ಕರ ವಸೂಲಿಗಾರರ ನೇಮಕಾತಿಯಲ್ಲಿ ಅವ್ಯವಹಾರ ಆರೋಪ: ಶಿವಮೊಗ್ಗ ಜಿ.ಪಂ. ಕಚೇರಿ ಮುಂಭಾಗ ಪ್ರತಿಭಟನೆ

ಶಿವಮೊಗ್ಗ, ಡಿ. 17: ಜಿಲ್ಲೆಯ ಭದ್ರಾವತಿ ತಾಲೂಕಿನ ಕೂಡ್ಲಿಗೆರೆ ಗ್ರಾಮ ಪಂ. ನಲ್ಲಿ ಕರ ವಸೂಲಿಗಾರರ ನೇಮಕಾತಿಯಲ್ಲಿ ಅವ್ಯಹಾರ-ಭ್ರಷ್ಟಾಚಾರ ನಡೆದಿದೆ ಎಂದು ಆರೋಪಿಸಿ, ಸೋಮವಾರ ನಗರದ ಜಿಲ್ಲಾ ಪಂ. ಕಚೇರಿ ಮುಂಭಾಗ ನೊಂದ ಅಭ್ಯರ್ಥಿ ಹಾಗೂ ಗ್ರಾಮಸ್ಥರು ಧರಣಿ ನಡೆಸಿದರು.
2016 ರಲ್ಲಿ ಕೂಡ್ಲಿಗೆರೆ ಗ್ರಾಮ ಪಂ. ನಲ್ಲಿ ಕರ ವಸೂಲಿಗಾರರ ಹುದ್ದೆ ಖಾಲಿಯಿತ್ತು. ಈ ಹುದ್ದೆಗೆ ಪತ್ರಿಕಾ ಜಾಹೀರಾತು ನೀಡಲಾಗಿತ್ತು. ಅದರಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಂದ ಮಾನ್ಯತೆ ಪಡೆದ ಸಂಸ್ಥೆಯಿಂದ ಕಂಪ್ಯೂಟರ್ ತರಬೇತಿ ಪ್ರಮಾಣ ಪತ್ರ ಹೊಂದಿದ ಸ್ಥಳೀಯ ಅಭ್ಯರ್ಥಿಗಳನ್ನಷ್ಟೆ ನೇಮಕಾತಿಯಲ್ಲಿ ಅವಕಾಶ ಕಲ್ಪಿಸಲಾಗುವುದು ಎಂದು ಷರತ್ತು ವಿಧಿಸಲಾಗಿತ್ತು.
ಹಾಗೆಯೇ ಈ ನೇಮಕಾತಿಯಲ್ಲಿ ಯಾವುದೇ ಮೀಸಲಾತಿ ಅನ್ವಯವಾಗುವುದಿಲ್ಲ ಎಂದು ಕೂಡ ಸ್ಪಷ್ಟಪಡಿಸಲಾಗಿತ್ತು. ಅದರಂತೆ 21 ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದರು. ಇದರಲ್ಲಿ ಅಂಬಿಕಾ ಎಂಬುವರು ಪಿಯುಸಿಯಲ್ಲಿ ಶೇ. 73 ರಷ್ಟು ಅಂಕ ಗಳಿಸಿದ್ದರು. ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯಿಂದ ಕಂಪ್ಯೂಟರ್ ತರಬೇತಿ ಪಡೆದುಕೊಂಡಿದ್ದರು. ಜೊತೆಗೆ ಎಸ್.ಟಿ.ಪ್ರಮಾಣ ಪತ್ರ ಕೂಡ ಸಲ್ಲಿಸಿದ್ದರು. ಆದರೆ ಇವರಿಗೆ ಬದಲಾಗಿ ಪಿಯುಸಿಯಲ್ಲಿ ಶೇ. 40 ರಷ್ಟು ಅಂಕ ಪಡೆದಿದ್ದ ಹಾಗೂ ಕಿಯೋನಿಕ್ಸ್‍ನಿಂದ ಕಂಪ್ಯೂಟರ್ ತರಬೇತಿ ಪಡೆದಿದ್ದ ಬೇರೊಬ್ಬಳು ಯುವತಿಯನ್ನು ಅರ್ಹ ವ್ಯಕ್ತಿಯೆಂದು ಆಯ್ಕೆ ಮಾಡಲಾಗಿದೆ. ಎಲ್ಲದಕ್ಕಿಂತ ಮುಖ್ಯವಾಗಿ ಅಂಬಿಕಾರವರು ಕಂಪ್ಯೂಟರ್ ಸಾಕ್ಷರತೆ ಪಡೆದಿಲ್ಲವೆಂದು ಗ್ರಾ.ಪಂ.ನವರು ಸುಳ್ಳು ಹೇಳಿದ್ದರು ಎಂದು ಮನವಿ ಪತ್ರದಲ್ಲಿ ದೂರಲಾಗಿದೆ.
ಈ ಕುರಿತಂತೆ ಅಂಬಿಕಾರವರು ತಾಲೂಕು ಪಂ. ಹಾಗೂ ಜಿಲ್ಲಾ ಪಂ. ಗೆ ಪತ್ರ ಬರೆದು ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ. ಈ ಕಾರಣದಿಂದ ಜಿ.ಪಂ. ಸಿಇಓರವರು ತನಿಖೆ ನಡೆಸಿ, ನ್ಯಾಯ ಕಲ್ಪಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದ್ದಾರೆ. ಪ್ರತಿಭಟನೆಯಲ್ಲಿ ನೊಂದ ಅಭ್ಯರ್ಥಿ ಅಂಬಿಕಾ ಸೇರಿದಂತೆ ಹಲವರಿದ್ದರು.







