ರಫೇಲ್ ಒಪ್ಪಂದದ ಬಗ್ಗೆ ಸುಪ್ರೀಂ ಕೋರ್ಟ್‌ಗೆ ತಪ್ಪು ಮಾಹಿತಿ: ಮಾಜಿ ಸಚಿವ ಪಲ್ಲಂ ರಾಜು
ಜಂಟಿ ಸಂಸದೀಯ ಸಮಿತಿಯಿಂದ ಪ್ರಕರಣದ ತನಿಖೆ ಕಾಂಗ್ರೆಸ್ ನಿಲುವು

ಮಂಗಳೂರು, ಡಿ.18: ರಫೇಲ್ ಒಪ್ಪಂದದ ಬಗ್ಗೆ ಸುಪ್ರೀಂ ಕೋರ್ಟ್‌ಗೆ ಕೇಂದ್ರ ಸರಕಾರದಿಂದ ತಪ್ಪು ಮಾಹಿತಿ ನೀಡಲಾಗಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ಸಭೆ ಹಾಗೂ ಲೋಕ ಸಭೆಯಲ್ಲಿ ಹಕ್ಕುಚ್ಯುತಿ ಮಂಡಿಸಲಾಗಿದೆ. ರಫೇಲ್ ಹಗರಣದ ಬಗ್ಗೆ ಜಂಟಿ ಸಂಸದೀಯ ಸಮಿತಿಯಿಂದ ತನಿಖೆ ನಡೆಯಬೇಕೆನ್ನುವುದು ಕಾಂಗ್ರೆಸ್‌ನ ನಿಲುವಾಗಿದೆ ಎಂದು ಕೇಂದ್ರ ಸರಕಾರದ ಮಾಜಿ ಸಚಿವ ಪಲ್ಲಂ ರಾಜು ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದ್ದಾರೆ.
ರಫೇಲ್ ಒಪ್ಪಂದ ದೇಶದ ರಕ್ಷಣಾ ವಿಭಾಗಗಕ್ಕೆ ಸಂಬಂಧಿಸಿದ ಅತ್ಯಂತ ದೊಡ್ಡ ಹಗರಣವಾಗಿದೆ. ಎಚ್‌ಎಎಲ್ ದೇಶದ ರಕ್ಷಣಾ ವಿಭಾಗಕ್ಕೆ ವಿಮಾನ ತಯಾರಿಸಲು ಸಾಮರ್ಥ್ಯ ಹೊಂದಿರುವ 40ವರ್ಷಗಳ ಅನುಭವ ಹೊಂದಿರುವ ಏಕೈಕ ಸಂಸ್ಥೆಯಾಗಿದೆ. ಇದನ್ನು ಹೊರತು ಪಡಿಸಿ ಇನ್ನೊಂದು ಖಾಸಗಿ ಸಂಸ್ಥೆಯೊಂದಿಗೆ ಒಪ್ಪಂದ ಮಾಡಿಕೊಳ್ಳಲು ಕಾರಣವೇನು ? ಈ ಸಂಸ್ಥೆಯಲ್ಲಿ ವಿಮಾನ ಖರೀದಿಗೆ ಸಂಬಂಧಿಸಿದಂತೆ ಯುಪಿಎ ಸರಕಾರ ಇರುವಾಗ ಆಗಿರುವ ಒಪ್ಪಂದವನ್ನು ಬದಲಾಯಿಸಿ ರಫೇಲ್ ಮೂಲಕ ರಿಲಾಯೆನ್ಸ್ ಡಿಫೆನ್ಸ್ ಲಿಮಿಟೆಡ್ ಜೊತೆ ಒಡಂಬಡಿಕೆ ಮಾಡಿಕೊಳ್ಳಲು ಕಾರಣವೇನು ?ಖರೀದಿಸುವ ವಿಮಾನದ ಮೊತ್ತವನ್ನು ಮೂರು ಪಟ್ಟಿಗಿಂತಲೂ ಹೆಚ್ಚಿಸಿದ ಕಾರಣವೇನು ? ಇದರಿಂದ ದೇಶದ ಬೊಕ್ಕಸಕ್ಕೆ 41,205 ಕೋಟಿ ರೂ. ನಷ್ಟವಾಗಲು ಕಾರಣವಾಗಿರುವ ಹಗರಣವನ್ನು ದೇಶದ ಜನರ ಮುಂದೆ ಬಹಿರಂಗ ಪಡಿಸಬೇಕಾದ ಹೊಣೆಗಾರಿಕೆ ದೇಶದ ಪ್ರಧಾನಿಗಿದೆ. ಪ್ರಧಾನಿ ಮೋದಿ ಫ್ರಾನ್ಸ್ ಪ್ರವಾಸಕ್ಕೆ ತೆರಳುವವರೆಗೂ ವಿಮಾನ ಎಚ್‌ಎಎಲ್‌ನಲ್ಲಿ ವಿಮಾನ ತಯಾರಿ ಮತ್ತು ಖರೀದಿಯ ಪ್ರಸ್ತಾಪ ಇದ್ದಕ್ಕಿದ್ದಂತೆ ಬದಲಾಗಲು ಕಾರಣವೇನು ಎನ್ನುವುದನ್ನು ಪ್ರಧಾನಿ ತಿಳಿಸಬೇಕಾಗಿದೆ. ಪ್ರಧಾನಿ ರಕ್ಷಣಾ ವಿಭಾಗದ ಖರೀದಿಗೆ ಸಂಬಂಧಿಸಿದಂತೆ ಡಿಪಿಪಿ ನಿಯಮಾವಳಿಯನ್ನು ಉಲ್ಲಂಘಿಸಿದ್ದಾರೆ ಎಂದು ಅವರು ಹೇಳಿದರು.
ವಿಮಾನ ಖರೀದಿ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ಗೂ ತಪ್ಪು ಮಾಹಿತಿ ನೀಡಿರುವ ಕೇಂದ್ರ ಸರಕಾರ ಸತ್ಯ ಸಂಗತಿಗಳನ್ನು ಮುಚ್ಚಿಡಲು ಪ್ರಯತ್ನಿಸಿದೆ. ಇದರಿಂದ ಯುಪಿಎ ಸರಕಾರದ ಅವಧಿಯಲ್ಲಿ ಒಂದು ವಿಮಾನದ ಮೊತ್ತ 526 ಕೋಟಿ ರೂ. ಎಂದು ನಿಗದಿಯಾಗಿರುವುದು ಈಗ 1,670 ಕೋಟಿಗೆ ಹೇಗೆ ಹೆಚ್ಚಿಸಲಾಯಿತು ಎನ್ನುವ ಬಗ್ಗೆ ಸರಿಯಾದ ಮಾಹಿತಿಯನ್ನು ಸುಪ್ರೀಂ ಕೋರ್ಟ್‌ಗೆ ಸರಕಾರ ಒದಗಿಸಿಲ್ಲ. ಆಡಳಿತದಲ್ಲಿ ಪಾರದರ್ಶಕ ವ್ಯವಸ್ಥೆ ಇಲ್ಲದೆ ಇರುವುದು, ಪ್ರತಿಪಕ್ಷದ ಸದಸ್ಯರಿಗೆ ಈ ಬಗ್ಗೆ ಮಾಹಿತಿ ನೀಡಿದೆ ಇರುವುದು ಸರಿಯಲ್ಲ. ಎಚ್ ಎ ಎಲ್ ಈ ಹಿಂದೆ ದೇಶದ ರಕ್ಷಣಾ ವಿಭಾಗಕ್ಕೆ ವಿಮಾನ ನಿರ್ಮಿಸಿ ಕೊಟ್ಟಿರುವ ಸಂಸ್ಥೆಯಾಗಿದೆ. ಅದನ್ನು ನಿರ್ಲಕ್ಷಿಸಿರುವ ಕಾರಣವನ್ನು ಬಹಿರಂಗಡಿಸಬೇಕು ಎಂದು ಪಲ್ಲಂ ರಾಜು ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾಜಿ ಶಾಸಕ ಜೆ.ಆರ್.ಲೋಬೊ, ಮೂಡಾ ಅಧ್ಯಕ್ಷ ಸುರೇಶ್ ಬಲ್ಲಾಳ್, ಕಾಂಗ್ರೆಸ್ ಮುಖಂಡರಾದ ಕಳ್ಳಿಗೆ ತಾರಾನಾಥ ಶೆಟ್ಟಿ, ನವೀನ್ ಡಿಸೋಜ, ಟಿ.ಕೆ.ಸುಧೀರ್, ಸಲೀಂ, ಆರೀಫ್, ಸುಮಂತ್ ರಾಜ್ ಮೊದಲಾದವರು ಉಪಸ್ಥಿತರಿದ್ದರು.