ವಾರಾಹಿಯಿಂದ ನಗರಕ್ಕೆ ಪ್ರತಿದಿನ 0.47ಕ್ಯುಮೆಕ್ಸ್ ನೀರು ಪಂಪ್
ವಾರ್ಡ್ ಮಟ್ಟದ ಸಾರ್ವಜನಿಕ ಸಮಾಲೋಚನಾ ಕಾರ್ಯಾಗಾರ

ಉಡುಪಿ, ಡಿ.18: ವಾರಾಹಿ ನೀರಾವರಿ ಯೋಜನೆಗೆ ಬಳಕೆ ಮಾಡಿ ಉಳಿದ 9.46 ಕ್ಯುಮೆಕ್ಸ್ ನೀರಿನಲ್ಲಿ ಉಡುಪಿ ನಗರಸಭೆಯು ಕೇವಲ 0.47 ಕ್ಯುಮೆಕ್ಸ್ ನೀರನ್ನು ಮಾತ್ರ ಪಂಪ್ ಮಾಡುತ್ತದೆ. ಬೇಸಿಗೆಯಲ್ಲೂ ವಾರಾಹಿ ಯಲ್ಲಿ ನೀರಿನ ಲಭ್ಯತೆ ಇರುವುದರಿಂದ ಯಾವುದೇ ಸಮಸ್ಯೆಗಳು ಉದ್ಭವಿಸು ವುದಿಲ್ಲ. ಈ ಕುರಿತ ಸ್ಥಳೀಯ ಗ್ರಾಮಸ್ಥರು ಹಾಗೂ ರೈತರಲ್ಲಿರುವ ಗೊಂದಲ ವನ್ನು ನಿವಾರಿಸುವ ಕೆಲಸ ಮಾಡಲಾಗುತ್ತದೆ ಎಂದು ಉಡುಪಿ ನಗರಸಭೆ ಪರಿಸರ ಅಭಿಯಂತರ ರಾಘವೇಂದ್ರ ತಿಳಿಸಿದ್ದಾರೆ.
ಕರ್ನಾಟಕ ನಗರ ಮೂಲ ಸೌಕರ್ಯದ ಅಭಿವೃದ್ಧಿ ಮತ್ತು ಹಣಕಾಸು ನಿಗಮ ಕ್ವಿಮಿಕ್ ಟ್ರಾಂಪ್-2 ಅಡಿಯಲ್ಲಿ ಉಡುಪಿ ನಗರದಲ್ಲಿ ಕೈಗೊಳ್ಳುವ 24x7 ಕುಡಿಯುವ ನೀರು ಸರಬರಾಜು ಯೋಜನೆ ಮತ್ತು ಕಾಮಗಾರಿಗಳ ಬಗ್ಗೆ ಮಣಿಪಾಲ ಆರ್‌ಎಸ್‌ಬಿ ಸಭಾಭವನದಲ್ಲಿ ಮಂಗಳವಾರ ನಡೆದ ಆರು ವಾರ್ಡ್ ಮಟ್ಟದ ಸಾರ್ವಜನಿಕ ಸಮಾಲೋಚನಾ ಕಾರ್ಯಾಗಾರದಲ್ಲಿ ಅವರು ಮಾತನಾಡುತಿದ್ದರು.
ವಾರಾಹಿಯಲ್ಲಿ ಕೆಪಿಟಿಸಿಎಲ್ ವಿದ್ಯುತ್ ಉತ್ಪಾದನೆಗೆ ಬಳಸಿದ ನಂತರವೂ ವಾರಾಹಿ ನದಿಯಲ್ಲಿ 41.46 ಕ್ಯುಮೆಕ್ಸ್ ನೀರು ಹರಿಯುತ್ತಿರುತ್ತದೆ. ಅದರಲ್ಲಿ ವಾರಾಹಿ ನೀರಾವರಿ ಯೋಜನೆಗೆ 31.15ಕ್ಯುಮೆಕ್ಸ್ ನೀರನ್ನು ಬಳಸಲಾಗುತ್ತದೆ. ಉಳಿದಂತೆ 9.46ಕ್ಯುಮೆಕ್ಸ್ ನೀರು ಹರಿಯುತ್ತಿರುತ್ತದೆ. ಇದು ನೀರಾವರಿ ಇಲಾಖೆ ನೀಡಿದ ಅಂಕಿ ಅಂಶಗಳಾಗಿವೆ. ನಗರಸಭೆ ನೀರು ತೆಗೆಯುವುದರಿಂದ ಇದರಿಂದ ಸ್ಥಳೀಯ ರೈತರಿಗೆ ಯಾವುದೇ ಸಮಸ್ಯೆ ಇರುವುದಿಲ್ಲ ಎಂದರು.
ವಾರಾಹಿಯಿಂದ ಉಡುಪಿ ನಗರಕ್ಕೆ ನೀರು ಸರಬರಾಜು ಮಾಡುವ 360 ಕೋಟಿ ರೂ. ಯೋಜನೆಗೆ ಎಡಿಬಿಯಿಂದ ಸಾಲ ಪಡೆದು ಕೊಂಡಿದ್ದರೂ ನೀರಿನ ದರ ನಿಗದಿ ಪಡಿಸುವ ಅಧಿಕಾರ ಮಾತ್ರ ನಗರಸಭೆಗೆ ಇರುತ್ತದೆ. ಈ ಯೋಜನೆ ಯಿಂದ ಮುಂದೆ ನೀರಿನ ದರ ಏಕಾಏಕಿ ಏರಿಕೆಯಾಗಬಹುದೆಂಬ ಭಯ ಅಗತ್ಯ ಇಲ್ಲ ಎಂದು ಸಾರ್ವಜನಿರ ಪ್ರಶ್ನೆಗೆ ಸ್ಪಷ್ಟನೆ ನೀಡಿದರು.
ಎತ್ತರ ಪ್ರದೇಶಗಳಿಗೆ ಸಮಪರ್ಕವಾಗಿ ನೀರು ಸರಬರಾಜು ಮಾಡುವ ನಿಟ್ಟಿ ನಲ್ಲಿ ನೀರಿನ ಒತ್ತಡದ ಸಮಸ್ಯೆಯನ್ನು ನಿವಾರಿಸಲು ಮಣಿಪಾಲ ಅಂಗನವಾಡಿ ಸಮೀಪ, ಮಂಚಿ, ಮಣ್ಣಪಳ್ಳ, ಕೊಳಂಬೆ, ಕಕ್ಕುಂಜೆ, ಸಂತೆಕಟ್ಟೆ ಹಾಗೂ ಚಿಟ್ಪಾಡಿಯಲ್ಲಿ ನೀರಿನ ಟ್ಯಾಂಕ್‌ಗಳನ್ನು ನಿರ್ಮಿಸಲಾಗುವುದು ಎಂದು ಅವರು ಹೇಳಿದರು.
ದಿನದ 24ಗಂಟೆ ನೀರು ಸರಬರಾಜು ಮಾಡುವುದಾಗಿ ಹೇಳುವ ನಗರಸಭೆ ಮಳೆಗಾಲದಲ್ಲೂ ಸರಿಯಾಗಿ ನೀರು ಸರಬರಾಜು ಮಾಡುವುದಿಲ್ಲ ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ನಗರಕ್ಕೆ ಪ್ರತಿದಿನ 15 ಎಂಎಲ್‌ಡಿ ನೀರಿನ ಅವಶ್ಯಕತೆ ಇದ್ದು, ಆದರೆ ನಮ್ಮಲ್ಲಿರುವ ಪಂಪ್ ಒಂದು ಗಂಟೆಗೆ ಕೇವಲ ಒಂದು ಎಂಎಲ್‌ಡಿ ನೀರನ್ನು ಪಂಪ್ ಮಾಡುವ ಸಾಮರ್ಥ್ಯವನ್ನು ಹೊಂದಿದೆ. ಇದ ರಿಂದ ಸರಿಯಾಗಿ ನೀರು ಸರಬರಾಜು ಮಾಡಲು ಸಾಧ್ಯವಾಗುತ್ತಿಲ್ಲ ಎಂದರು.
ನಗರಸಭಾ ಪೌರಯುಕ್ತ ಆನಂದ್ ಕಲ್ಲೋಲಿಕರ್, ನಿಗಮದ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ರಾಮಕೃಷ್ಣಯ್ಯ, ನಗರಸಭಾ ಸದಸ್ಯರು ಗಳಾದ ಮಂಜುನಾಥ್ ಮಣಿಪಾಲ, ಕಲ್ಪನಾ ಸುಧಾಮ, ಭಾರತಿ ಪ್ರಶಾಂತ್, ಅಶೋಕ್ ನಾಯ್ಕ್, ವಿಜಯಲಕ್ಷ್ಮೀ ಉಪಸ್ಥಿತರಿದ್ದರು.
ಸಭೆಯಲ್ಲಿ ಮಾಜಿ ನಗರಸಭಾ ಉಪಾಧ್ಯಕ್ಷ ಕುಶಲ್ ಶೆಟ್ಟಿ, ಮಾಜಿ ಜಿಪಂ ಅಧ್ಯಕ್ಷ ಉಪೇಂದ್ರ ನಾಯಕ್, ನಗರಸಭಾ ಮಾಜಿ ಸದಸ್ಯ ನರಸಿಂಹ ನಾಯಕ್ ಮಾತನಾಡಿದರು. ನಗರಸಭಾ ವ್ಯಾಪ್ತಿಯ ಸೆಟ್ಟಿಬೆಟ್ಟು, ಪರ್ಕಳ, ಈಶ್ವರನಗರ, ಮಣಿಪಾಲ, ಸಗ್ರಿ, ಇಂದ್ರಾಳಿ ವಾರ್ಡ್‌ಗಳ ಸಾರ್ವಜನಿಕರು ಪಾಲ್ಗೊಂಡಿದ್ದರು.