ಶಿವರಾಮ ಕಾರಂತ, ಮಹಿಷಿ, ಕನ್ನಡ ಭಾರತಿ ಪ್ರಶಸ್ತಿ ಪ್ರದಾನ

ಹೊಸದಿಲ್ಲಿ, ಡಿ.18: ದೆಹಲಿ ಕರ್ನಾಟಕ ಸಂಘವು ನೀಡುವ ಡಾ. ಶಿವರಾಮ ಕಾರಂತ ಪ್ರಶಸ್ತಿಯನ್ನು ಕವಿ ಸುಬ್ರಾಯ ಚೊಕ್ಕಾಡಿ ಮತ್ತು ಕನ್ನಡ ಭಾರತಿ ರಂಗಪ್ರಶಸ್ತಿಯನ್ನು ರಂಗಕರ್ಮಿ ಸುರೇಶ್ ಆನಗಳ್ಳಿ ಅವರಿಗೆ ಸಂಘದ ಸಭಾಂಗಣದಲ್ಲಿ ರವಿವಾರ ಪ್ರದಾನ ಮಾಡಲಾಯಿತು.
ಸಂಘದ ಅಧ್ಯಕ್ಷ ವಸಂತ ಶೆಟ್ಟಿ ಬೆಳ್ಳಾರೆ ಮಾತನಾಡಿ ಎರಡು ವರ್ಷಕ್ಕೊಮ್ಮೆ ನೀಡಲಾಗುವ ಡಾ.ಶಿವರಾಮ ಕಾರಂತ ಪ್ರಶಸ್ತಿಯನ್ನು ಪ್ರತಿ ವರ್ಷ ನೀಡು ವಂತಾಗಬೇಕು ಮತ್ತು ಪ್ರಶಸ್ತಿಗಳ ಮೊತ್ತವನ್ನು ಹೆಚ್ಚಿಸುವ ಅಗತ್ಯವಿದೆ ಎಂದರಲ್ಲದೆ, ಡಾ. ಸರೋಜಿನಿ ಮಹಿಷಿ ಪ್ರಶಸ್ತಿ ವಿಜೇತರಾದ ಡಾ. ಚಂದ್ರಶೇಖರ ಪಾಟೀಲ ಕಾರಣಾಂತರಗಳಿಂದ ರಾಜದಾನಿಗೆ ಬರಲಾಗದ್ದರಿಂದ ಬೆಂಗಳೂರಿನಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದರು.
ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರೊ. ಎಸ್.ಜಿ. ಸಿದ್ದರಾಮಯ್ಯ ಮಾತನಾಡಿ ಹೊರನಾಡ ಕನ್ನಡಿಗರ ದುಡಿಮೆಯನ್ನು ಶ್ಲಾಘಿಸಿದರಲ್ಲದೆ, ಇಂತಹ ಅರ್ಥಪೂರ್ಣ ಕಾರ್ಯಕ್ರಮಗಳು ವಿಶ್ವ ವಿದ್ಯಾನಿಲಯಗಳಲ್ಲೂ ನಡೆಯುವುದಿಲ್ಲ ಎಂದರು. ಜಾನಪದ ವಿದ್ವಾಂಸ ಡಾ. ಪುರುಷೋತ್ತಮ ಬಿಳಿಮಲೆ, ಸುರೇಶ ಕಂಜರ್ಪಣೆ, ಡಾ. ಎಸ್.ಎಂ. ವೀರಭದ್ರಪ್ಪ, ರೇಣುಕಾ ನಿಡಗುಂದಿ, ದೆಹಲಿ ಕನ್ನಡ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಸರವು ಕೃಷ್ಣ ಭಟ್ ಮಾತನಾಡಿದರು.
ಸಂಘದ ಪ್ರಧಾನ ಕಾರ್ಯದರ್ಶಿ ಸಿ.ಎಂ. ನಾಗರಾಜ ವಂದಿಸಿದರು. ಕಾರ್ಯಕಾರಿ ಸಮಿತಿಯ ಸದಸ್ಯೆ ಪೂಜಾ ಪಿ. ರಾವ್ ಕಾರ್ಯಕ್ರಮ ನಿರೂಪಿಸಿದರು.