ನಾಲ್ವರು ತೃತೀಯಲಿಂಗಿಗಳಿಗೆ ಶಬರಿಮಲೆ ದೇವಸ್ಥಾನ ಪ್ರವೇಶಿಸಲು ಅನುಮತಿ
ಶಬರಿಮಲೆ,ಡಿ.17: ಶಬರಿಮಲೆ ದೇವಸ್ಥಾನ ಪ್ರವೇಶಿಸಲು ನಾಲ್ವರು ತೃತೀಯ ಲಿಂಗಿಗಳಿಗೆ ಕೇರಳ ಪೊಲೀಸರು ಸೋಮವಾರ ಅನುಮತಿ ನೀಡಿದ್ದಾರೆ. ಇವರು ಮಂಗಳವಾರ ಪೊಲೀಸ್ ರಕ್ಷಣೆಯಲ್ಲಿ ಶಬರಿಮಲೆ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಲಿದ್ದಾರೆ. ರವಿವಾರದಂದು ಈ ನಾಲ್ವರಿಗೆ ಶಬರಿಮಲೆ ಪ್ರವೇಶಕ್ಕೆ ಅನುಮತಿ ನಿರಾಕರಿಸಲಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ತೃತೀಯ ಲಿಂಗಿಗಳಾದ ಅನನ್ಯ, ತೃಪ್ತಿ, ಅವಂತಿಕಾ ಮತ್ತು ರಂಜುಮೋಳ್ ಅವರನ್ನು ಪೊಲೀಸರು ರವಿವಾರ ಕಾನೂನು ವ್ಯವಸ್ಥೆಯ ಕಾರಣ ನೀಡಿ ಅಯ್ಯಪ್ಪ ಯಾತ್ರೆಯ ಪ್ರಮುಖ ನಿಲುಗಡೆ ತಾಣ ಎರಿಮಲೆಯಿಂದ ವಾಪಸ್ ಕಳುಹಿಸಿದ್ದರು.
ವಾಪಸ್ ತೆರಳಿ ಪುರುಷರ ಬಟ್ಟೆ ಹಾಕಿಬರುವಂತೆ ಪೊಲೀಸರು ನಮಗೆ ಸೂಚಿಸಿದ್ದರು ಮತ್ತು ನಮ್ಮ ಬಗ್ಗೆ ಅವಮಾನಕಾರಿಯಾಗಿ ಮಾತನಾಡಿದ್ದರು ಎಂದು ತೃತೀಯಲಿಂಗಿಗಳು ದೂರಿದ್ದರು. ತೃತೀಯ ಲಿಂಗಿಗಳ ದೇಗುಲ ಪ್ರವೇಶಕ್ಕೆ ಯಾವುದೇ ನಿರ್ಬಂಧವಿಲ್ಲ ಎಂದು ದೇಗುಲದ ಇಬ್ಬರು ತಂತ್ರಿಗಳು ಮತ್ತು ಪಂದಲಂನ ರಾಜಮನೆತನ ತಿಳಿಸಿದ ನಂತರ ಇವರಿಗೆ ಪ್ರವೇಶಕ್ಕೆ ಅನುಮತಿ ನೀಡಲಾಗಿದೆ.
ಸೆಪ್ಟೆಂಬರ್ 28ರಂದು ಸರ್ವೋಚ್ಚ ನ್ಯಾಯಾಲಯ ನೀಡಿದ ಆದೇಶದಲ್ಲಿ ಎಲ್ಲ ವಯಸ್ಸಿನ ಮಹಿಳೆಯರಿಗೆ ಶಬರಿಮಲೆ ದೇಗುಲ ಪ್ರವೇಶಕ್ಕೆ ಅನುಮತಿ ನೀಡಲಾಗಿದೆ. ಆದರೆ ಅದರಲ್ಲಿ ತೃತೀಯ ಲಿಂಗಿಗಳ ಬಗ್ಗೆ ಯಾವುದೇ ನಿರ್ದಿಷ್ಟ ಸೂಚನೆ ನೀಡಲಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.