ಮಂಗಳೂರು: ಎಸ್.ಬಿ.ಐ. ವತಿಯಿಂದ ಗೃಹ, ಕಾರು ಇತರ ಸಾಲ ಉತ್ಸವಕ್ಕೆ ಚಾಲನೆ

ಮಂಗಳೂರು, ಡಿ. 18: ನಗರದಲ್ಲಿ ಭಾರತೀಯ ಸ್ಟೇಟ್ ಬ್ಯಾಂಕ್ ವತಿಯಿಂದ ಎರಡು ದಿನಗಳ ಗೃಹ, ಕಾರು ಹಾಗೂ ಇತರ ಸಾಲಗಳ ಬೃಹತ್ ಉತ್ಸವಕ್ಕೆ ಶನಿವಾರ ಅದ್ದೂರಿ ಚಾಲನೆ ದೊರೆಯಿತು.
ಭಾರತೀಯ ಸ್ಟೇಟ್ ಬ್ಯಾಂಕ್ ವತಿಯಿಂದ ನಗರದ ಸೆಂಟೇನರಿ ಮೆಮೋರಿಯಲ್ ಹಾಲ್, ಸೈಂಟ್ ಜೋಸೆಫ್ ಸೆಮಿನಾರಿ, ವೆಲೆನ್ಸಿಯಾ, ಕಂಕನಾಡಿ ಸಭಾಂಗಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮವನ್ನು ಮುಖ್ಯ ಆಯುಕ್ತರಾದ ಮುಹಮ್ಮದ್ ನಝೀರ್ ಉದ್ಘಾಟಿಸಿದರು.
ಬಳಿಕ ಮಾತನಾಡಿದ ಅವರು ಕರ್ನಾಟಕದಲ್ಲಿ ರಾಜಧಾನಿ ಬೆಂಗಳೂರನ್ನು ಹೊರತುಪಡಿಸಿ ಅತ್ಯಂತ ಕ್ಷಿಪ್ರ ಬೆಳವಣಿಗೆಯನ್ನು ಹೊಂದುತ್ತಿರುವ ನಗರಗಳಲ್ಲಿ ಮಂಗಳೂರು ನಗರ ಮುಂಚೂಣಿಯಲ್ಲಿದೆ. ಇದಕ್ಕೆ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಎಲ್ಲಾ ಹಣಕಾಸು ಸಂಸ್ಥೆಗಳ ಜನನ ಹಾಗೂ ಅಭಿವೃದ್ಧಿ ಸಾಕ್ಷಿಯಾಗಿದೆ. ಇದರಲ್ಲಿ ಭಾರತೀಯ ಸ್ಟೇಟ್ ಬ್ಯಾಂಕಿನ ಕೊಡುಗೆ ಅಪಾರವಾಗಿದೆ. ಬ್ಯಾಂಕಿನ ಈ ರೀತಿಯ ಸಾಲ ಸೌಲಭ್ಯಗಳಿಂದ ನಗರದ ಜನತೆಗೆ ಸೂಕ್ತ ಸಮಯದಲ್ಲಿ ತ್ವರಿತಗತಿಯಲ್ಲಿ ಸಾಲ ಮಂಜೂರಾಗುವುದರಿಂದ ನಗರದ ಆರ್ಥಿಕ ಅಭಿವೃದ್ಧಿಗೆ ಸಹಾಯಕವಾಗುವುದು. ಈ ಮೂಲಕ ನಗರದ ಜನರಲ್ಲಿ ತಿಳುವಳಿಕೆ ಹಾಗೂ ಜಾಗೃತಿ ಮೂಡಿಸುವುದೇ ಈ ಸಾಲಮೇಳದ ಮುಖ್ಯ ಉದ್ದೇಶ. ಈ ಸದವಕಾಶವನ್ನು ನಗರದ ಜನರು ಸದುಪಯೋಗಪಡಿಸಿಕೊಳ್ಳಬೇಕು ಎಂದು ಹೇಳಿದರು.
ನಂತರ ಮಾತನಾಡಿದ ಬ್ಯಾಂಕಿನ ಬೆಂಗಳೂರು ವೃತ್ತದ ಪ್ರಧಾನ ವ್ಯವಸ್ಥಾಪಕರಾದ ಮುರಳೀಧರನ್ ಎನ್. ಕೇಂದ್ರ ಸರಕಾರದ ಬಹು ನಿರೀಕ್ಷಿತ ಯೋಜನೆಗಳಲ್ಲಿ ಒಂದಾಗಿರುವ ‘ಸ್ಮಾರ್ಟ್ ಸಿಟಿ’ಯ ಗೌರವವು ಮಂಗಳೂರಿಗೆ ಲಭಿಸಿರುವುದು ಇಲ್ಲಿಯ ಜನತೆಯ ಅತ್ಯಂತ ಸಂತೋಷದ ಸಂಗತಿಯಾಗಿದ್ದು ಇದನ್ನು ಸದೃಢೀಕರಿಸಿಕೊಳ್ಳುವಲ್ಲಿ ನಾವು ಇಂದು ಹಾಗೂ ಮುಂದೆಯೂ ಕೂಡಾ ಈ ರೀತಿಯ ಹಲವು ಸಾಲ ಯೋಜನೆಗಳನ್ನು ಒಂದೇ ಸೂರಿನಡಿಯಲ್ಲಿ ನೀಡುವ ವ್ಯವಸ್ಥೆಯನ್ನು ನಿಯಮಿತವಾಗಿ ನಡೆಸುತ್ತಿದ್ದೇವೆ. ಸಾರ್ವಜನಿಕರು ಈ ಸಾಲಮೇಳದ ಹಾಗೂ ಇತರ ಸೌಲಭ್ಯಗಳ ಸಮಗ್ರ ಮಾಹಿತಿಯನ್ನು ಪಡೆದುಕೊಂಡು ಅದರ ಫಲಾನುಭವಿಯಾಗಬೇಕೆಂದು ಹೇಳಿದರು. ಈ ಉತ್ಸವದಲ್ಲಿ ಅನೇಕ ರೀತಿಯ ವಿಶೇಷ ರಿಯಾಯಿತಿಗಳಿದ್ದು, ಇದನ್ನು ಗ್ರಾಹಕರು ಸದುಪಯೋಗಪಡಿಸಿಕೊಳ್ಳಬೇಕೆಂದು ಮನವಿ ಮಾಡಿದರು.
ಭಾರತೀಯ ಸ್ಟೇಟ್ ಬ್ಯಾಂಕ್ ಮಂಗಳೂರು ಆಡಳಿತ ಕಚೇಯ ಉಪಪ್ರಧಾನ ವ್ಯವಸ್ಥಾಪಕರಾದ ಸುಕುಮಾರ್ ವಿ.ಕೆ., ಮಂಗಳೂರು ಪ್ರಾದೇಶಿಕ ವ್ಯವಹಾರ ಕಚೇರಿಯ ರೀಜನಲ್ ಮೇನೆಜರ್ ಕಿಶೋರ್ ಕುಮಾರ್ ಬಂಟ್ವಾಳ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ನಗರದ ಪ್ರತಿಷ್ಠಿತ ಬಿಲ್ಡರ್ ಗಳು, ಕಾರು ಡೀಲರ್ ಗಳು ಭಾಗವಹಿಸಿದ್ದರು.