ಕೋರೆ ಮತ್ತು ಕಲ್ಲು ಗಣಿ ಮಾಲಕರ ಸಮಸ್ಯೆಗಳ ಪರಿಹಾರಕ್ಕೆ ಕ್ರಮ: ಸಚಿವ ರಾಜಶೇಖರ ಪಾಟೀಲ್
ಬೆಳಗಾವಿ, ಡಿ.17: ಕರ್ನಾಟಕ ಕೋರೆ ಮತ್ತು ಸ್ಟೋನ್ ಕ್ರಷರ್ಸ್ ಮಾಲಕರ ಸಂಘವು ಸರಕಾರದ ಮುಂದಿಟ್ಟಿರುವ ವಿವಿಧ ಬೇಡಿಕೆಗಳಿಗೆ ಸಂಬಂಧಿಸಿದಂತೆ ಗಣಿ ಮತ್ತು ಭೂ ವಿಜ್ಞಾನ, ಅರಣ್ಯ, ಕಂದಾಯ ಸಚಿವರು ಹಾಗೂ ಉಪ ಮುಖ್ಯಮಂತ್ರಿ, ಅಧಿಕಾರಿಗಳನ್ನು ಒಳಗೊಂಡಂತೆ ಸಭೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಗಣಿ ಮತ್ತು ಭೂ ವಿಜ್ಞಾನ ಸಚಿವ ರಾಜಶೇಖರ ಪಾಟೀಲ್ ಹೇಳಿದರು.
ಸೋಮವಾರ ವಿಧಾನಸಭೆಯಲ್ಲಿ ನಿಯಮ 69ರಡಿಯಲ್ಲಿ ವಿರೋಧ ಪಕ್ಷದ ನಾಯಕ ಬಿ.ಎಸ್.ಯಡಿಯೂರಪ್ಪ ಪ್ರಸ್ತಾಪ ಮಾಡಿದ ವಿಷಯದ ಕುರಿತು ಅವರು ಈ ಮೇಲಿನಂತೆ ಪ್ರತಿಕ್ರಿಯಿಸಿದರು.
ಸುವರ್ಣ ವಿಧಾನಸೌಧದ ಎದುರಿರುವ ಕೊಂಡಸಕೊಪ್ಪದಲ್ಲಿ ಜೆಲ್ಲಿ ಕ್ರಷರ್ಸ್ ಮಾಲಕರು 13 ಬೇಡಿಕೆಗಳನ್ನು ಮುಂದಿಟ್ಟುಕೊಂಡು ಪ್ರತಿಭಟನೆ ನಡೆಸುತ್ತಿದ್ದಾರೆ. ರಾಜ್ಯ ಸರಕಾರ ಈ ಬಗ್ಗೆ ಗಮನ ಹರಿಸಬೇಕು. ಇದು ಕೇವಲ ಉದ್ಯಮಿಗಳ ಹಿತಾಸಕ್ತಿ ಕಾಪಾಡುವ ವಿಷಯವಲ್ಲ. ಮರಳು, ಜೆಲ್ಲಿ ಹಾಗೂ ಎಂಸ್ಯಾಂಡ್ ಸಿಗದೇ ಇದ್ದರೆ ರಾಜ್ಯದ ಅಭಿವೃದ್ಧಿಯೇ ಕುಂಠಿತವಾಗುತ್ತದೆ ಎಂದು ಯಡಿಯೂರಪ್ಪ ಹೇಳಿದರು.
ನಂತರ ಮಾತನಾಡಿದ ಬಿಜೆಪಿ ಸದಸ್ಯ ಜೆ.ಸಿ.ಮಾಧುಸ್ವಾಮಿ, ಕುಮಾರ್ ಬಂಗಾರಪ್ಪ, ಗೂಳಿಹಟ್ಟಿ ಶೇಖರ್ ಮತ್ತಿತರರು, ಕಲ್ಲು ಮತ್ತು ಮರಳು ಕೊರತೆಯಿಂದಾಗಿ ಅಭಿವೃದ್ಧಿ ಕುಂಟಿತವಾಗುತ್ತಿರುವ ಬಗ್ಗೆ ಸರ್ಕಾರದ ಗಮನ ಸೆಳೆದರು. ಸರಕಾರ ಮೊದಲು ಎಂಸ್ಯಾಂಡ್ ಮತ್ತು ಮರಳನ್ನು ಗಣಿ ಹಾಗೂ ನೈಸರ್ಗಿಕ ಸಂಪನ್ಮೂಲಗಳ ಕಾಯ್ದೆಯಿಂದ ಕೈ ಬಿಡಬೇಕು. ಇಲ್ಲದಿದ್ದರೆ, ಸುಮಾರು 7 ರಿಂದ 8 ಇಲಾಖೆ ಅಧಿಕಾರಿಗಳು ಕೋರೆ ನಡೆಸುವವರಿಗೆ ಕಿರುಕುಳ ನೀಡುತ್ತಲೇ ಇರುತ್ತಾರೆ ಎಂದು ಅವರು ದೂರಿದರು.
ಬೆಳಗ್ಗೆ ನಡೆದ ಚರ್ಚೆ ಬಳಿಕ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿದ ಸಚಿವ ರಾಜಶೇಖರ ಪಾಟೀಲ್, ಕೋರೆ ಹಾಗೂ ಸ್ಟೋನ್ ಕ್ರಷರ್ ಮಾಲಕರು ಪ್ರತಿಭಟನೆ ನಡೆಸುತ್ತಿರುವ ಸ್ಥಳಕ್ಕೆ ಭೇಟಿ ನೀಡಿ, ಅವರ ಬೇಡಿಕೆಗಳ ಈಡೇರಿಕೆಗೆ ಸಂಬಂಧಿಸಿದಂತೆ ಸರಕಾರ ಚರ್ಚಿಸಿ ಅಗತ್ಯ ಕ್ರಮ ಕೈಗೊಳ್ಳಲಿದ್ದು, ಪ್ರತಿಭಟನೆಯನ್ನು ಹಿಂಪಡೆಯುವಂತೆ ಮನವಿ ಮಾಡಿದರು.







