ರಸ್ತೆ ಅಭಿವೃದ್ಧಿಗೆ ಜಾಗ ನೀಡದೆ ಅಡ್ಡಿ: ಉಪ್ಪಳಿಗೆಯಲ್ಲಿ ಪ್ರತಿಭಟನೆ

ಪುತ್ತೂರು, ಡಿ. 17: ಪುತ್ತೂರು -ಪಾಣಾಜೆ ರಸ್ತೆಯ ಉಪ್ಪಳಿಗೆಯಿಂದ ಮಾಣಿ-ಮೈಸುರು ಹೆದ್ದಾರಿಯ ಶೇಖಮಲೆಗೆ ಸಂಪರ್ಕಿಸುವ ರಸ್ತೆ ಅಭಿವೃದ್ಧಿಗೆ ಅನುದಾನ ಬಿಡುಗಡೆಗೊಂಡು ಕಾಮಗಾರಿ ಪ್ರಾರಂಭಗೊಂಡಿದ್ದರೂ ಉಪ್ಪಳಿಗೆಯಲ್ಲಿ ಖಾಸಗಿ ವ್ಯಕ್ತಿಯೊಬ್ಬರು ಜಾಗ ಬಿಟ್ಟುಕೊಡದೆ ಅಡ್ಡಿ ಪಡಿಸುತ್ತಿದ್ದು, ಸಂಬಂಧಪಟ್ಟ ಅಧಿಕಾರಿಗಳು ಜಾಗ ಸ್ವಾಧೀನಪಡಿಸಿ ರಸ್ತೆ ಅಭಿವೃದ್ಧಿ ಮಾಡಬೇಕೆಂದು ಆಗ್ರಹಿಸಿ ಸೋಮವಾರ ಉಪ್ಪಳಿಗೆಯಲ್ಲಿ ರಸ್ತೆ ಸಂರಕ್ಷಣಾ ಸಮಿತಿ ಹಾಗೂ ವಿವಿಧ ಸಂಘ ಸಂಸ್ಥೆಗಳ ನೇತೃತ್ವದಲ್ಲಿ ರಸ್ತೆ ತಡೆ ಪ್ರತಿಭಟನೆ ನಡೆಯಿತು.
ಪ್ರತಿಭಟನಾಕಾರರು ಬೆಳಿಗ್ಗೆ 8ಗಂಟೆಗೆ ಉಪ್ಪಳಿಗೆ ಶೇಖಮಲೆ ರಸ್ತೆ ತಡೆ ಮಾಡಿ ಪ್ರತಿಭಟನೆ ಆರಂಭಿಸಿದರು. ಸಂಪ್ಯ ಪೊಲೀಸರು ಸ್ಥಳಕ್ಕೆ ಬಂದು ರಸ್ತೆ ತಡೆ ತೆರವುಗೊಳಿಸುವಂತೆ ಮನವೊಲಿಸುವ ಪ್ರಯತ್ನ ನಡೆಸಿದರು. ಆದರೆ ಪ್ರತಿಭಟನಾಕಾರರು ತಹಶೀಲ್ದಾರರು ಬರುವ ತನಕ ನಾವು ಕದಡುವುದಿಲ್ಲ ಎಂದು ಪಟ್ಟು ಹಿಡಿದು ರಸ್ತೆ ತಡೆ ಪ್ರತಿಭಟನೆ ಮುಂದುವರಿಸಿದರು. ಬಳಿಕ ಸ್ಥಳಕ್ಕೆ ಬಂದ ಸಂಪ್ಯ ಎಸ್‍ಐ ಸತ್ತಿವೇಲು ಅವರು ಪ್ರತಿಭಟನಾ ನಿರತರ ಜತೆ ಮಾತುಕತೆ ನಡೆಸಿ ಕೆಸ್ಸಾರ್ಟಿಸಿ ಬಸ್ ಸಂಚಾರಕ್ಕೆ ಅವಕಾಶ ಮಾಡಿಕೊಟ್ಟರು. ಪ್ರತಿಭಟನೆ 11 ಗಂಟೆ ತನಕ ನಡೆಯಿತು.
ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಪುತ್ತೂರು ಬ್ಲಾಕ್ ಪ್ರಧಾನ ಕಾರ್ಯದರ್ಶಿ ಕೃಷ್ಣ ಪ್ರಸಾದ್ ಆಳ್ವ ಅವರು, 'ನಮ್ಮ ಹೋರಾಟ ಯಾವುದೇ ವ್ಯಕ್ತಿಯ ವಿರುದ್ಧ ಅಲ್ಲ. ವೈಯಕ್ತಿಕ ಧ್ವೇಷದಿಂದಲೂ ಅಲ್ಲ. ನಮಗೆ ಊರಿನ ಅಭಿವೃದ್ಧಿ ಮುಖ್ಯ. ರಸ್ತೆ ಅಭಿವೃದ್ಧಿಗೊಂಡು ಸಾರ್ವಜನಿಕರಿಗೆ ಉಪಯೋಗವಾಗಬೇಕು ಎಂಬುವುದೇ ನಮ್ಮ ಉದ್ದೇಶ ಎಂದರು. ಕಳೆದ ಅವಧಿಯಲ್ಲಿ ಶಾಸಕಿಯಾಗಿದ್ದ ಶಕುಂತಳಾ ಟಿ ಶೆಟ್ಟಿ ಅವರು ರಸ್ತೆ ಅಭಿವೃದ್ಧಿ ರೂ.2ಕೋಟಿ ಅನುದಾನ ನೀಡಿದ್ದು, ಯಾವುದೇ ಜಾತಿ, ಮತ, ಪಕ್ಷ ಬೇಧವಿಲ್ಲದೆ ಶಿಲಾನ್ಯಾಸ ಕಾರ್ಯಕ್ರಮವನ್ನು ನಡೆಸಲಾಗಿದೆ. ಇದೀಗ ಕಾಮಗಾರಿಗೆ ಅಡ್ಡಿ ಉಂಟಾದ ಹಿನ್ನಲೆಯಲ್ಲಿ ನಾವು ಒಗ್ಗಟ್ಟಿನಿಂದ ಹೋರಾಟದಲ್ಲಿ ಪಾಳ್ಗೊಂಡಿದ್ದೇವೆ ಎಂದು ಅವರು ಹೇಳಿದರು.
ಎಪಿಎಂಸಿ ಸದಸ್ಯರಾದ ವಕೀಲ ಮಂಜುನಾಥವ ಎನ್.ಎಸ್ ಅವರು ಮಾತನಾಡಿ, ಹಲವು ವರ್ಷಗಳಿಂದ ಹದಗೆಟ್ಟಿದ್ದ ಉಪ್ಪಳಿಗೆಯಿಂದ ಶೇಖಮಲೆ ಸಂಪರ್ಕ ಕಲ್ಪಿಸುವ ಜಿಲ್ಲಾ ಪಂಚಾಯಿತಿ ರಸ್ತೆಯನ್ನು ಲೋಕೋಪಯೋಗಿ ಇಲಾಖೆಗೆ ಸೇರ್ಪಡೆಗೊಳಿಸಲು ಪ್ರಯತ್ನಿಸಲಾಗಿದೆ. ಇದೀಗ ಈ ರಸ್ತೆಯ ಅಭಿವೃದ್ಧಿಗೆ ಲೋಕೋಪಯೋಗಿ ಇಲಾಖೆಯಿಂದ ರೂ. 2ಕೋಟಿ ಮಂಜೂರುಗೊಂಡು ಅಭಿವೃದ್ಧಿ ಕಾಮಗಾರಿ ಪ್ರಾರಂಭಗೊಂಡಿದ್ದರೂ ಕಾಮಗಾರಿಗೆ ಅಡಚನೆಯಾಗಿದೆ ಎಂದರು.
ವಿಷ್ಣು ಯುವಕ ಮಂಡಲದ ಅಧ್ಯಕ್ಷ ಚೇತನ್ ಉಪ್ಪಳಿಗೆ ಅವರು ಮಾತನಾಡಿ, ಸುಮಾರು 60 ವರ್ಷಗಳಷ್ಟು ಇತಿಹಾಸವಿರುವ ರಸ್ತೆಗೆ ನಮ್ಮ ಪೂರ್ವಜರು ಜಾಗ ಬಿಟ್ಟುಕೊಟ್ಟು ಸಹಕರಿಸಿದ್ದಾರೆ. ರಸ್ತೆ ಅಭಿವೃದ್ಧಿಗೆ ಈಗಲೂ ನಮ್ಮ ಜಾಗದ ಆವಶ್ಯಕತೆಯಿದ್ದು ನಾವು ಬಿಟ್ಟುಕೊಡಲು ಸಿದ್ದರಿದ್ದೇವೆ ಎಂದರು.
ಪ್ರತಿಭಟನಾ ಸ್ಥಳಕ್ಕೆ ತಹಶೀಲ್ದಾರ್ ಅನಂತಶಂಕರ್, ಸರ್ವೆಯರ್ ಪಾಷಾ,ಲೋಕೋಪಯೋಗಿ ಇಲಾಖೆ ಜೂನಿಯರ್ ಎಂಜಿನಿಯರ್ ಎಲ್.ಸಿ ಸಿಕ್ವೇರಾ ಭೇಟಿ ನೀಡಿ ದಾಖಲೆಗಳ ಪರಿಶೀಲನೆ ನಡೆಸಿದರು. ಬಳಿಕ ರಸ್ತೆ ಅಭಿವೃದ್ಧಿಗೆ ಅವಶ್ಯಕತೆಯಿರುವ ಎರಡೂ ಬದಿಯ ಜಾಗವನ್ನು ಅಳತೆ ಮಾಡಿ ರಸ್ತೆ ಅಭಿವೃದ್ಧಿಗೆ ಆವಶ್ಯಕತೆಯಿರುವ ಜಾಗವನ್ನು ಒದಗಿಸಿಕೊಡುವ ಭರವಸೆ ನೀಡಿದರು. ಈ ಭರವಸೆಯ ಹಿನ್ನಲೆಯಲ್ಲಿ ಪ್ರತಿಭಟನೆ ಹಿಂತೆಗೆದುಕೊಳ್ಳಲಾಯಿತು.
ತಾಲೂಕು ಪಂಚಾಯತ್ ಸದಸ್ಯೆ ಮೀನಾಕ್ಷಿ ಮಂಜುನಾಥ್, ಬೆಟ್ಟಂಪಾಡಿ ಗ್ರಾಮ ಪಂಚಾಯಿತಿ ಸದಸ್ಯ ಪ್ರಕಾಶ್ ರೈ ಬೈಲಾಡಿ, ರಸ್ತೆ ಸಂರಕ್ಷಣಾ ಸಮಿತಿ ಮುಖಂಡ ಪ್ರಮೋದ್ ಕುಮಾರ್ ರೈ ಕುದ್ಕಲ್, ಸ್ಥಳಿಯರಾದ ಶ್ಯಾಜಿತ್ ರೈ ಪಾಪನಡ್ಕ, ಹರಿಪ್ರಸಾದ ಶೆಟ್ಟಿ ಇಂತ್ರುಮೂಲೆ, ಮಂಜುನಾಥ ರೈ ಕುದ್ಕಲ್, ರಮೇಶ್ ರೈ, ಮನಮೋಹನ ರೈ, ನಾರಾಯಣ ರೈ, ಚಂದ್ರಹಾಸ ರೈ, ವಿಜೇತ್ ರೈ, ಸ್ಥಳೀಯ ವಿಷ್ಣು ಯುವಕ ಮಂಡಲ, ವಿಷ್ಣು ಕಿಶೋರ ಸಂಘ, ಉಪ್ಪಳಿಗೆ ಹಿರಿಯ ವಿದ್ಯಾರ್ಥಿ ಸಂಘ, ಅಡ್ಕ ಬ್ರದರ್ಸ್ ಅಜಲಡ್ಕ, ಗೆಳೆಯರ ಬಳಗ ಅಜಲಡ್ಕ, ದರ್ಬೆತ್ತಡ್ಕ ಫ್ರೆಂಡ್ಸ್, ಶೇಖಮಲೆ ಗೆಳೆಯರ ಬಳಗದ ಪದಾಧಿಕಾರಿಗಳು ಹಾಗೂ ಈ ಭಾಗದ ಸಾರ್ವಜನಿಕರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.