ವಿಶ್ರಾಂತಿ ಪಡೆಯಲು ಶಿಮ್ಲಾಕ್ಕೆ ತೆರಳಿದ ರಾಹುಲ್ ಗಾಂಧಿ
ಶಿಮ್ಲಾ, ಡಿ.19: ಇತ್ತೀಚೆಗೆ ನಡೆದ ಪಂಚ ರಾಜ್ಯಗಳ ಚುನಾವಣೆಗಳಲ್ಲಿ ಬಿಡುವಿಲ್ಲದೆ ಪ್ರಚಾರ ಕೈಗೊಂಡಿದ್ದ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಇದೀಗ ಸಹೋದರಿ ಪ್ರಿಯಾಂಕಾ ಗಾಂಧಿ ವಾದ್ರಾ ಮತ್ತು ಅವರ ಮಕ್ಕಳೊಂದಿಗೆ ಹಿಮಾಚಲ ಪ್ರದೇಶದ ಸುಂದರ ಗಿರಿಧಾಮಗಳಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ.
ರಾಹುಲ್ ಗಾಂಧಿ ತನ್ನ ಸಹೋದರಿ ಪ್ರಿಯಾಂಕಾ ಗಾಂಧಿ ವಾದ್ರಾ ಮತ್ತು ಅವರ ಮಕ್ಕಳೊಂದಿಗೆ ಮಂಗಳವಾರ ಶಿಮ್ಲಾ ತಲುಪಿದರು.
ಶಿಮ್ಲಾಕ್ಕೆ ತೆರಳುವ ಹಾದಿಯಲ್ಲಿ ರಾಹುಲ್ ಗಾಂಧಿ ಅವರು ಸೋಲನ್ ಜಿಲ್ಲೆಯ ಡಾಬಾದ ಮುಂದೆ ವಾಹವನ್ನು ನಿಲ್ಲಿಸಿ ಚಹಾ, ಮ್ಯಾಗಿ, ನೂಡಲ್ಸ್ ಸೇವಿಸಿದರು. ಮಧ್ಯಪ್ರದೇಶ, ರಾಜಸ್ಥಾನ ಮತ್ತು ಛತ್ತೀಸ್ ಗಡ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಅಪೂರ್ವ ವಿಜಯ ಸಾಧಿಸಿರುವ ಮೂಡ್ ನಲ್ಲಿರುವ ರಾಹುಲ್ ಗಾಂಧಿ ಅವರು ಆಗಮಿಸಿರುವ ಸುದ್ದಿ ತಿಳಿದು ಸ್ಥಳೀಯ ನಾಯಕರು ಅಲ್ಲಿಗೆ ಧಾವಿಸಿ ರಾಹುಲ್ ಗಾಂಧಿ ಅವರನ್ನು ಅಭಿನಂದಿಸಿದರು.
ಇದೇ ವೇಳೆ ರಾಹುಲ್ ಗಾಂಧಿ ಅವರು ಹಿಮಾಚಲ ಪ್ರದೇಶದ ರಾಜಕೀಯ ಬೆಳವಣಿಗೆಯ ಬಗ್ಗೆ ಸ್ಥಳೀಯ ನಾಯಕರಿಂದ ಮಾಹಿತಿ ಪಡೆದರು ಎಂದು ತಿಳಿದು ಬಂದಿದೆ.
ರಾಹುಲ್ ಹಿಮಾಚಲ ಪ್ರದೇಶಕ್ಕೆ ಖಾಸಗಿ ಭೇಟಿಯನ್ನು ಯಾರಿಗೂ ತಿಳಿಸಿರಲಿಲ್ಲ. ರಾಹುಲ್ ಗಾಂಧಿ ಹಿಮಾಚಲ ಪ್ರದೇಶಕ್ಕೆ ಭೇಟಿ ನೀಡುವ ಬಗ್ಗೆ ತಮಗೆ ಅಧಿಕೃತ ಮಾಹಿತಿ ಇರಲಿಲ್ಲ ಎಂದು ಹಿಮಾಚಲ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಸುಖ್ವಿಂದರ್ ಸುಖು ತಿಳಿಸಿದ್ದಾರೆ