿತ ಗುರಿ ಸಾಧಿಸುವ ವಿಶ್ವಾಸವಿದೆ. ಇನ್ನೆರಡು ವರ್ಷದೊಳಗೆ ಇಲ್ಲಿ ಬೃಹತ್ ಕಾರ್ಪೊರೇಟ್ ಶಾಖೆಯನ್ನೂ ಆರಂಭಿಸಲು ಸಾಧ್ಯವಿದೆ ಎಂದು ರಾಜ್ ಕಿರಣ್ ರೈ ತಿಳಿಸಿದರು.
ಬದಲಾವಣೆಯಾಗುತ್ತಿರುವ ಗ್ರಾಹಕರ ಅಭಿರುಚಿಗೆ ಪೂರಕವಾಗಿ ಡಿಜಿಟಲ್ ಆರ್ಥಿಕತೆಯತ್ತ ಬ್ಯಾಂಕ್ ಹೆಜ್ಜೆಯಿಟ್ಟಿದೆ. ಕ್ಯಾಶ್‌ಲೆಸ್ ಕ್ಯಾಂಪಸ್ ಎಂಬ ನೂತನ ಪರಿಕಲ್ಪನೆ ಜಾರಿಗೊಳಿಸುತ್ತಿದ್ದು, ಈಗಾಗಲೇ ಕೇಂದ್ರೀಯ ವಿದ್ಯಾಲಯವನ್ನು ಈ ವ್ಯಾಪ್ತಿಗೆ ಒಳಪಡಿಸಲಾಗಿದೆ. ಮಂಗಳೂರಿನ ಕರ್ನಾಟಕ ಪಾಲಿಟೆಕ್ನಿಕ್ ಕಾಲೇಜಿನಲ್ಲೂ ಕ್ಯಾಶ್‌ಲೆಸ್ ವ್ಯವಸ್ಥೆ ಜಾರಿಗೆ ಉದ್ದೇಶಿಸಿರುವುದಾಗಿ ರಾಜ್‌ಕಿರಣ್ ತಿಳಿಸಿದರು.
ಬ್ಯಾಂಕ್ ಸಮೃದ್ಧಿ ಸೌಲಭ್ಯವನ್ನು 6 ತಿಂಗಳ ಹಿಂದೆ ಮುಂಬೈನ ನಾಸಿಕ್ ಮತ್ತು ಹರಿಯಾಣದಲ್ಲಿ ಆರಂಭಿಸಿದೆ. ಕರ್ನಾಟಕ ರಾಣೆಬೆನ್ನೂರು ಮತ್ತು ಬೆಳಗಾವಿಯಲ್ಲೂ ಆರಂಭಿಸಲಾಗಿದೆ. ಗ್ರಾಮೀಣ ಪ್ರದೇಶದ 20 ಕಿ.ಮೀ. ವ್ಯಾಪ್ತಿಯೊಳಗಿರುವ 15 ಶಾಖೆಗೊಂದರಂತೆ ಯೂನಿಯನ್ ಸಮೃದ್ಧಿ ಕೇಂದ್ರ ಸ್ಥಾಪಿಸಲಾಗುತ್ತದೆ. ರೈತರು ನೇರವಾಗಿ ಈ ಕೇಂದ್ರಕ್ಕೆ ಬಂದು ಸಾಲ ಮತ್ತಿತರ ಸೇವೆಗಳನ್ನು ಪಡೆಯಬಹುದು. ಅದಕ್ಕಾಗಿ ಸಿಬ್ಬಂದಿಗೆ ಟ್ಯಾಬ್ಲೆಟ್‌ಗಳನ್ನು ನೀಡಲಾಗಿದ್ದು, ಅದರಲ್ಲೇ ಎಲ್ಲ ಪ್ರಕ್ರಿಯೆಗಳನ್ನು ನಡೆಸಲಾಗುತ್ತಿದೆ 2ರಿಂದಸ 3 ದಿನದೊಳಗೆ ಸಾಲ ನೀಡುವುದು ಇಲ್ಲಿನ ವಿಶೇಷತೆಯಾಗಿದೆ ಎಂದರು.
ಬ್ಯಾಂಕ್‌ನ ಬೆಂಗಳೂರು ಫೀಲ್ಡ್ ಜನರಲ್ ಮ್ಯಾನೇಜರ್ ಎಸ್.ಎನ್. ಕೌಶಿಕ್, ಮುಂಬೈನ ಮಿಡ್ ಕಾರ್ಪೊರೇಟ್ ವರ್ಟಿಕಲ್ ಕೇಂದ್ರ ಕಚೇರಿಯ ಜನರಲ್ ಮ್ಯಾನೇಜರ್ ಸತ್ಯನಾರಾಯಣ ಪಿ., ಮಂಗಳೂರು ಪ್ರಾದೇಶಿಕ ಮುಖ್ಯಸ್ಥ ನಂಜುಂಡಪ್ಪ, ನೂತನ ಎಂಸಿಬಿ ಮುಖ್ಯಸ್ಥ ಅಶೋಕ್ ಭಂಡಗೆ ಮೊದಲಾದವರು ಉಪಸ್ಥಿತರಿದ್ದರು