ಉಡುಪಿ: ಹೊಸ ನೀತಿ ವಿರೋಧಿಸಿ ಕೇಬಲ್ ಆಪರೇಟರ್‌ಗಳಿಂದ ಧರಣಿ

ಉಡುಪಿ, ಡಿ.18: ಕೇಬಲ್ ಆಪರೇಟರ್ ಹಾಗೂ ಗ್ರಾಹಕರಿಗೆ ಕಂಟಕ ವಾಗಲಿರುವ ಕೇಂದ್ರ ಸರಕಾರದ ನೂತನ ನೀತಿಯನ್ನು ವಿರೋಧಿಸಿ ಉಡುಪಿ ಜಿಲ್ಲಾ ಕೇಬಲ್ ಆಪರೇಟರ್‌ಗಳ ಸಂಘದ ವತಿಯಿಂದ ಮಂಗಳವಾರ ಉಡುಪಿ ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ನಡೆಸಲಾಯಿತು.
ಜಿಲ್ಲಾ ಕೇಬಲ್ ಆಪರೇಟರ್‌ಗಳ ಸಂಘದ ಅಧ್ಯಕ್ಷ ಟಿ.ಕೆ.ಕೋಟ್ಯಾನ್ ಮಾತನಾಡಿ, ಜನವರಿಯಿಂದ ಜಾರಿಗೆ ಬರಬಹುದಾದ ಟ್ರಾಯ್‌ನ ಅವೈಜ್ಞಾನಿಕ ನೂತನ ನೀತಿಯು ಕೇಬಲ್ ಉದ್ಯಮಕ್ಕೆ ಮಾರಕವಾಗಲಿಗದ್ದು, ಕೇಬಲ್ ಉದ್ಯಮವನ್ನು ನಂಬಿಕೊಂಡಿರುವ ನೂರಾರು ಕುಟುಂಬಗಳು ಬೀದಿ ಪಾಲಾಗಲಿವೆ ಎಂದು ದೂರಿದರು.
ಈ ಸಂಬಂಧ ಟ್ರಾಯ್ ಮತ್ತು ಡಿಟಿಎಚ್ ಆಪರೇಟರ್‌ಗಳ ನಡುವಿನ ಒಪ್ಪಂದದ ಸಂದರ್ಭದಲ್ಲಿ ಮನೆಮನೆಗೆ ಸೇವೆ ನೀಡುವ ಸ್ಥಳೀಯ ಕೇಬಲ್ ಆಪರೇಟರ್‌ಗಳನ್ನು ಪರಿಗಣನೆಗೆ ತೆಗೆದುಕೊಂಡಿಲ್ಲ. ಈ ಮೂಲಕ ಕೇಂದ್ರ ಸರಕಾರ ಇದನ್ನು ಬಹುರಾಷ್ಟ್ರೀಯ ಕಂಪೆನಿಗಳಾದ ಡೆನ್, ರಿಯಲನ್ಸ್‌ಗಳಿಗೆ ಒಪ್ಪಿಸಿ ಹಣ ಲೂಟಿ ಮಾಡುವ ಹುನ್ನಾರ ನಡೆಸುತ್ತಿದೆ ಎಂದು ಅವರು ಆರೋಪಿಸಿದರು.
ಉಡುಪಿ ಜಿಲ್ಲೆಯಲ್ಲಿ ಪ್ರತಿ ಕೇಬಲ್ ಗ್ರಾಹಕರು 250-300ರೂ. ದರದಲ್ಲಿ 250-300 ಚಾನೆಲ್‌ಗಳನ್ನು ಈವರೆಗೆ ವೀಕ್ಷಿಸುತ್ತಿದ್ದರು. ಹೊಸ ನೀತಿಯಿಂದ ಇನ್ನು ಮುಂದೆ ಪ್ರತಿ ತಿಂಗಳು 130ರೂ., ಜಿಎಸ್‌ಟಿ ಸೇರಿ 155ರೂ.ಗೆ 100 ಉಚಿತ ಚಾನೆಲ್‌ಗಳು ಮತ್ತು ಪ್ರತಿಯೊಂದು ಪೇ ಚಾನೆಲ್‌ಗೆ 15ರಿಂದ 30 ರೂ. ಹೆಚ್ಚುವರಿಯಾಗಿ ಪಾವತಿಸಬೇಕಾಗುತ್ತದೆ. ಇದರಿಂದ ಮಾಸಿಕ ಶುಲ್ಕ 800ರೂ.ಗೂ ಅಧಿಕ ಏರಿಕೆಯಾಗಲಿದೆ. ಈ ಕಾನೂನು ಜಿಲ್ಲೆಯ ಮಧ್ಯಮ ಹಾಗೂ ಬಡ ಗ್ರಾಹಕರಿಗೆ ದೊಡ್ಡ ಹೊರೆಯಾಗಲಿದೆ ಎಂದರು.
ಈ ಬಗ್ಗೆ ಕೇಂದ್ರ ಸರಕಾರ ಮಧ್ಯಪ್ರವೇಶಿಸಿ ನ್ಯಾಯಕೊಡುವಂತೆ ಆಗ್ರಹಿಸಿ ಜಿಲ್ಲಾಧಿಕಾರಿಗಳ ಮೂಲಕ ಪ್ರಧಾನ ಮಂತ್ರಿಗೆ ಮನವಿ ಸಲ್ಲಿಸಲಾಯಿತು. ಧರಣಿಯಲ್ಲಿ ಸಂಘದ ಅಧ್ಯಕ್ಷ ಟಿ.ಕೆ.ಕೋಟ್ಯಾನ್, ಕಾರ್ಯದರ್ಶಿ ಕಮಲಾಕ್ಷ ಪೈ, ಪ್ರಮುಖರಾದ ಕಿರಣ್ ಕುಮಾರ್, ರಾಜು ಪೂಜಾರಿ ಬನ್ನಾಡಿ, ಯಜ್ಞೇಶ್ ಸುರತ್ಕಲ್, ಸುರೇಶ್ ಶೆಟ್ಟಿ ಕೋಟೇಶ್ವರ, ರತ್ನಾಕರ ಶೆಟ್ಟಿ ಬಾರಕೂರು ಮೊದಲಾದವರು ಉಪಸ್ಥಿತರಿದ್ದರು.