ಲಥಮ್ ದಾಖಲೆ ದ್ವಿಶತಕ: ಕಿವೀಸ್ ಬಿಗಿಹಿಡಿತ
ಲಂಕಾ-ನ್ಯೂಝಿಲೆಂಡ್ ಪ್ರಥಮ ಟೆಸ್ಟ್

ವೆಲ್ಲಿಂಗ್ಟನ್(ನ್ಯೂಝಿಲೆಂಡ್), ಡಿ.17: ಆರಂಭಿಕ ಆಟಗಾರ ಟಾಮ್‌ಲಥಮ್ ಅವರ ದಾಖಲೆ ಅಜೇಯ ದ್ವಿಶತಕದ ನೆರವಿನಿಂದ ನ್ಯೂಝಿಲೆಂಡ್ ತಂಡ ಶ್ರೀಲಂಕಾ ವಿರುದ್ಧದ ಪ್ರಥಮ ಟೆಸ್ಟ್ ನ ಮೊದಲ ಇನಿಂಗ್ಸ್‌ನಲ್ಲಿ 578 ರನ್ ಗಳಿಸಿದ್ದಲ್ಲದೆ 296 ರನ್‌ಗಳ ಮೊದಲ ಇನಿಂಗ್ಸ್ ಮುನ್ನಡೆ ಸಾಧಿಸಿ ತನ್ನ ಹಿಡಿತ ಬಿಗಿಗೊಳಿಸಿದೆ.ನ್ಯೂಝಿಲೆಂಡ್‌ನ 578 ರನ್‌ಗಳಿಗೆ ಉತ್ತರವಾಗಿ 2ನೇ ಇನಿಂಗ್ಸ್ ಆರಂಭಿಸಿರುವ ಶ್ರೀಲಂಕಾ 20 ರನ್‌ಗೆ ಮೂರು ವಿಕೆಟ್ ಕಳೆದುಕೊಂಡಿದೆ.
ಟೆಸ್ಟ್ 2ನೇ ದಿನವಾದ ರವಿವಾರ 311 ರನ್ ಗಳಿಸಿ 2 ವಿಕೆಟ್ ಕಳೆದುಕೊಂಡಿದ್ದ ನ್ಯೂಝಿಲೆಂಡ್ ಸೋಮವಾರ ಮೂರನೇ ದಿನದಾಟ ಆರಂಭಿಸಿತು. 121 ರನ್ ಗಳಿಸಿದ್ದ ಆರಂಭಿಕ ದಾಂಡಿಗ ಲಥಮ್ ಚೊಚ್ಚಲ ದ್ವಿಶತಕ(264, 489 ಎಸೆತ, 21 ಬೌಂಡರಿ, 1 ಸಿಕ್ಸರ್) ಸಿಡಿಸಿದರು. ಆರಂಭಿಕನಾಗಿ ಕಣಕ್ಕಿಳಿದು ಇನಿಂಗ್ಸ್ ಕೊನೆಯವರೆಗೂ ಔಟಾಗದೆ ಉಳಿದು ಗರಿಷ್ಠ ರನ್ ಗಳಿಸಿದ ವಿಶ್ವದ ಮೊದಲ ದಾಂಡಿಗನಾಗಿ ಮೂಡಿಬಂದರು. ರಾಸ್ ಟೇಲರ್(50) ಕೇನ್ ವಿಲಿಯಮ್ಸನ್(91)ಹೆನ್ರಿ ನಿಕೊಲ್ಸ್(50) ಅರ್ಧಶತಕ ಸಿಡಿಸಿದರೆ ಗ್ರಾಂಡ್‌ಹೋಮ್ (49) ಅರ್ಧಶತಕ ವಂಚಿತಗೊಂಡರು. ಶ್ರೀಲಂಕಾದ ಲಾಹಿರು ಕುಮಾರ 4 ವಿಕೆಟ್ ಪಡೆದು ಯಶಸ್ವಿ ಬೌಲರ್ ಎನಿಸಿದರು.
ನ್ಯೂಝಿಲೆಂಡ್‌ನ ಬೃಹತ್ ಮೊತ್ತಕ್ಕೆ ಉತ್ತರವಾಗಿ ಇನಿಂಗ್ಸ್ ಆರಂಭಿಸಿದ ಲಂಕಾಗೆ ಬೌಲ್ಟ್ ಹಾಗೂ ಸೌಥಿ ಆಘಾತ ನೀಡಿದರು. ದಿಮುತ್ ಕರುಣರತ್ನೆ(10) ಧನುಷ್ಕ ಗುಣತಿಲಕ(3) ಹಾಗೂ ಧನಂಜಯ ಡಿಸಿಲ್ವಾ(0) ವಿಕೆಟ್ ಒಪ್ಪಿಸಿದ್ದಾರೆ. ಸದ್ಯ 276 ರನ್ ಹಿನ್ನಡೆಯಲ್ಲಿರುವ ಲಂಕಾ, ಸೋಲು ತಪ್ಪಿಸಿಕೊಳ್ಳಲು ಹರಸಾಹಸಪಡಬೇಕಿದೆ.
ಸಂಕ್ಷಿಪ್ತ ಸ್ಕೋರ್
►ಶ್ರೀಲಂಕಾ ಪ್ರಥಮ ಇನಿಂಗ್ಸ್: 282/10
►ನ್ಯೂಝಿಲೆಂಡ್ ಪ್ರಥಮ ಇನಿಂಗ್ಸ್: 578 ಆಲೌಟ್( ಲಥಮ್ ಅಜೇಯ 264, ವಿಲಿಯಮ್ಸನ್ 91, ಟೇಲರ್ 50, ನಿಕೊಲ್ಸ್ 50, ಕುಮಾರ 127ಕ್ಕೆ 4)
►ಶ್ರೀಲಂಕಾ ದ್ವಿತೀಯ ಇನಿಂಗ್ಸ್ : 20ಕ್ಕೆ 3 ( ದಿಮುತ್ ಕರುಣರತ್ನೆ 10, ಸೌಥಿ 7ಕ್ಕೆ 2, ಬೌಲ್ಟ್ 12ಕ್ಕೆ 1)







