ಮಂಗಳೂರು: ಬಿಎಸ್ಸೆಎನ್ನೆಎಲ್ ಗುತ್ತಿಗೆ ನೌಕರರ ಪ್ರತಿಭಟನೆ

ಮಂಗಳೂರು, ಡಿ.17: ಬಾಕಿ ವೇತನ ಪಾವತಿಸಬೇಕು ಎಂದು ಒತ್ತಾಯಿಸಿ ಬಿಎಸ್ಸೆಎನ್ನೆಎಲ್ ಗುತ್ತಿಗೆ ನೌಕರರು ಸಿಐಟಿಯು ನೇತೃತ್ವದಲ್ಲಿ ಬಿಎಸ್ಸೆಎನ್ನೆಎಲ್ ಪ್ರಧಾನ ಕಚೇರಿಯ ಮುಂದೆ ಸೋಮವಾರ ಪ್ರತಿಭಟನೆ ನಡೆಸಿದರು.
ಈ ಸಂದರ್ಭ ಮಾತನಾಡಿದ ಸಿಐಟಿಯು ದ.ಕ. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುನೀಲ್ ಕುಮಾರ್ ಬಜಾಲ್ ಗುತ್ತಿಗೆ ಕಾರ್ಮಿಕರನ್ನು ಬೇಕಾದ ಹಾಗೆ ದುಡಿಸಿ ಕೊನೆಗೆ ವೇತನವನ್ನು ನೀಡದೆ ದುಡಿಸುವ ಮಾಲಕ ವರ್ಗದ ನೀತಿಗಳು ಖಂಡನೀಯ. ಬಿಎಸ್ಸೆಎನ್ನೆಎಲ್ ಆಡಳಿತ ವರ್ಗ ಹಾಗೂ ಗುತ್ತಿಗೆದಾರರು 2 ತಿಂಗಳಿಂದ ಗುತ್ತಿಗೆ ಕಾರ್ಮಿಕರಿಗೆ ವೇತನ ನೀಡದೆ ದುಡಿಸುತ್ತಿರುವುದು ಕೇಂದ್ರ ಸರಕಾರದ ಒಳ್ಳೆಯ ದಿನಗಳನ್ನು ನೆನಪಿಸುತ್ತದೆ ಎಂದರು.
ಸಿಐಟಿಯು ದ.ಕ. ಜಿಲ್ಲಾಧ್ಯಕ್ಷ ವಸಂತ ಆಚಾರಿ ಮಾತನಾಡಿ ಸಾರ್ವಜನಿಕ ವಲಯಗಳ ಘಟಕಗಳನ್ನು ಮಾರುತ್ತಿರುವ ಕೇಂದ್ರ ಸರಕಾರದ ನೀತಿಗಳು ಎಲ್ಲಾ ಸಮಸ್ಸೆಗಳಿಗೆ ಕಾರಣವಾಗಿದೆ.ಸರಕಾರದ ನೀತಿಗಳಿಗೂ ನಮ್ಮ ಸಮಸ್ಸೆಗಳಿಗೂ ನೇರ ಸಂಬಂಧವಿದೆ ಎಂದರು.
ಉಡುಪಿ ಜಿಲ್ಲಾಧ್ಯಕ್ಷ ಶಶಿಧರ ಗೊಲ್ಲ ಮಾತನಾಡಿ ಸದಾ ನಷ್ಟವನ್ನು ಹೊಂದಿರುವ ಬಿಎಸ್ಸೆಎನ್ನೆಎಲ್ ಕಾರ್ಮಿಕರನ್ನು ಬೀದಿಪಾಲು ಮಾಡುವ ಹುನ್ನಾರ ಮಾಡುತ್ತಿದೆ. ಇದರ ವಿರುದ್ಧ ಜನತೆ ಧ್ವನಿ ಎತ್ತಬೇಕು ಎಂದರು.
ಪ್ರತಿಭಟನೆಯಲ್ಲಿ ಮುಖಂಡರಾದ ಉದಯ ಕುಮಾರ್, ಮೋಹನ್, ಯೋಗಿಶ್ ಜಪ್ಪಿನಮೊಗರು, ದಿನೇಶ್, ಸುನೀಲ್, ನಿತ್ಯಾನಂದ, ರಮೇಶ್ ಮತ್ತಿತರರು ಪಾಲ್ಗೊಂಡಿದ್ದರು.







