ಕಾಸರಗೋಡು : ಪೊಸಡಿಗುಂಪೆ ಪರಿಸರದಲ್ಲಿ ಶಿಲಾಯುಧ ಪತ್ತೆ

ಕಾಸರಗೋಡು, ಡಿ. 17: ಶಿಲಾಯುಗದ ಕಾಲಘಟ್ಟದ ಮೊನಚಾದ ಆಯುಧವೊಂದು ಪೈವಳಿಕೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಕನಿಯಾಲ ಕೆದುಕೋಡಿ ಎಂಬಲ್ಲಿ ಪತ್ತೆಯಾಗಿದೆ.
ಚಾರಣಧಾಮ ಪೊಸಡಿಗುಂಪೆ ಬೆಟ್ಟ ಪ್ರದೇಶದ ತಪ್ಪಲಿನಲ್ಲಿರುವ ಬಾಲಕೃಷ್ಣ ಭಟ್ಟರ ಅಡಿಕೆ ತೋಟದಲ್ಲಿ ಶಿಲಾಯುಗದ ನುಣುಪಾದ ಸುಮಾರು 15 ಸೆಂ.ಮೀ ಉದ್ದದ ಕಲ್ಲೊಂದು ಪತ್ತೆಯಾಗಿದ್ದು ಅಚ್ಚರಿ ಮೂಡಿಸಿದೆ. ಲೋಹ ಬಳಕೆಯ ಮೊದಲು ಮುನುಷ್ಯ ದೀರ್ಘ ಕಾಲದವರೆಗೆ ಗೆಡ್ಡೆ ಗೆಣಸುಗಳನ್ನು ಅಗೆಯಲು, ಪ್ರಾಣಿಗಳನ್ನು ಕೊಲ್ಲಲು, ಬೇಟೆಯಾಡಿದ ಪ್ರಾಣಿಗಳ ಮಾಂಸವನ್ನು ಸೀಳಲು ಮತ್ತು ಕತ್ತರಿಸಲು ಇಂತಹ ಕಲ್ಲನ್ನು ಉಪಯೋಗಿಸಿ ದ್ದಿರಬಹುದೆಂದು ಅಂದಾಜಿಸಲಾಗಿದೆ.
ಇದೇ ರೀತಿಯ ಕಲ್ಲು ವರ್ಷಗಳ ಹಿಂದೆ ಎರ್ನಾಕುಳಂ ಜಿಲ್ಲೆಯ ಕೊಡನಾಡ್ ಎಂಬಲ್ಲಿ ಪತ್ತೆಯಾಗಿತ್ತು. ಬಳಿಕ ಇದೇ ಮೊದಲ ಬಾರಿಗೆ ಮಲಬಾರು ಪ್ರದೇಶವಾದ ಕಾಸರಗೋಡು ಜಿಲ್ಲೆಯ ಕನಿಯಾಲದಲ್ಲಿ ಪತ್ತೆಯಾಗಿದೆ ಎಂದು ತಿಳಿದು ಬಂದಿದೆ.
ಪೊಸಡಿಗುಂಪೆ ಪ್ರದೇಶದಲ್ಲಿ ಹಲವು ಬಾಂಜಾರ ಗುಹೆಗಳು, ಪುರಾತನ ಸುರಂಗಗಳು ಇದ್ದು, ಇದೀಗ ಶಿಲಾಯುಗದ ಕಲ್ಲೊಂದು ಕಂಡು ಬಂದಿರುವುದು ಸ್ಥಳೀಯರಲ್ಲಿ ಕೌತುಕ ಮೂಡಿಸಿದೆ. ಈ ಪ್ರದೇಶಕ್ಕೆ ಮಂಗಳವಾರ ಕಾಞಂಗಾಡು ನೆಹರೂ ಕಾಲೇಜಿನ ಇತಿಹಾಸ ಸಂಶೋಧಕ ಪ್ರೊ.ನಂದಕುಮಾರ್ ಕೊರೋತ್ ಭೇಟಿ ನೀಡಿ ಹೆಚ್ಚಿನ ಮಾಹಿತಿ ನೀಡಲಿದ್ದಾರೆ.
ಪತ್ತೆಯಾದ ಶಿಲಾಯುಧವೆನ್ನಬಹುದಾದ ಕಲ್ಲಿನ ಬುಡ ದಪ್ಪಗಿದ್ದು ಒಂದು ಕೈಯಲ್ಲಿ ಹಿಡಿಯುವಂತಿದೆ, ತುದಿಯು ಮೊನಚಾಗಿದೆ. ಸುಮಾರು 15.ಸೆಂ.ಮೀ ಉದ್ದವಿರುವ ಕಲ್ಲಿನ ಒಂದು ಪಾಶ್ರ್ವ ಹರಿತವಾಗಿದೆ. 5.ಸೆಂ.ಮೀ ಅಗಲವಿರುವ ಕಲ್ಲು ಮಿಸೋಲಿಥಿಕ್ ಶಿಲಾಯುಗ ಕಾಲಘಟ್ಟದ ಚೆರ್ಟ್ ಬುರಿನ್ ಮೈಕ್ರೋಲಿತ್ ಶಿಲಾಯುಧವನ್ನು ಹೋಲುತ್ತದೆ ಎಂದು ತಿಳಿದುಬಂದಿದೆ.