ಮುಕೇಶ್ ಅಂಬಾನಿ ಪುತ್ರಿ ಇಶಾ ಅಂಬಾನಿ ವಿವಾಹದ ವೈಭವವನ್ನು ಸೆರೆಹಿಡಿದದ್ದು ಮಂಗಳೂರಿನ ಫೋಟೊಗ್ರಾಫರ್
ಪೆಟ್ರೋಲ್ ಪಂಪ್ ನಲ್ಲಿ ಕೆಲಸ ಮಾಡಿದ್ದ ವ್ಯಕ್ತಿಯ ಸಾಧನೆ

ಮಂಗಳೂರು, ಡಿ.18: ಇತ್ತೀಚೆಗಷ್ಟೇ ನಡೆದ ಮುಕೇಶ್ ಅಂಬಾನಿ ಪುತ್ರಿ ಇಶಾ ಅಂಬಾನಿ ಮತ್ತು ಉದ್ಯಮಿ ಆನಂದ್ ಪಿರಾಮಲ್ ಅವರ ವಿವಾಹವು ದೇಶ-ವಿದೇಶಗಳ ಗಮನ ಸೆಳೆದಿತ್ತು. ಹಾಲಿವುಡ್, ಬಾಲಿವುಡ್ ಸೇರಿದಂತೆ ಭಾರತೀಯ ಸಿನೆಮಾರಂಗದ ಪ್ರಸಿದ್ಧ ಸೆಲೆಬ್ರಿಟಿಗಳು ಈ ವಿವಾಹ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ವಿಶೇಷವೆಂದರೆ ಅಂಬಾನಿ ಪುತ್ರಿಯ ವಿವಾಹ ಕಾರ್ಯಕ್ರಮದ ವೈಭವವನ್ನು ಸೆರೆಹಿಡಿದದ್ದು ಕರ್ನಾಟಕದ ಫೋಟೊಗ್ರಾಫರ್.
ಹೌದು ಮಂಗಳೂರಿನ ಬಿಕರ್ನಕಟ್ಟೆಯವರಾದ ವಿವೇಕ್ ಸಿಕ್ವೇರ ಅವರ ಲ್ಯೂಕ್ಸ್ ಕ್ಯಾಪ್ಚರ್ಸ್ ತಂಡದ ಫೋಟೊಗ್ರಾಫರ್ ಗಳು ಇಶಾ ಅಂಬಾನಿ-ಆನಂದ್ ಪಿರಾಮಲ್ ವಿವಾಹ ಕಾರ್ಯಕ್ರಮದ ಫೋಟೊಗಳನ್ನು ಕ್ಲಿಕ್ಕಿಸಿದ್ದರು. ವಿವೇಕ್ ಮತ್ತವರ ತಂಡ 1.2 ಲಕ್ಷ ಫೋಟೊಗಳನ್ನು ಅಂಬಾನಿ ಮನೆಯ ಮದುವೆಯಲ್ಲಿ ಕ್ಲಿಕ್ಕಿಸಿದ್ದಾರೆ.
ಆರ್ಥಿಕ ಸಮಸ್ಯೆಯಿಂದ ವಿವೇಕ್ ಕಾಲೇಜನ್ನು ಅರ್ಧದಲ್ಲೇ ತೊರೆದಿದ್ದರು. ನಂತರ ಪೆಟ್ರೋಲ್ ಪಂಪ್ ನಲ್ಲಿ ಕೆಲಸ ಮಾಡಿದ್ದರು. ನಂತರ ಗೆಳೆಯನ ಸಲಹೆಯ ಮೇರೆಗೆ 7000 ರೂ. ಮೌಲ್ಯದ ಕ್ಯಾಮರಾ ಖರೀದಿಸಿದ್ದರು.
2010, 2011, 2012 ಮತ್ತು 2014ರಲ್ಲಿ ವಿವೇಕ್ ‘ಬೆಟರ್ ಫೋಟೊಗ್ರಫಿ’ಯ ‘ಬೆಸ್ಟ್ ವೆಡ್ಡಿಂಗ್ ಫೋಟೊಗ್ರಾಫರ್’ ಪ್ರಶಸ್ತಿ ಗೆದ್ದಿದ್ದರು. ಆರಂಭದಲ್ಲಿ ಯಾರ ಮದುವೆ ಕಾರ್ಯಕ್ರಮ ಎಂದೂ ಅವರಿಗೆ ತಿಳಿಸಿರಲಿಲ್ಲ. ಡಿಸೆಂಬರ್ 1ರಿಂದ 15ರವರೆಗೆ ಎಲ್ಲಾ ಡೇಟ್ ಗಳನ್ನು ಬ್ಲಾಕ್ ಮಾಡುವಂತೆ ಅವರಿಗೆ ಜೂನ್ ನಲ್ಲೇ ತಿಳಿಸಲಾಗಿತ್ತು. ವಿವೇಕ್ ರ ಕೆಲ ಮದುವೆ ಫೋಟೊಗಳನ್ನು ನೋಡಿದ ಮೇಲೆ ಅವರನ್ನು ಆಯ್ಕೆ ಮಾಡಲಾಗಿತ್ತು. ಆದರೆ ಅಂಬಾನಿ ಮನೆಯ ಮದುವೆ ಎನ್ನುವುದನ್ನು ಗೌಪ್ಯವಾಗಿಡಲಾಗಿತ್ತು.