ಡಿ.22-23: ಸಸಿಹಿತ್ಲು ಬೀಚ್‌ನಲ್ಲಿ ಕುಸ್ತಿಸ್ಪರ್ಧೆ
ಮಂಗಳೂರು, ಡಿ.18: ಬೆಂಗಳೂರಿನ ಕರ್ನಾಟಕ ಕುಸ್ತಿ ಸಂಘ ಮತ್ತು ಮಂಗಳೂರಿನ ದ.ಕ.ಜಿಲ್ಲಾ ಕುಸ್ತಿ ಸಂಘದ ಆಶ್ರಯದಲ್ಲಿ ಸಸಿಹಿತ್ಲು ಶ್ರೀ ಆಂಜನೇಯ ಗುಡಿ ಹಾಗೂ ವ್ಯಾಯಾಮ ಶಾಲೆಯಿಂದ 2018ನೇ ಸಾಲಿನ 44ನೇ ವರ್ಷದ ತುಳುನಾಡ ಕೇಸರಿ, ತುಳು ಕುಮಾರ್ ಕುಸ್ತಿ ಸ್ಪರ್ಧೆ ಹಾಗೂ ರಾಜ್ಯ ಮಟ್ಟದ ಪುರುಷರ ಕುಸ್ತಿ ಹಾಗೂ ಶಾಲಾ ಬಾಲಕರ ಕುಸ್ತಿ ಪಂದ್ಯ ಡಿ.22 ಮತ್ತು 23ರಂದು ಸಸಿಹಿತ್ಲು ಬೀಚ್‌ನಲ್ಲಿ ನಡೆಯಲಿದೆ ಎಂದು ವ್ಯಾಯಾಮ ಶಾಲೆ ಅಧ್ಯಕ್ಷ ವಿನೋದ್ ಕುಮಾರ್ ಸಸಿಹಿತ್ಲು ತಿಳಿಸಿದ್ದಾರೆ.
ನಗರದ ಪ್ರೆಸ್‌ಕ್ಲಬ್‌ನಲ್ಲಿ ಮಂಗಳವಾರ ಸುದ್ದಿಗೋಷ್ಠಿ ನಡೆಸಿದ ಅವರು ಜಿಲ್ಲಾ ಮಟ್ಟದ ಪುರುಷರ ಹಾಗೂ ಶಾಲಾ ವಿಭಾಗದ ಕುಸ್ತಿ ಪಂದ್ಯದ ದೇಹ ತೂಕವನ್ನು ಡಿ.21ರಂದು ಸಂಜೆ 3ರಿಂದ 6 ಗಂಟೆವರೆಗೆ ನಗರದ ಶ್ರೀನಿವಾಸ ಮಲ್ಯ ಒಳಾಂಗಣ ಕ್ರೀಡಾಂಗಣದಲ್ಲಿ ನಡೆಸಲಾಗುವುದು. ರಾಜ್ಯಮಟ್ಟದ ಪುರುಷ ಮತ್ತು ಮಹಿಳಾ ವಿಭಾಗದ ದೇಹ ತೂಕವನ್ನು ಸಸಿಹಿತ್ಲು ಬೀಚ್‌ನಲ್ಲಿ ಡಿ.22ರಂದು ಬೆಗ್ಗೆ 8ರಿಂದ 10 ಗಂಟೆವರೆಗೆ ನಡೆಸಲಾಗುವುದು ಎಂದರು.
ಪುರುಷರ ವಿಭಾಗದಲ್ಲಿ 35 ಕೆಜಿ (ಮಾಸ್ಟರ್ ಶಿವಾಜಿ), 42,46,50,57,61(ತುಳುನಾಡ ಕುಮಾರ್),65,74,84(ತುಳುನಾಡ ಕೇಸರಿ), ಮತ್ತು 86 ಕೆಜಿ ಮೇಲ್ಪಟ್ಟ ವಿಭಾಗದಲ್ಲಿ ಸ್ಪರ್ಧೆ ನಡೆಯಲಿದೆ. ಮಹಿಳೆಯರ ವಿಭಾಗದಲ್ಲಿ 44(ತುಳುನಾಡ ಕುವರಿ), 48, 53, 58, 63, 69 ಮತ್ತು 69 ಮೇಲ್ಪಟ್ಟು ನಡೆಯಲಿದೆ.
ಶಾಲಾ ಬಾಲಕರ ವಿಭಾಗದಲ್ಲಿ 42,50, 57 ಹಾಗೂ 65 ಕೆಜಿ ವಿಭಾಗದಲ್ಲಿ ಮತ್ತು ಪುರುಷರ ವಿಭಾಗದಲ್ಲಿ 57, 61, 65, 70 ಹಾಗೂ 74 ಕೆಜಿ ವಿಭಾಗದಲ್ಲಿ ನಡೆಯಲಿದೆ. ಸುಮಾರು 250 ಕುಸ್ತಿಪಟುಗಳು ಪಾಲ್ಗೊಳ್ಳಲಿದ್ದಾರೆ. ಎಲ್ಲ ವಿಭಾಗದ ಕುಸ್ತಿ ಪಟುಗಳಿಗೆ ನಗದು, ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಗುವುದು ಎಂದು ವಿನೋದ್ ಕುಮಾರ್ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಕುಸ್ತಿ ಸಂಘಟನಾ ಸಮಿತಿ ಉಪಾಧ್ಯಕ್ಷ ಶೋಭೇಂದ್ರ ಸಸಿಹಿತ್ಲು, ಪ್ರಧಾನ ಕಾರ್ಯದರ್ಶಿ ಸಂದೀಪ್ ಕುಮಾರ್, ನಿತಿನ್ ಕುಮಾರ್ ಉಪಸ್ಥಿತರಿದ್ದರು.