ಪರ್ತ್ ಟೆಸ್ಟ್: ಗೆಲುವಿನ ಪಥದಲ್ಲಿ ಆಸ್ಟ್ರೇಲಿಯ
►ಭಾರತಕ್ಕೆ 287 ರನ್ ಗುರಿ ►2ನೇ ಇನಿಂಗ್ಸ್‌ನಲ್ಲಿ 112/5

ಪರ್ತ್, ಡಿ.17: ದ್ವಿತೀಯ ಟೆಸ್ಟ್‌ನ ಮೊದಲ ಇನಿಂಗ್ಸ್‌ನಲ್ಲಿ ಭಾರತದ ಐದು ವಿಕೆಟ್ ಗೊಂಚಲು ಪಡೆದಿದ್ದ ಆಸ್ಟ್ರೇಲಿಯ ಸ್ಪಿನ್ನರ್ ನಥಾನ್ ಲಿಯೊನ್ ಎರಡನೇ ಇನಿಂಗ್ಸ್‌ನಲ್ಲೂ ಪ್ರವಾಸಿಗರ ಎರಡು ಪ್ರಮುಖ ವಿಕೆಟ್‌ಗಳನ್ನು ಉರುಳಿಸಿದ್ದಾರೆ. ಇದರೊಂದಿಗೆ ಆತಿಥೇಯರಿಗೆ ಪಂದ್ಯ ಜಯಿಸಿ ಸರಣಿ ಸಮಬಲಗೊಳಿಸಲು ಭದ್ರಬುನಾದಿ ಹಾಕಿಕೊಟ್ಟಿದ್ದಾರೆ.
ಎರಡನೇ ಟೆಸ್ಟ್ ಪಂದ್ಯ ಗೆಲ್ಲಲು 287 ರನ್ ಗುರಿ ಪಡೆದಿರುವ ಭಾರತ ತಂಡ ನಾಲ್ಕನೇ ದಿನದಾಟದಂತ್ಯಕ್ಕೆ 112 ರನ್‌ಗೆ 5 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದೆ. ಸರಣಿಯನ್ನು 1-1 ರಿಂದ ಸಮಬಲಗೊಳಿಸುವತ್ತ ಚಿತ್ತವಿರಿಸಿರುವ ಆತಿಥೇಯರಿಗೆ ಈ ಪಂದ್ಯ ಜಯಿಸಲು ಇನ್ನು 5 ವಿಕೆಟ್‌ಗಳ ಅಗತ್ಯವಿದೆ. ಮತ್ತೊಂದೆಡೆ ಭಾರತಕ್ಕೆ ಪಂದ್ಯ ಗೆಲ್ಲಲು ಕೊನೆಯ ದಿನವಾದ ಮಂಗಳವಾರ ಇನ್ನೂ 175 ರನ್ ಗಳಿಸಬೇಕಾದ ಒತ್ತಡವಿದೆ.
ಆಸ್ಟ್ರೇಲಿಯವನ್ನು ಎರಡನೇ ಇನಿಂಗ್ಸ್‌ನಲ್ಲಿ 243 ರನ್‌ಗೆ ನಿಯಂತ್ರಿಸಿದ ಕೊಹ್ಲಿ ಪಡೆ ಗೆಲ್ಲಲು ಕಠಿಣ ಸವಾಲು ಪಡೆಯಿತು. 4ನೇ ದಿನದಾಟದಂತ್ಯಕ್ಕೆ ಹನುಮ ವಿಹಾರಿ(24) ಹಾಗೂ ರಿಷಭ್ ಪಂತ್(9)ಔಟಾಗದೆ ಉಳಿದಿದ್ದಾರೆ.
ಪರ್ತ್ ಸ್ಟೇಡಿಯಂನ ಪಿಚ್ ಸ್ಪಿನ್ನರ್ ಲಿಯೊನ್‌ಗೆ ತಕ್ಕಂತೆ ವರ್ತಿಸುತ್ತಿದ್ದು, ವೇಗಿಗಳಿಗೂ ಬೌನ್ಸ್ ಸಿಗುತ್ತಿದೆ. ಪಿಚ್ ವಿರೂಪಗೊಂಡಿರುವ ಕಾರಣ ಬ್ಯಾಟಿಂಗ್ ಕಷ್ಟಕರವಾಗುತ್ತಿದೆ. ಕ್ರೀಸ್‌ನಲ್ಲಿರುವ ಬ್ಯಾಟ್ಸ್‌ಮನ್‌ಗಳಾದ ವಿಹಾರಿ ಹಾಗೂ ಪಂತ್ ಇವೆಲ್ಲವನ್ನೂ ಮೀರಿ ಭಾರತಕ್ಕೆ ಗೆಲುವು ತಂದುಕೊಟ್ಟು ಸರಣಿಯಲ್ಲಿ 2-0 ಮುನ್ನಡೆ ಒದಗಿಸುತ್ತಾರೋ ಎಂದು ಕಾದುನೋಡಬೇಕಿದೆ. ಆರಂಭಿಕ ಆಟಗಾರ ಲೋಕೇಶ್ ರಾಹುಲ್‌ರನ್ನು ಶೂನ್ಯಕ್ಕೆ ಕಳೆದುಕೊಂಡ ಭಾರತ ಅತ್ಯಂತ ಕಳಪೆ ಆರಂಭ ಪಡೆಯಿತು. ಮೊದಲ ಟೆಸ್ಟ್‌ನಲ್ಲಿ ಶತಕ ಸಿಡಿಸಿ ಮಿಂಚಿದ್ದ ಚೇತೇಶ್ವರ ಪೂಜಾರ ಕೇವಲ 4 ರನ್ ಗಳಿಸಿ ಕೈಕೊಟ್ಟರು.
ಮೊದಲ ಇನಿಂಗ್ಸ್‌ನಲ್ಲಿ ಆಕರ್ಷಕ 123 ರನ್ ಗಳಿಸಿದ್ದ ನಾಯಕ ವಿರಾಟ್ ಕೊಹ್ಲಿ ಹಾಗೂ ಇನ್ನೋರ್ವ ಆರಂಭಿಕ ಆಟಗಾರ ಮುರಳಿ ವಿಜಯ್ ಮೂರನೇ ವಿಕೆಟ್‌ಗೆ 35 ರನ್ ಗಳಿಸಿ ಇನಿಂಗ್ಸ್ ಆಧರಿಸಿದರು. 17 ರನ್ ಗಳಿಸಿದ್ದ ಕೊಹ್ಲಿ ಸ್ಪಿನ್ನರ್ ನಥಾನ್ ಲಿಯೊನ್ ಬೌಲಿಂಗ್‌ನಲ್ಲಿ ಉಸ್ಮಾನ್ ಖ್ವಾಜಾಗೆ ಕ್ಯಾಚ್ ನೀಡಿ ನಿರ್ಗಮಿಸಿದರು. ಆಗ ಆಸ್ಟ್ರೇಲಿಯ ಆಟಗಾರರು ಅರ್ಧ ಪಂದ್ಯ ಗೆದ್ದವರಂತೆ ಸಂಭ್ರಮಿಸಿದರು. ಆಫ್-ಸ್ಪಿನ್ನರ್ ಲಿಯೊನ್ ದಾಖಲೆಯ 7ನೇ ಬಾರಿ ಕೊಹ್ಲಿ ವಿಕೆಟ್ ಪಡೆದು ಮಿಂಚಿದರು. ಇದು ಬೌಲರ್ ಓರ್ವನ ಉತ್ತಮ ಸಾಧನೆಯಾಗಿದೆ. ಲಿಯೊನ್ ತನ್ನ ಮುಂದಿನ ಓವರ್‌ನಲ್ಲಿ ವಿಜಯ್‌ಗೆ(20)ಪೆವಿಲಿಯನ್ ಹಾದಿ ತೋರಿಸಿದರು. ಲಿಯೊನ್ ಭಾರತದ ದಾಂಡಿಗರನ್ನು ನಿರಂತರವಾಗಿ ಕಾಡಿದರು. ಉಪ ನಾಯಕ ಅಜಿಂಕ್ಯ ರಹಾನೆ(30) ಹಾಗೂ ಹನುಮ ವಿಹಾರಿ 5ನೇ ವಿಕೆಟ್‌ಗೆ 43 ರನ್ ಜೊತೆಯಾಟ ನಡೆಸಿ ಆಸೀಸ್‌ಗೆ ಪ್ರತಿರೋಧ ಒಡ್ಡಿದರು. ಆದರೆ, ರಹಾನೆ ದಿನದಾಟದಂತ್ಯಕ್ಕೆ ಹೆಝಲ್‌ವುಡ್ ಬೌಲಿಂಗ್ ನಲ್ಲಿ ವಿಕೆಟ್ ಒಪ್ಪಿಸಿ ನಿರಾಸೆಗೊಳಿಸಿದರು.
ತಲಾ 2 ವಿಕೆಟ್ ಪಡೆದಿರುವ ಹೆಝಲ್‌ವುಡ್ ಹಾಗೂ ಲಿಯೊನ್ ನಾಯಕ ಟಿಮ್ ಪೈನ್‌ಗೆ ಮೊದಲ ಗೆಲುವಿನ ಉಡುಗೊರೆ ನೀಡಲು ಯತ್ನಿಸುತ್ತಿದ್ದಾರೆ.
ಆಸ್ಟ್ರೇಲಿಯ 243 ರನ್‌ಗೆ ಆಲೌಟ್: ಶಮಿಗೆ ಆರು ವಿಕೆಟ್
ಇದಕ್ಕೂ ಮೊದಲು 4 ವಿಕೆಟ್ ನಷ್ಟಕ್ಕೆ 134 ರನ್‌ನಿಂದ ಎರಡನೇ ಇನಿಂಗ್ಸ್ ಮುಂದುವರಿಸಿದ ಆಸ್ಟ್ರೇಲಿಯ ಭಾರತದ ವೇಗಿ ಮುಹಮ್ಮದ್ ಶಮಿ ಬೌಲಿಂಗ್ ದಾಳಿಗೆ ತತ್ತರಿಸಿ 243 ರನ್‌ಗೆ ಸರ್ವಪತನವಾಯಿತು. ಶಮಿ 56 ರನ್‌ಗೆ 6 ವಿಕೆಟ್‌ಗಳನ್ನು ಉರುಳಿಸಿ ಜೀವನಶ್ರೇಷ್ಠ ಪ್ರದರ್ಶನ ನೀಡಿದರು. 5 ಓವರ್‌ಗಳಲ್ಲಿ 4 ವಿಕೆಟ್ ಉಡಾಯಿಸಿ ಕಾಂಗರೂಗಳಿಗೆ ಕಡಿವಾಣ ಹಾಕಿದರು. ಶಮಿ ಟೆಸ್ಟ್‌ನಲ್ಲಿ 4ನೇ ಬಾರಿ ಐದು ವಿಕೆಟ್ ಗೊಂಚಲು ಪಡೆದರು. ಇನ್ನೋರ್ವ ವೇಗಿ ಜಸ್‌ಪ್ರಿತ್ ಬುಮ್ರಾ(3-39)ಮೂರು ವಿಕೆಟ್ ಕಬಳಿಸಿದರು. ಇಶಾಂತ್ ಒಂದು ವಿಕೆಟ್‌ಪಡೆದಿದ್ದು, ಎಲ್ಲ 10 ವಿಕೆಟ್‌ಗಳು ವೇಗಿಗಳ ಪಾಲಾಗಿದ್ದು ವಿಶೇಷ. ಇಂದು ಬ್ಯಾಟಿಂಗ್ ಮುಂದುವರಿಸಿದ ಉಸ್ಮಾನ್ ಖ್ವಾಜಾ ಹಾಗೂ ಟಿಮ್ ಪೈನ್ 6ನೇ ವಿಕೆಟ್‌ಗೆ 72 ರನ್ ಜೊತೆಯಾಟ ನಡೆಸಿದರು. ಪೈನ್(37) ವಿಕೆಟ್ ಕಬಳಿಸಿದ ಶಮಿ ಈ ಜೋಡಿಯನ್ನು ಬೇರ್ಪಡಿಸಿದರು. ಪೈನ್ ವಿಕೆಟ್ ಕಿತ್ತ ಬೆನ್ನಿಗೇ ಆರಂಭಿಕ ಆಟಗಾರ ಆ್ಯರೊನ್ ಫಿಂಚ್(25)ರನ್ನು ಔಟ್ ಮಾಡಿದ ಶಮಿ ಹ್ಯಾಟ್ರಿಕ್ ಹಾದಿಯಲ್ಲಿದ್ದರು. ಆದರೆ, ಹ್ಯಾಟ್ರಿಕ್ ವಿಕೆಟ್ ಪಡೆಯಲು ವಿಫಲವಾದ ಶಮಿ 72 ರನ್(213 ಎಸೆತ,5 ಬೌಂಡರಿ)ಗಳಿಸಿ ತಾಳ್ಮೆಯ ಇನಿಂಗ್ಸ್ ಆಡಿದ್ದ ಖ್ವಾಜಾಗೆ ಪೆವಿಲಿಯನ್ ಹಾದಿ ತೋರಿಸಿದರು. ಈ ಮೂಲಕ ಐದು ವಿಕೆಟ್ ಗೊಂಚಲು ಪಡೆದರು.
ಫಿಂಚ್ 3ನೇ ದಿನವಾದ ರವಿವಾರ ಬ್ಯಾಟಿಂಗ್ ವೇಳೆ ಶಮಿ ಬೌಲಿಂಗ್‌ನಲ್ಲಿ ಕೈ ಬೆರಳಿಗೆ ಗಾಯವಾದ ಕಾರಣ ಗಾಯಗೊಂಡು ನಿವೃತ್ತಿಯಾಗಿದ್ದರು. ಎಕ್ಸ್ ರೇಯಲ್ಲಿ ಗಾಯ ಗಂಭೀರವಾಗಿಲ್ಲವೆಂಬ ವಿಚಾರ ಗೊತ್ತಾದ ಕಾರಣ ಇಂದು ಬ್ಯಾಟಿಂಗ್‌ಗೆ ವಾಪಸಾಗಿದ್ದರು. ಪೈನ್ ಔಟಾದ ತಕ್ಷಣ ಆರು ರನ್ ಸೇರಿಸುವಷ್ಟರಲ್ಲಿ ಆಸೀಸ್ ನಾಲ್ಕು ವಿಕೆಟ್‌ಗಳನ್ನು ಕಳೆದುಕೊಂಡು ದಿಢೀರ್ ಕುಸಿತ ಕಂಡಿತು. ಕೊನೆಯ ವಿಕೆಟ್‌ನಲ್ಲಿ 36 ರನ್ ಜೊತೆಯಾಟ ನಡೆಸಿದ ಹೆಝಲ್‌ವುಡ್(ಔಟಾಗದೆ 17) ಹಾಗೂ ಮಿಚೆಲ್ ಸ್ಟಾರ್ಕ್(14)ತಂಡದ ಮುನ್ನಡೆಯನ್ನು 286 ರನ್ ವಿಸ್ತರಿಸಿದರು.
ಹೈಲೈಟ್ಸ್
►ಮುಹಮ್ಮದ್ ಶಮಿ ಜೀವನಶ್ರೇಷ್ಠ ಬೌಲಿಂಗ್ (6-56)ಮಾಡಿದರು. ಇದು ಅವರ 4ನೇ 5 ವಿಕೆಟ್ ಗೊಂಚಲು.
►ಮುರಳಿ ವಿಜಯ್ 3ನೇ ಬಾರಿ ಲಿಯೊನ್‌ಗೆ ಔಟಾದರು. ಸತತ ಎರಡನೇ ಇನಿಂಗ್ಸ್‌ನಲ್ಲಿ ಕ್ಲೀನ್‌ಬೌಲ್ಡಾದರು.
►ವಿಜಯ್ ಸತತ 8ನೇ ಬಾರಿ 20 ರನ್ ದಾಟಲು ವಿಫಲರಾದರು.
►ಚೇತೇಶ್ವರ ಪೂಜಾರ 5 ಇನಿಂಗ್ಸ್ ಬಳಿಕ ಒಂದಂಕಿ ಗಳಿಸಿ ಔಟಾಗಿದ್ದಾರೆ.
►ಹೆಝಲ್‌ವುಡ್ ನಾಲ್ಕನೇ ಬಾರಿ ಪೂಜಾರ ವಿಕೆಟ್ ಪಡೆದರು.
►ರಾಹುಲ್ ಕಳೆದ 7 ಇನಿಂಗ್ಸ್‌ಗಳಲ್ಲಿ 5ನೇ ಬಾರಿ ಒಂದಂಕಿ ಸ್ಕೋರ್ ಗಳಿಸಿ ಔಟಾದರು.
►ರಾಹುಲ್ ಎರಡೂ ಇನಿಂಗ್ಸ್‌ನಲ್ಲಿ ಮೂರು ಬಾರಿ ಕ್ಲೀನ್‌ಬೌಲ್ಡಾಗುವುದರೊಂದಿಗೆ ಮಾಜಿ ನಾಯಕ ಸುನೀಲ್ ಗವಾಸ್ಕರ್ ಅವರ ಕಳಪೆ ದಾಖಲೆ ಸರಿಗಟ್ಟಿದರು.
ಸ್ಕೋರ್ ವಿವರ
►ಆಸ್ಟ್ರೇಲಿಯ ಮೊದಲ ಇನಿಂಗ್ಸ್: 326/10
►ಭಾರತ ಮೊದಲ ಇನಿಂಗ್ಸ್: 283/10
►ಆಸ್ಟ್ರೇಲಿಯ ಎರಡನೇ ಇನಿಂಗ್ಸ್:
93.2 ಓವರ್‌ಗಳಲ್ಲಿ 243 ರನ್‌ಗೆ ಆಲೌಟ್
ಹ್ಯಾರಿಸ್ ಬಿ ಬುಮ್ರಾ 20
ಫಿಂಚ್ ಸಿ ಪಂತ್ ಬಿ ಶಮಿ 25 ಉಸ್ಮಾನ್ ಖ್ವಾಜಾ ಸಿ ಪಂತ್ ಬಿ ಶಮಿ 72
ಶಾನ್ ಮಾರ್ಷ್ ಸಿ ಪಂತ್ ಬಿ ಶಮಿ0
ಹ್ಯಾಂಡ್ಸ್‌ಕಾಂಬ್ ಎಲ್ಬಿಡಬ್ಲು ಇಶಾಂತ್ 13
ಟ್ರಾವಿಸ್ ಹೆಡ್ ಸಿ ಶರ್ಮಾ ಬಿ ಶಮಿ 19
ಟಿಮ್ ಪೈನ್ ಸಿ ಕೊಹ್ಲಿ ಬಿ ಶಮಿ 37
ಕಮಿನ್ಸ್ ಬಿ ಬುಮ್ರಾ 01
ಸ್ಟಾರ್ಕ್ ಬಿ ಬುಮ್ರಾ 14
ಲಿಯೊನ್ ಸಿ ವಿಹಾರಿ ಬಿ ಶಮಿ 05
ಹೆಝಲ್‌ವುಡ್ ಔಟಾಗದೆ 17
ಇತರ 15
►ವಿಕೆಟ್ ಪತನ: 1-59, 2-64, 3-85, 4-120, 5-192, 6-192, 7-198, 8-198, 9-207, 10-243.
►ಬೌಲಿಂಗ್ ವಿವರ ಇಶಾಂತ್ ಶರ್ಮಾ 16-1-45-1
ಜಸ್‌ಪ್ರಿತ್ ಬುಮ್ರಾ 25.2-10-39
ಮುಹಮ್ಮದ್ ಶಮಿ 24-8-56-6
ಉಮೇಶ್ ಯಾದವ್ 14-0-61-0
ಹನುಮ ವಿಹಾರಿ 14-4-31-0
►ಭಾರತ ಎರಡನೇ ಇನಿಂಗ್ಸ್: 41 ಓವರ್‌ಗಳಲ್ಲಿ 112/5
ರಾಹುಲ್ ಬಿ ಸ್ಟಾರ್ಕ್ 00
ವಿಜಯ್ ಬಿ ಲಿಯೊನ್ 20
ಚೇತೇಶ್ವರ ಪೂಜಾರ ಸಿ ಪೈನ್ ಬಿ ಹೆಝಲ್‌ವುಡ್04
ವಿರಾಟ್ ಕೊಹ್ಲಿ ಸಿ ಖ್ವಾಜಾ ಬಿ ಲಿಯೊನ್ 17
ಅಜಿಂಕ್ಯ ರಹಾನೆ ಸಿ ಹೆಡ್ ಬಿ ಹೆಝಲ್‌ವುಡ್ 30
ಹನುಮ ವಿಹಾರಿ ಔಟಾಗದೆ 24
ರಿಷಭ್ ಪಂತ್ ಔಟಾಗದೆ 09
ಇತರ 08
►ವಿಕೆಟ್ ಪತನ: 1-0, 2-13, 3-48, 4-55, 5-98
►ಬೌಲಿಂಗ್ ವಿವರ
ಮಿಚೆಲ್ ಸ್ಟಾರ್ಕ್ 10-2-28-1
ಹೆಝಲ್‌ವುಡ್ 11-3-24-2
ಕಮ್ಮಿನ್ಸ್ 08-0-24-0
ಲಿಯೊನ್ 12-2-30-2.







