ವಿದ್ಯಾರ್ಥಿಗಳು ತಮ್ಮ ಪ್ರತಿಭೆಗಳನ್ನು ಹೊರತಂದು ಸವಾಲುಗಳನ್ನು ಎದುರಿಸಬೇಕು: ಅಬ್ದುರ್ರವೂಫ್ ಪುತ್ತಿಗೆ

ಮಂಗಳೂರು, ಡಿ. 19: ವಿದ್ಯಾರ್ಥಿಗಳಲ್ಲಿ ಹಲವಾರು ಪ್ರತಿಭೆಗಳು ಅಡಕವಾಗಿದ್ದು, ಅವುಗಳನ್ನು ಬೆಳಕಿಗೆ ತರುವುದೇ ಸ್ಪರ್ಧೆಗಳ ಉದ್ದೇಶ. ಎಲ್ಲ ರೀತಿಯ ಸವಾಲುಗಳನ್ನು ಧೈರ್ಯದಿಂದ ಎದುರಿಸಿ ಮುನ್ನಡೆದರೆ ಖಂಡಿತ ಯಶಸ್ಸನ್ನು ಪಡೆಯಬಹುದೆಂದು ತನ್ನ ಜೀವನಾನುಭವಗಳನ್ನು ಮೆಲುಕು ಹಾಕುತ್ತಾ ಉದ್ಯಮಿ ಹಾಗೂ ಟ್ಯಾಲೆಂಟ್ ರಿಸರ್ಚ್ ಫೌಂಡೇಶನ್ ಇದರ ಸಂಸ್ಥಾಪಕರಾದ ಅಬ್ದುರ್ರವೂಫ್ ಪುತ್ತಿಗೆ ಹೇಳಿದರು.
ಅವರು ಸೀರತ್ ಅಭಿಯಾನದ ಪ್ರಯುಕ್ತ ದ.ಕ. ಜಿಲ್ಲಾ ಸ್ವಾಗತ ಸಮಿತಿಯ ವತಿಯಿಂದ ಕಂಕನಾಡಿಯ ಟ್ಯಾಲೆಂಟ್ ಸಭಾಂಗಣದಲ್ಲಿ ಆಯೋಜಿಸಲಾದ ಪದವಿಪೂರ್ವ ವಿದ್ಯಾರ್ಥಿಗಳ ಭಾಷಣ ಸ್ಪರ್ಧೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ಸಮಾಜದಲ್ಲಿ ಪ್ರತಿಭೆಗಳನ್ನು ಹುಡುಕಿ ಪ್ರೋತ್ಸಾಹಿಸುವ ಕೆಲಸ ನಡೆಯಬೇಕು. ಈ ರೀತಿಯ ಕೆಲಸ ನಡೆದರೆ ವಿವಿಧ ಪ್ರತಿಭೆಗಳಿರುವ ಉನ್ನತ ವ್ಯಕ್ತಿಗಳನ್ನು ಸಮಾಜಕ್ಕೆ ನೀಡಲು ಸಾಧ್ಯವಿದೆ ಎಂದು ಕೆಲವು ಉದಾಹರಣೆಗಳ ಮುಖಾಂತರ ವ್ಯಕ್ತಪಡಿಸಿದರು.
ಕಾರ್ಯಕ್ರಮ ಸಂಯೋಜಕರಾದ ಹೈದರಾಲಿ ವಿಟ್ಲ ಸ್ವಾಗತಿಸಿದರು. ಸ್ಪರ್ಧೆಯ ತೀರ್ಪುಗಾರರಾದ ರಹ್ಮತುಲ್ಲಾ ಮಾಸ್ಟರ್, ಡಾ ಮುಬೀನ್ ಉಳ್ಳಾಲ ಮತ್ತು ಸಮೀನಾ ಅಫ್ಶಾನ್ ಉಪಸ್ಥಿತರಿದ್ದರು. ಭಾಗವಹಿಸಿದ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಕಾರ್ಯಕ್ರಮದ ಬಗ್ಗೆ ಉತ್ತಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು. ಇರ್ಶಾದ್ ವೇಣೂರು ಕಾರ್ಯಕ್ರಮ ನಿರೂಪಿಸಿದರು.