ಸುಪ್ರೀಂ ಕೋರ್ಟ್ ತೀರ್ಪನ್ನೇ ಧಿಕ್ಕರಿಸಲು ಸರಕಾರದ ಪರೋಕ್ಷ ಕರೆ ಅಪಾಯಕಾರಿ ಬೆಳವಣಿಗೆ : ಇಂದಿರಾ ಜೈಸಿಂಗ್
ಬಿ.ವಿ.ಕಕ್ಕಿಲ್ಲಾಯ ಪ್ರೇರಿತ ಉಪನ್ಯಾಸ ಕಾರ್ಯಕ್ರಮ

ಮಂಗಳೂರು, ಡಿ.17: ಶಬರಿಮಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ನೀಡಿದ ತೀರ್ಪನ್ನೇ ಧಿಕ್ಕರಿಸಲು ಬಿಜೆಪಿ ನೇತೃತ್ವದ ಕೇಂದ್ರ ಸರಕಾರವು ಪರೋಕ್ಷವಾಗಿ ಜನರಿಗೆ ಕರೆ ನೀಡುತ್ತಿರುವುದು ಅಪಾಯಕಾರಿ ಬೆಳವಣಿಗೆಯಾಗಿದೆ ಎಂದು ಸರ್ವೋಚ್ಚ ನ್ಯಾಯಾಲಯದ ಹಿರಿಯ ನ್ಯಾಯವಾದಿ ಹಾಗೂ ಭಾರತದ ಮಾಜಿ ಸಹ ಸಾಲಿಸಿಟರ್ ಜನರಲ್ ಇಂದಿರಾ ಜೈಸಿಂಗ್ ಹೇಳಿದ್ದಾರೆ.
ಬೆಂಗಳೂರಿನ ಹೊಸತು ಪತ್ರಿಕೆ ಮತ್ತು ಎಂ.ಎಸ್ ಕೃಷ್ಣನ್ ಸ್ಮಾರಕ ಪ್ರತಿಷ್ಠಾನ ಹಾಗೂ ಮಂಗಳೂರಿನ ಸಮದರ್ಶಿ ವೇದಿಕೆಯು ಮಂಗಳೂರು ವಿಶ್ವವಿದ್ಯಾನಿಲಯ ಕಾಲೇಜು ಮತ್ತು ಮಂಗಳೂರು ವಿವಿ ಸಂಧ್ಯಾ ಕಾಲೇಜಿನ ಸಹಯೋಗದಲ್ಲಿ ‘ಭಾರತೀಯ ನ್ಯಾಯ ವ್ಯವಸ್ಥೆಯಲ್ಲಿ ಲಿಂಗ ಸಮಾನತೆ’ ವಿಷಯಕ್ಕೆ ಸಂಬಂಧಿಸಿ ಸೋಮವಾರ ನಗರದ ಮಂಗಳೂರು ವಿವಿ ಕಾಲೇಜಿನ ಡಾ. ಶಿವರಾಮ ಕಾರಂತ ಸಭಾಭವನದಲ್ಲಿ ಹಮ್ಮಿಕೊಂಡ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು.
ತ್ರಿವಳಿ ತಲಾಖ್‌ಗೆ ಸಂಬಂಧಿಸಿದಂತೆ 2017ರಲ್ಲಿ ಸುಪ್ರೀಂ ಕೋರ್ಟ್‌ನಿಂದ ಹೊರಬಿದ್ದ ತೀರ್ಪು ತಮ್ಮಿಂದಾದುದು ಎಂದು ಬಿಜೆಪಿ-ಕೇಂದ್ರ ಸರಕಾರ ಬಿಂಬಿಸಿವೆ. ವಾಸ್ತವವಾಗಿ ಅದರಲ್ಲಿ ಬಿಜೆಪಿಯ ಪಾತ್ರವೇನೂ ಇಲ್ಲ. ಸರ್ವೋಚ್ಚ ನ್ಯಾಯಾಲಯವೇ ಮಹಿಳಾ ಪರ ತೀರ್ಪನ್ನು ನೀಡಿದೆ. 2018ರಲ್ಲಿ ಶಬರಿಮಲೆಗೆ ಮಹಿಳೆಯರ ಪ್ರವೇಶಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಸ್ವಾಗತಾರ್ಹ ತೀರ್ಪು ನೀಡಿದೆ. ಅದನ್ನು ಜಾರಿಗೊಳಿಸಬೇಕಾದ ಸರಕಾರವು ಪರೋಕ್ಷವಾಗಿ ಸುಪ್ರೀಂ ಕೋರ್ಟ್ ತೀರ್ಪನ್ನೇ ಜನತೆ ತಿರಸ್ಕರಿಸುವಂತೆ ಒತ್ತಡ ಹೇರಿದೆ. ತ್ರಿವಳಿ ತಲಾಖ್ ತೀರ್ಪಿನ ವಿಷಯದಲ್ಲಿ ಕೇಂದ್ರ ಸರಕಾರ ವಹಿಸಿದ ಅಸ್ಥೆಯು ಶಬರಿಮಲೆ ವಿಚಾರದಲ್ಲಿ ಮಾಡದಿರುವುದು ಕಳವಳಕಾರಿಯಾಗಿದೆ ಎಂದು ಇಂದಿರಾ ಜೈಸಿಂಗ್ ನುಡಿದರು.
ಕಳೆದ ಹಲವು ವರ್ಷಗಳಲ್ಲಿ ಮಹಿಳಾಪರ ತೀರ್ಪುಗಳು ನ್ಯಾಯಾಲಯದಿಂದ ಹೊರಬಿದ್ದಿವೆ. ಇದು ಹೋರಾಟದಿಂದ ಆಗಿರುವುದೇ ಹೊರತು ಯಾವುದೇ ಸರಕಾರದ ಕೃಪೆಯಿಂದ ಆದುದಲ್ಲ. ಆದರೆ ಇತ್ತೀಚಿನ ದಿನಗಳಲ್ಲಿ ನ್ಯಾಯಾಲಯಗಳಲ್ಲಿ ಮಹಿಳೆಯರಿಗೆ ನ್ಯಾಯ ಸಿಕ್ಕರೂ ಕೂಡ ಅದು ದಕ್ಕದ ಹಾಗೆ ವ್ಯವಸ್ಥಿತ ಷಡ್ಯಂತ್ರ ನಡೆಯುತ್ತಿವೆ. ಇಂತಹವುಗಳ ವಿರುದ್ಧ ಧ್ವನಿ ಎತ್ತುವ ಅಗತ್ಯವಿದೆ ಎಂದು ಇಂದಿರಾ ಜೈಸಿಂಗ್ ತಿಳಿಸಿದರಲ್ಲದೆ, ನ್ಯಾಯಾಂಗವು ಮಹಿಳಾಪರ ತೀರ್ಪುಗಳನ್ನು ನೀಡಿದರೂ ಕೂಡ ಕಾರ್ಯಾಂಗ ಮತ್ತು ಶಾಸಕಾಂಗವು ಅದರ ಪಾಲನೆಯಲ್ಲಿ ಎಡವಿ ಬೀಳುತ್ತಿವೆ ಎಂದರು.
ಹಿಂದೂ ಧರ್ಮದ ಉಳಿವಿಗೆ ಮಹಿಳೆಯರು ಗಂಡು ಮಕ್ಕಳನ್ನೇ ಹೆರುವ ಯಂತ್ರಗಳಾಗಬೇಕು ಎಂದು ಆರೆಸೆಸ್ಸ್ ಮುಖ್ಯಸ್ಥರು ಬಹಿರಂಗವಾಗಿ ಹೇಳುತ್ತಾರೆ. ಮಹಿಳೆಯರು ಎರಡನೇ ದರ್ಜೆ ನಾಗರಿಕರು ಎಂದು ಪ್ರತಿಪಾದಿಸುವ ಮನುಸ್ಮತಿಯನ್ನು ಆರೆಸೆಸ್ಸ್ ಮತ್ತು ಬಿಜೆಪಿ ಬಹಿರಂಗವಾಗಿಯೇ ಅಪ್ಪಿಕೊಂಡಿರುವುದು ಗಮನಾರ್ಹ ವಿಚಾರವಾಗಿದೆ ಎಂದ ಇಂದಿರಾ ಜೈಸಿಂಗ್, ಲಿಂಗ ತಾರತಮ್ಯ ಯಾವುದೇ ಒಂದು ಧರ್ಮಕ್ಕೆ ಸೀಮಿತವಾದುದಲ್ಲ. ಋತುಸ್ರಾವದ ಸಮಯದಲ್ಲಿ ಸ್ಯಾನಿಟರಿ ನ್ಯಾಪ್‌ಕಿನ್ ಬಳಸುವುದನ್ನು ಇಸ್ಲಾಮ್ ಧರ್ಮದ ಹೆಸರಿನಲ್ಲಿ ವಿರೋಧಿಸಿದರೆ ಕೆಥೋಲಿಕ್ ಕ್ರೈಸ್ತ ಧರ್ಮೀಯರಲ್ಲಿ ಜೀವಕ್ಕೆ ಅಪಾಯವಿರುವ ಸಂದರ್ಭದಲ್ಲೂ ಗರ್ಭಪಾತಕ್ಕೆ ಅವಕಾಶ ನೀಡುತ್ತಿಲ್ಲ ಎಂದರು.
ದೇಶದ ಆಡಳಿತವು ಧರ್ಮದ ಹೆಸರಿನಲ್ಲಿ ಪುಂಡಾಟಿಕೆ ನಡೆಸುವ ಗುಂಪುಗಳ ಕೈಯಲ್ಲಿ ಸಿಲುಕಿದೆಯೋ ಏನೋ ಎಂಬಂತೆ ಭಾಸವಾಗುತ್ತಿದೆ. ಆಹಾರ, ಧಾರ್ಮಿಕ ನಂಬಿಕೆ, ಉಡುಗೆ ತೊಡುಗೆ ಮತ್ತಿತರ ವಿಚಾರಗಳಲ್ಲಿ ವೈಯಕ್ತಿಕ ಸ್ವಾತಂತ್ರ್ಯ ಕಿತ್ತುಕೊಳ್ಳುವ ಪ್ರಯತ್ನ ನಡೆಯುತ್ತಿರುವುದು ಶೋಷಣೆಯ ಇನ್ನೊಂದು ಮುಖವಾಗಿದೆ ಎಂದು ಇಂದಿರಾ ಜೈಸಿಂಗ್ ನುಡಿದರು.
ಡಾ. ಶ್ರೀನಿವಾಸ ಕಕ್ಕಿಲಾಯ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು.
ಈ ಸಂದರ್ಭ ನಡೆದ ಸಂವಾದದಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಇಂದಿರಾ ಜೈಸಿಂಗ್ ಮಹಿಳೆಯರು ಅಸಂಘಟಿತ ವಲಯದಲ್ಲಿರುವ ದೇಶದ ಅತೀ ದೊಡ್ಡ ಶ್ರಮಿಕ ವರ್ಗವಾಗಿದೆ. ಆದರೆ ಇಲ್ಲೇ ಹೆಚ್ಚು ದೌರ್ಜನ್ಯಗಳು ನಡೆಯುತ್ತವೆ. ನಗರದ ಹಲವು ಮಹಿಳೆಯರು ಕೆಲಸದ ವೇಳೆ ತಮ್ಮ ಮೇಲೆ ನಡೆದಿದ್ದ ದೌರ್ಜನ್ಯ ಪ್ರಕರಣಗಳನ್ನು ‘ಮೀಟೂ’ ಹೆಸರಿನಲ್ಲಿ ಬಹಿರಂಗಪಡಿಸಿದರು. ಹಾಗಂತ ಈ ಚಳವಳಿಯಲ್ಲಿ ತಪ್ಪುಹುಡುಕುವ ಅಗತ್ಯವಿಲ್ಲ ಎಂದರು.







