ಶಿವಮೊಗ್ಗ: ಹೆರಿಗೆ ಮಾಡಲು ಲಂಚ ಪಡೆದ ವೈದ್ಯೆಗೆ 1 ವರ್ಷ ಜೈಲು, 55 ಸಾವಿರ ರೂ. ದಂಡ

ಶಿವಮೊಗ್ಗ, ಡಿ.17: ಹೆರಿಗೆ ಮಾಡಿಸಲು 2 ಸಾವಿರ ರೂ. ಲಂಚ ಪಡೆಯುವ ವೇಳೆ ಲೋಕಾಯುಕ್ತ ಬಲೆಗೆ ಬಿದ್ದಿದ್ದ ಹೊಸನಗರ ಸರ್ಕಾರಿ ಆಸ್ಪತ್ರೆಯ ಡಾಕ್ಟರ್ ಡಾ. ಶೋಭನಾ ಭೋಜರಾಜ್ ಎಂಬವರಿಗೆ ಪ್ರಧಾನ ಜಿಲ್ಲಾ ಮತ್ತು ವಿಶೇಷ ನ್ಯಾಯಾಧೀಶರು 1 ವರ್ಷ 6 ತಿಂಗಳು ಸಜೆ ಹಾಗೂ ರೂ. 55,000 ರೂ. ದಂಡ ವಿಧಿಸಿ ತೀರ್ಪು ನೀಡಿದ್ದಾರೆ.
ಘಟನೆ ಹಿನ್ನೆಲೆ: ಹೊಸನಗರ ತಾ. ಕೋಟೆತಾರಿಗದ ಹಿರೇಮೈತಿ ಗ್ರಾಮದ ವೀಣಾ ಮಹೇಶ್ ಎಂಬುವವರು 2009 ರ ಸೆಪ್ಟಂಬರ್ ನಲ್ಲಿ ಹೆರಿಗೆಗಾಗಿ ಹೊಸನಗರ ತಾಲೂಕು ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದರು. ಸಿಜೇರಿಯನ್ ಮಾಡಿಸಲು 2,800 ರೂ. ನೀಡುವಂತೆ ಡಾ.ಶೋಭನಾ ಭೋಜರಾಜ್‍ರವರು ಅವರ ಪತಿ ಮಹೇಶ್‍ಗೆ ಡಿಮ್ಯಾಂಡ್ ಮಾಡಿದ್ದರು.
ಈ ಕುರಿತಂತೆ ಮಹೇಶ್‍ರವರು ಲೋಕಾಯುಕ್ತಕ್ಕೆ ದೂರು ನೀಡಿದ್ದರು. ಮಹೇಶ್‍ರವರಿಂದ ಹಣ ಪಡೆಯುತ್ತಿದ್ದ ವೇಳೆಯೇ ಡಾಕ್ಟರ್ ರನ್ನು ಲೋಕಾಯುಕ್ತ ಪೊಲೀಸ್ ಇನ್ಸ್‍ಪೆಕ್ಟರ್ ಕರಿಬಸವನಗೌಡ ನೇತೃತ್ವದ ತಂಡ ವಶಕ್ಕೆ ಪಡೆದುಕೊಂಡಿತ್ತು. ನಂತರ ಅವರನ್ನು ಬಂಧಿಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಿತ್ತು. ತದನಂತರ ತನಿಖೆ ನಡೆಸಿ, ಡಾಕ್ಟರ್ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿಯನ್ನು ಲೋಕಾಯುಕ್ತ ಪೊಲೀಸರು ಸಲ್ಲಿಸಿದ್ದರು.
ಪ್ರಕರಣದ ವಿಚಾರಣೆ ನಡೆಸಿದ ಪ್ರಧಾನ ಜಿಲ್ಲಾ ಮತ್ತು ವಿಶೇಷ ನ್ಯಾಯಾಧೀಶರಾದ ಪ್ರಭಾವತಿ ಎಂ. ಹಿರೇಮಠ್‍ರವರು ಡಾಕ್ಟರ್ ಗೆ ಭ್ರಷ್ಟಾಚಾರ ಪ್ರತಿಬಂಧಕ ಕಾಯ್ದೆ- 1988 ರ ಕಲಂ 13 (2) ರ ಅಡಿ 1 ವರ್ಷ 6 ತಿಂಗಳ ಶಿಕ್ಷೆ ಮತ್ತು 55,000 ರೂ. ದಂಡ ವಿಧಿಸಿ ತೀರ್ಪು ನೀಡಿದ್ದಾರೆ. ಸರಕಾರದ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕಿ ಬಿ.ವಿ.ಗೀತಾ ಶಿವಮೂರ್ತಿಯವರು ವಾದ ಮಂಡಿಸಿದ್ದರು.







