ಹನೂರು: ಪೊಲೀಸ್ ವಾಹನ ಅಪಘಾತ; ಪ್ರಾಣಾಪಾಯದಿಂದ ಪಾರು

ಹನೂರು,ಡಿ.17: ಚಾಲಕನ ನಿಯಂತ್ರಣ ತಪ್ಪಿದ ಪೊಲೀಸ್ ವಾಹನವೊಂದು ಖಾಸಗಿ ಜಮೀನಿನಲ್ಲಿ ಪಲ್ಟಿಯಾಗಿರುವ ಘಟನೆ ಮಲೆಮಾದೇಶ್ವರ ಕ್ರೀಡಾಂಗಣದ ಸಮೀಪ ನಡೆದಿದೆ
ಸುಳವಾಡಿ ಗ್ರಾಮದಲ್ಲಿ ವಿಷ ಸೇವನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಕೋಟೆಪೂದೆ ಗ್ರಾಮದ ಮೈಲಿಬಾಯಿ ಎಂಬುವವರು ಮೃತಪಟ್ಟಿದ್ದರು .ಈ ಸಂಬಂಧ ಚಾಮರಾಜನಗರ ಜಿಲ್ಲೆಯ ಮೀಸಲು ಸಶಸ್ತ್ರ ಪಡೆಯ ಸಿಬ್ಬಂದಿಗಳನ್ನು ಬಂದೋಬಸ್ತ್ ಗಾಗಿ ನೇಮಿಸಲಾಗಿತ್ತು. ತಮ್ಮ ಕರ್ತವ್ಯದ ಅವಧಿ ಮುಗಿದ ನಂತರ ಡೀಸೆಲ್ ಖಾಲಿಯಾಗಿದ್ದರಿಂದ ಕೋಟೆ ಪೋದೆ ಗ್ರಾಮದಿಂದ ಹನೂರು ಪಟ್ಟಣದ ಇಂಡಿಯನ್ ಆಯಿಲ್ ಪೆಟ್ರೋಲ್ ಬಂಕ್ ಸಹಾಯಕ ನಿರೀಕ್ಷಕ ಪ್ರಶಾಂತ್ ಹಾಗೂ ಚಾಲಕ ರಾಜೇಶ್ ಆಗಮಿಸುತ್ತಿದ್ದರು. ಈ ವೇಳೆ ಹನೂರು ಪಟ್ಟಣದ ಹೊರವಲಯದಲ್ಲಿರುವ ಮಲೆಮಾದೇಶ್ವರ ಕ್ರೀಡಾಂಗಣದ ಸಮೀಪ ಪೊಲೀಸ್ ವಾಹನದ ಸ್ಟೇರಿಂಗ್ ರಾಡ್ ಕಟ್ಟಾದ ಪರಿಣಾಮ ಖಾಸಗಿ ಜಮೀನಿನ ಮರಕ್ಕೆ ಢಿಕ್ಕಿ ಹೊಡೆದಿದೆ ಎನ್ನಲಾಗಿದೆ. ಅದೃಷ್ಟವಶಾತ್ ವಾಹನದಲ್ಲಿದ್ದ ಇಬ್ಬರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಸುದ್ದಿ ತಿಳಿದ ತಕ್ಷಣ ಸಿಪಿಐ ಮೋಹಿತ್ ಸಹದೇವ್ ಹಾಗೂ ಸಿಬ್ಬಂದಿಗಳು ತೆರಳಿ ಪರಿಶೀಲನೆ ನಡೆಸಿದರು.





