ಇಂಟರ್‌ನೆಟ್ ಆಗಮನದಿಂದ ಮಕ್ಕಳ ಲೈಂಗಿಕ ಶೋಷಣೆ ಹೆಚ್ಚಿದೆ: ಸೈಬರ್ ತಜ್ಞರ ಅಭಿಮತ

ಕೋಲ್ಕತಾ, ಡಿ.17: ವಾಟ್ಸಾಪ್, ಫೇಸ್‌ಬುಕ್, ಡೇಟಿಂಗ್ ಸೈಟ್‌ಗಳು, ಸಂವಾದಾತ್ಮಕ ವೀಡಿಯೊ ಗೇಮ್‌ಗಳು ಮಕ್ಕಳನ್ನು ಲೈಂಗಿಕತೆಗೆ ಬಳಸಿಕೊಳ್ಳುವವರ ಅಚ್ಚುಮೆಚ್ಚಿನ ವೇದಿಕೆಗಳಾಗಿವೆ ಎಂದು ಸೈಬರ್ ತಜ್ಞರು ತಿಳಿಸಿದ್ದಾರೆ.
ಜಾಗತಿಕವಾಗಿ ಹಬ್ಬಿರುವ ಈ ಸಮಸ್ಯೆಯನ್ನು ನಿವಾರಿಸಲು ವಿವಿಧ ರಾಷ್ಟ್ರಗಳ ತನಿಖಾ ಸಂಸ್ಥೆಗಳ ಮಧ್ಯೆ ಹೆಚ್ಚಿನ ಸಹಕಾರ ಅಗತ್ಯವಿದೆ ಎಂದು ವಿಶ್ವದಾದ್ಯಂತದ ಸೈಬರ್ ಅಪರಾಧ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಅಮೆರಿಕದಲ್ಲಿ ಕೇಂದ್ರ ಕಚೇರಿ ಹೊಂದಿರುವ ಸರಕಾರೇತರ ಸಂಘಟನೆ ‘ಇಂಟರ್‌ನ್ಯಾಷನಲ್ ಜಸ್ಟಿಸ್ ಮಿಷನ್’(ಐಜೆಎಂ) ಕೋಲ್ಕತಾದಲ್ಲಿ ‘ಪ್ರೊಟೆಕ್ಷನ್ ಆಫ್ ಚೈಲ್ಡ್ ರೈಟ್ಸ್’ ಸಂಘಟನೆಯ ಪ.ಬಂಗಾಳ ವಿಭಾಗದ ಸಹಯೋಗದಲ್ಲಿ ಆಯೋಜಿಸಿದ್ದ ಸಮ್ಮೇಳನದಲ್ಲಿ ಪಾಲ್ಗೊಂಡ ಸೈಬರ್ ತಜ್ಞರು, ಇಂಟರ್‌ನೆಟ್ ಯುಗದ ಉಗಮದಿಂದ ಮಕ್ಕಳ ಲೈಂಗಿಕ ಶೋಷಣೆ ಹೆಚ್ಚಿದೆ. ಇಂಟರ್‌ನೆಟ್‌ಗೆ ಯಾವುದೇ ಗಡಿಯ ನಿರ್ಬಂದವಿಲ್ಲದ ಕಾರಣ ಮಕ್ಕಳನ್ನು ಲೈಂಗಿಕವಾಗಿ ಶೋಷಿಸುವವರನ್ನು ಮಟ್ಟಹಾಕುವುದು ಸುಲಭ ಸಾಧ್ಯವಲ್ಲ ಎಂದು ಹೇಳಿದರು. ಪೊಲೀಸ್ ಅಧಿಕಾರಿಗಳು, ವಕೀಲರು, ನ್ಯಾಯಾಧೀಶರು, ಅಮೆರಿಕ, ಜರ್ಮನಿ, ಹಾಲಂಡ್, ಫಿಲಿಪ್ಪೀನ್ಸ್, ಉಗಾಂಡ, ಕೆನ್ಯಾ ಮತ್ತು ಭಾರತದ ಎನ್‌ಜಿಒ ಸದಸ್ಯರು ಸಮಾವೇಶದಲ್ಲಿ ಭಾಗವಹಿಸಿದ್ದರು. ತಂತ್ರಜ್ಞಾನದ ಬಳಕೆಯಿಂದಾಗಿ ಲೈಂಗಿಕ ಶೋಷಕರ ದಕ್ಷತೆ ಹೆಚ್ಚಿದೆ ಎಂದು ಕ್ಯಾಲಿಫೋರ್ನಿಯಾದ ಕೆರ್ನ್ ಕೌಂಟಿ ಸುಪೀರಿಯರ್ ನ್ಯಾಯಾಲಯದ ನ್ಯಾಯಾಧೀಶ ಎರಿಕ್ ಬ್ರಾಡ್‌ಶಾ ಹೇಳಿದ್ದಾರೆ. ಮಕ್ಕಳನ್ನು ಲೈಂಗಿಕವಾಗಿ ಶೋಷಿಸುವ ಜಾಲವನ್ನು ಮಟ್ಟಹಾಕಲು ವಿವಿಧ ದೇಶಗಳ ಕಾನೂನು ಜಾರಿ ಸಂಸ್ಥೆಗಳ ಮಧ್ಯೆ ಹೆಚ್ಚಿನ ಸಹಕಾರದ ಅಗತ್ಯವಿದೆ ಎಂದವರು ಹೇಳಿದರು. 2015ರಲ್ಲಿ ಸೈಬರ್ ಅಪರಾಧ ತನಿಖೆಯಲ್ಲಿ ಅತ್ಯುತ್ತಮ ನಿರ್ವಹಣೆ ತೋರಿದ್ದ ಹಿನ್ನೆಲೆಯಲ್ಲಿ ‘ಇಂಡಿಯಾ ಸೈಬರ್ ಕಾಪ್’ ಪ್ರಶಸ್ತಿ ಪಡೆದಿರುವ ಬೆಂಗಳೂರು ಸಿಐಡಿಯ ಸೈಬರ್ ಅಪರಾಧ ವಿಭಾಗದ ಡಿವೈಎಸ್ಪಿ ಶರತ್ ಮಾತನಾಡಿ, ಬೆಂಗಳೂರಿನಲ್ಲಿ ಕಾರ್ಯ ನಿರ್ವಹಿಸುವಾಗ ಅಮೆರಿಕ ಮೂಲದ ‘ ನಾಪತ್ತೆಯಾಗಿರುವ ಮತ್ತು ಶೋಷಿತ ಮಕ್ಕಳ ರಾಷ್ಟ್ರೀಯ ಕೇಂದ್ರ’ದೊಂದಿಗೆ ಸದಾ ಸಂಪರ್ಕದಲ್ಲಿರುತ್ತೇವೆ. ಆದರೆ ಬೇರೆ ಯಾವುದೋ ದೇಶದಲ್ಲಿ ಕುಳಿತು ಕಾರ್ಯ ನಿರ್ವಹಿಸುವುದರಿಂದ ದುಷ್ಕರ್ಮಿಗಳು ಹೆಚ್ಚಿನ ಅನುಕೂಲ ಹೊಂದಿರುತ್ತಾರೆ ಎಂದರು.
ಕ್ಯಾಮೆರ , ಕಂಪ್ಯೂಟರ್ ಅಥವಾ ಮೊಬೈಲ್ ಫೋನ್‌ನಲ್ಲಿ ಮಕ್ಕಳ ಜೊತೆ ಸಂಭಾಷಿಸುವ ಕ್ರಿಮಿನಲ್‌ಗಳು ಬಹುತೇಕ ಸಂದರ್ಭದಲ್ಲಿ ಬೇರೆ ಯಾವುದೋ ದೇಶದಲ್ಲಿ ಇರುತ್ತಾರೆ. ಸಂವಾದಾತ್ಮಕ ವಿಡಿಯೋ ಗೇಮ್‌ಗಳ ಮೂಲಕವೂ ಮಕ್ಕಳನ್ನು ವಂಚಕರು ತಮ್ಮ ಬಲೆಗೆ ಬೀಳಿಸುತ್ತಾರೆ. ಹೆಚ್ಚಿನ ಸಂದರ್ಭಗಳಲ್ಲಿ ಪೋಷಕರಿಗೆ ಇದರ ಅರಿವೇ ಇರುವುದಿಲ್ಲ ಎಂದು ಐಜೆಎಂನ ತನಿಖೆ ಮತ್ತು ಕಾನೂನು ಜಾರಿ ವಿಭಾಗದ ನಿರ್ದೇಶಕ ಡೇವಿಡ್ ವಿನ್ಸೆಂಟ್ ರುಗೇರಿಯೊ ಹೇಳಿದ್ದಾರೆ.
ಸೈಬರ್ ಭದ್ರತೆ ಕ್ರಮಗಳ ಕುರಿತು ಜನರಿಗೆ ಮಾಹಿತಿಯ ಕೊರತೆಯಿದೆ. ತಿಳಿದೋ ತಿಳಿಯದೆಯೋ ಮಕ್ಕಳು ತಮ್ಮ ಖಾಸಗಿ ಫೋಟೋಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿ ಅಪಾಯದಲ್ಲಿ ಸಿಲುಕುತ್ತಾರೆ. ಆನ್‌ಲೈನ್ ಮೂಲಕ ಮಕ್ಕಳನ್ನು ಶೋಷಿಸುವ ಪ್ರಕ್ರಿಯೆ ಇತ್ತೀಚಿನ ದಿನಗಳಲ್ಲಿ ಗಂಭೀರ ಪ್ರಮಾಣಕ್ಕೆ ಹೆಚ್ಚಿದೆ ಎಂದು ಪ.ಬಂಗಾಳದ ಅಪರಾಧ ತನಿಖೆ ವಿಭಾಗದ ಐಜಿಪಿ ಅಜೇಯ ಮುಕುಂದ್ ರಾನಡೆ ಅಭಿಪ್ರಾಯಪಟ್ಟರು. ಲೈಂಗಿಕ ಶೋಷಣೆ ಮಾಡುವ ಸುಮಾರು 7.5 ಲಕ್ಷ ಕ್ರಿಮಿನಲ್‌ಗಳು ವಿಶ್ವದಾದ್ಯಂತ ಸಕ್ರಿಯರಾಗಿದ್ದಾರೆ ಎಂದು ಈ ಹಿಂದೆ ವಾಷಿಂಗ್ಟನ್ ಡಿಸಿ ಪೊಲೀಸ್ ಇಲಾಖೆಯಲ್ಲಿ ಕಾರ್ಯ ನಿರ್ವಹಿಸಿದ್ದ ಆಸ್ಟೇವ್ ಯಿಗ್‌ಝಾವ್ ತಿಳಿಸಿದರು. ಅಲ್ಲದೆ ವಿಶ್ವದಲ್ಲಿ ಇಂಟರ್‌ನೆಟ್ ಬಳಕೆದಾರರಲ್ಲಿ ಮೂರನೇ ಒಂದರಷ್ಟು ಮಂದಿ 18 ವರ್ಷಕ್ಕಿಂತ ಕೆಳಹರೆಯದವರು ಎಂದವರು ತಿಳಿಸಿದರು. ಬಹುತೇಕ ಕ್ರಿಮಿನಲ್‌ಗಳು ಮಕ್ಕಳು ಹಾಗೂ ಯುವಜನತೆಗೆ ಪ್ರಿಯವಾದ ಸಾಮಾಜಿಕ ಮಾಧ್ಯಮಗಳನ್ನು ಬಳಸಿಕೊಂಡು ಸಕ್ರಿಯರಾಗಿರುತ್ತಾರೆ ಎಂದು ಸೈಬರ್ ತಜ್ಞರು ತಿಳಿಸಿದ್ದಾರೆ.







