ಮೋದಿಗೆ ಕರಿ ಬಾವುಟ ಪ್ರದರ್ಶನ: ಯುವತಿಗೆ ಥಳಿಸಿದ ಬಿಜೆಪಿಗರು, ಪೊಲೀಸರು
ಪ್ರಯಾಗ್ ರಾಜ್ ನಲ್ಲಿ ನಡೆದ ಘಟನೆ
ಅಲಹಾಬಾದ್, ಡಿ. 17: ಪ್ರಯಾಗ್ ರಾಜ್ (ಈ ಹಿಂದಿನ ಅಲಹಾಬಾದ್) ನಲ್ಲಿ ಡಿಸೆಂಬರ್ 16ರಂದು ನಡೆದ ಪ್ರಧಾನಿ ನರೇಂದ್ರ ಮೋದಿ ಅವರ ರ್ಯಾಲಿಯಲ್ಲಿ ಕಪ್ಪು ಪತಾಕೆ ಪ್ರದರ್ಶಿಸಿದ ಯುವತಿಯೋರ್ವರ ಮೇಲೆ ಬಿಜೆಪಿ ಬೆಂಬಲಿಗರು ಹಾಗೂ ಪೊಲೀಸರು ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.
ಅಂಡಾವಾದಲ್ಲಿ ನಡೆದ ರ್ಯಾಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಮಾತನಾಡುತ್ತಿರುವ ಸಂದರ್ಭ ಮೋದಿ ವಿರುದ್ಧ ಘೋಷಣೆಗಳನ್ನು ಕೂಗಿದ ಹಾಗೂ ಕರಿ ಪತಾಕೆ ಪ್ರದರ್ಶಿಸಿದ ರಾಮ ಯಾದವ್ ಎಂಬ ಯುವತಿ ಮೇಲೆ ಬಿಜೆಪಿ ಬೆಂಬಲಿಗರು ಹಲ್ಲೆ ನಡೆಸುತ್ತಿರುವುದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ವೀಡಿಯೊದಲ್ಲಿ ಕಂಡು ಬಂದಿದೆ. ರ್ಯಾಲಿ ಸ್ಥಳದಿಂದ ದೂರ ಹೋಗುವಂತೆ ಪೊಲೀಸರು ಕೂಡ ರಾಮ ಯಾದವ್‌ಗೆ ಥಳಿಸಿತ್ತಿರುವುದು ವೀಡಿಯೊದಲ್ಲಿ ದಾಖಲಾಗಿದೆ.
ಯಾದವ್ ಅಲಹಾಬಾದ್ ವಿಶ್ವವಿದ್ಯಾನಿಲಯದ ವಿದ್ಯಾರ್ಥಿನಿ. ಯಾದವ್ ಈ ಹಿಂದೆ ಪ್ರಯಾಗ್‌ರಾಜ್‌ನಲ್ಲಿ 2018 ಜುಲೈಯಲ್ಲಿ ನಡೆದ ರ್ಯಾಲಿಯಲ್ಲಿ ಅಮಿತ್ ಶಾ ವಿರುದ್ಧ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ಶಾ ಅವರ ಬೆಂಗಾವಲು ವಾಹನಗಳನ್ನು ಅಡ್ಡಗಟ್ಟಿದ ಆರೋಪದಲ್ಲಿ ಇತರ ಇಬ್ಬರ ಜೊತೆಗೆ ಯಾದವ್ ಅವರಿಗೆ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಲಾಗಿತ್ತು. ಸಾಮಾಜಿಕ ಜಾಲ ತಾಣದಲ್ಲಿ ವೈರಲ್ ಆದ ವೀಡಿಯೊ ವೀಕ್ಷಿಸಿ ಟ್ವಿಟ್ಟರಿಗರು ತೀವ್ರ ಖಂಡನೆ ವ್ಯಕ್ತಪಡಿಸಿದ್ದಾರೆ. ಬಿಜೆಪಿಯ ‘ಬೇಟಿ ಪಡಾವೊ, ಬೇಟಿ ಬಚಾವೊ ಅಭಿಯಾನ’ಕ್ಕೆ ಇದು ಅವಮಾನ ಎಂದು ಅವರು ಹೇಳಿದ್ದಾರೆ.