ಅಸ್ಮಾ ಜಹಾಂಗೀರ್ಗೆ ಮರಣೋತ್ತರ ‘ವಿಶ್ವಸಂಸ್ಥೆಯ ಮಾನವಹಕ್ಕು ಪ್ರಶಸ್ತಿ’
ವಿಶ್ವಸಂಸ್ಥೆ, ಡಿ. 18: ಪಾಕಿಸ್ತಾನದ ಖ್ಯಾತ ಸಾಮಾಜಿಕ ಕಾರ್ಯಕರ್ತೆ ಅಸ್ಮಾ ಜಹಾಂಗೀರ್ರನ್ನು ವಿಶ್ವಸಂಸ್ಥೆಯು ಪ್ರತಿಷ್ಠಿತ ಮಾನವಹಕ್ಕುಗಳ ಪ್ರಶಸ್ತಿಯನ್ನು ಮರಣೋತ್ತರವಾಗಿ ನೀಡುವ ಮೂಲಕ ಗೌರವಿಸಿದೆ.
ಪಾಕಿಸ್ತಾನದ ಪ್ರಬಲ ಸೇನೆಯ ತೀವ್ರ ಟೀಕಾಕಾರರಾಗಿದ್ದ ಅವರು ಉಗ್ರವಾದದ ವಿರುದ್ಧ ಹಾಗೂ ಪಾಕಿಸ್ತಾನದ ತುಳಿತಕ್ಕೊಳಗಾದ ಅಲ್ಪಸಂಖ್ಯಾತರ ಪರವಾಗಿ ಹೋರಾಟ ಮಾಡಿದ್ದರು.
ಅವರು ಈ ವರ್ಷದ ಫೆಬ್ರವರಿಯಲ್ಲಿ ತನ್ನ 66ನೇ ವಯಸ್ಸಿನಲ್ಲಿ ಹೃದಯಾಘಾತದಿಂದಾಗಿ ಇಹಲೋಕ ತ್ಯಜಿಸಿರುವುದನ್ನು ಸ್ಮರಿಸಬಹುದಾಗಿದೆ.
ಅವರಿಗೆ ಇದೀಗ 2018ರ ‘ವಿಶ್ವಸಂಸ್ಥೆ ಮಾನವ ಹಕ್ಕುಗಳ ಪ್ರಶಸ್ತಿ’ಯನ್ನು ನೀಡಲಾಗಿದೆ. ಈ ಪ್ರಶಸ್ತಿಯನ್ನು 1968ರಿಂದ ಪ್ರತಿ 5 ವರ್ಷಗಳಿಗೊಮ್ಮೆ ನೀಡಲಾಗುತ್ತಿದೆ.
ವಿಶ್ವಸಂಸ್ಥೆಯಲ್ಲಿ ಮಂಗಳವಾರ ನಡೆದ ವಿಶೇಷ ಕೂಟದಲ್ಲಿ, ಜಹಾಂಗೀರ್ ಪುತ್ರಿ ಮುನಿಝಾಯ್ ಜಹಾಂಗೀರ್ ವಿಶ್ವಸಂಸ್ಥೆಯ ಮಹಾಧಿವೇಶನದ ಅಧ್ಯಕ್ಷೆ ಮರಿಯಾ ಫೆರ್ನಾಂಡ ಎಸ್ಪಿನ್ ಸೋಸರಿಂದ ಪ್ರಶಸ್ತಿ ಸ್ವೀಕರಿಸಿದರು.
ತಾಂಝಾನಿಯದ ಬಾಲಕಿಯರ ಶಿಕ್ಷಣ ಹಕ್ಕುಗಳ ಹೋರಾಟಗಾರ್ತಿ ರೆಬೆಕಾ ಜಿಯುಮಿ, ಬ್ರೆಝಿಲ್ನ ಮೊದಲ ಮೂಲನಿವಾಸಿ ವಕೀಲೆ ಜೋನಿಯಾ ಬ್ಯಾಟಿಸ್ಟ ಡಿ ಕರ್ವಾಲೊ ಮತ್ತು ಅಪಾಯದಲ್ಲಿರುವ ಮಾನವಹಕ್ಕುಗಳ ಕಾರ್ಯಕರ್ತರನ್ನು ರಕ್ಷಿಸಲು ಹೋರಾಡುತ್ತಿರುವ ಐರ್ಲ್ಯಾಂಡ್ನ ಸಂಘಟನೆ ‘ಫ್ರಂಟ್ ಲೈನ್ ಡಿಫೆಂಡರ್ಸ್’ 2018ರ ಪ್ರಶಸ್ತಿ ಗೆದ್ದ ಇತರರು.