2019ರಲ್ಲಿ ಮೋದಿ ಬದಲು ಗಡ್ಕರಿಯನ್ನು ಪ್ರಧಾನಿಯನ್ನಾಗಿ ಮಾಡಿ: ಆರೆಸ್ಸೆಸ್ ಗೆ ಒತ್ತಾಯ

ಮುಂಬೈ, ಡಿ.18: 2019ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬರಬೇಕಾದರೆ ನರೇಂದ್ರ ಮೋದಿ ಬದಲು ಕೇಂದ್ರ ಸಚಿವ ನಿತಿನ್ ಗಡ್ಕರಿಯವರನ್ನು ಪ್ರಧಾನಿಯನ್ನಾಗಿ ಮಾಡಬೇಕು ಎಂದು ಮಹಾರಾಷ್ಟ್ರದ ಪ್ರಮುಖ ರೈತ ನಾಯಕ ಆರೆಸ್ಸೆಸ್ಸನ್ನು ಒತ್ತಾಯಿಸಿದ್ದಾರೆ.
ವಸಂತ್ ರಾವ್ ನಾಯ್ಕ್ ಶೇಟಿ ಸ್ವಾವಲಂಬನ್ ಮಿಶನ್ ಎಂಬ ರಾಜ್ಯ ಸರಕಾರದ ಸಮಿತಿಯ ಚೇರ್ ಮೆನ್ ಕಿಶೋರ್ ತಿವಾರಿ, ಪ್ರಧಾನಿ ಮೋದಿಯವರು ಹಲವು ಕಾರ್ಯಕ್ರಮಗಳ ನಿಮಿತ್ತ ಮಹಾರಾಷ್ಟ್ರಕ್ಕೆ ಆಗಮಿಸಿದ ದಿನವೇ ಆರೆಸ್ಸೆಸ್ ನ ಮುಂದೆ ಈ ಬೇಡಿಕೆಯನ್ನಿರಿಸಿದ್ದಾರೆ.
“‘ಅಹಂಕಾರಿ ನಾಯಕರ’ ನೋಟ್ ಬ್ಯಾನ್, ಜಿಎಸ್ ಟಿಯಂತಹ ವಿನಾಶಕಾರಿ ನಿರ್ಧಾರಗಳು ಮತ್ತು ತೈಲ ಬೆಲೆ ಹಾಗು ಇತರ ಜನ ವಿರೋಧಿ ನೀತಿಗಳ ನೇರ ಪ್ರತಿಫಲವಾಗಿದೆ ರಾಜಸ್ಥಾನ, ಮಧ್ಯಪ್ರದೇಶ ಮತ್ತು ಛತ್ತೀಸ್ ಗಢದ ಸೋಲು. ಪಕ್ಷ ಹಾಗು ಸರಕಾರದಲ್ಲಿರುವ ತೀವ್ರವಾದಿ ಹಾಗು ಸರ್ವಾಧಿಕಾರಿ ಮನಸ್ಥಿತಿಯ ನಾಯಕರು ಸಮಾಜ ಮತ್ತು ದೇಶಕ್ಕೆ ಅಪಾಯಕಾರಿಯಾಗಿದ್ದಾರೆ. ಇದು ಈ ಹಿಂದೆಯೂ ಸಾಬೀತಾಗಿದೆ ಮತ್ತು ಇತಿಹಾಸವು ಪುನರಾವರ್ತನೆಯಾಗಬಾರದು ಎಂದಿದ್ದರೆ ನಿತಿನ್ ಗಡ್ಕರಿಗೆ ಅಧಿಕಾರ ನೀಡಿ” ಎಂದು ಆರೆಸ್ಸೆಸ್ ನಾಯಕರಾದ ಮೋಹನ್ ಭಾಗವತ್ ಮತ್ತು ಭಯ್ಯಾಜಿ ಸುರೇಶ್ ಜೋಶಿಗೆ ಬರೆದ ಪತ್ರದಲ್ಲಿ ಕಿಶೋರ್ ತಿವಾರಿ ಒತ್ತಾಯಿಸಿದ್ದಾರೆ.