ಕೇಬಲ್ ಟಿವಿ, ಡಿಟಿಎಚ್ ಹೊಸನೀತಿ: ಗ್ರಾಹಕರ ಜೇಬಿಗೆ ಕತ್ತರಿ
ಹೊಸ ದರಪಟ್ಟಿ ಹೀಗಿರಲಿದೆ…
![ಕೇಬಲ್ ಟಿವಿ, ಡಿಟಿಎಚ್ ಹೊಸನೀತಿ: ಗ್ರಾಹಕರ ಜೇಬಿಗೆ ಕತ್ತರಿ ಕೇಬಲ್ ಟಿವಿ, ಡಿಟಿಎಚ್ ಹೊಸನೀತಿ: ಗ್ರಾಹಕರ ಜೇಬಿಗೆ ಕತ್ತರಿ](/images/placeholder.jpg)
ಮುಂಬೈ,ಡಿ.19: ಕೇಬಲ್ ಟಿವಿ ಮತ್ತು ಡಿಟಿಎಚ್ ನಿಯಮಗಳಲ್ಲಿ ಭಾರತೀಯ ದೂರಸಂಪರ್ಕ ನಿಯಂತ್ರಕ ಪ್ರಾಧಿಕಾರ (ಟ್ರಾಯ್) ಮಹತ್ತರ ಬದಲಾವಣೆಗಳನ್ನು ಮಾಡಿದ್ದು, ಇದರ ಪರಿಣಾಮವಾಗಿ ಜನವರಿ ಒಂದರಿಂದ ಕೇಬಲ್ ಟಿವಿ ಗ್ರಾಹಕರ ಜೇಬಿಗೆ ಕತ್ತರಿ ಬೀಳುವುದು ಖಚಿತವಾಗಿದೆ.
ಟ್ರಾಯ್ ಹೊಸ ನೀತಿ ಪ್ರಕಾರ ಕೇಬಲ್ ಟಿವಿ ಗ್ರಾಹಕರು ತಮಗಿಷ್ಟದ ವಾಹಿನಿಗಳನ್ನು ಆಯ್ಕೆ ಮಾಡಬಹುದಾಗಿದೆ ಮತ್ತು ಅದಕ್ಕೆ ಮಾತ್ರ ಹಣ ಪಾವತಿ ಮಾಡಬೇಕಿದೆ. ಆದರೆ ಇದರಿಂದ ಕೇಬಲ್ ಟಿವಿ ಗ್ರಾಹಕರು ಪ್ರಸಾರಕರಿಗೆ ಹೆಚ್ಚಿನ ಶುಲ್ಕವನ್ನು ಪಾವತಿಸುವ ಅನಿವಾರ್ಯತೆಗೆ ಒಳಗಾಗಿದ್ದಾರೆ. ಟ್ರಾಯ್ ಹೊಸ ನೀತಿಗೆ ಅನುಗುಣವಾಗಿ ಪ್ರಮುಖ ಪ್ರಸಾರಕರು ತಮ್ಮ ತಮ್ಮ ಚಾನಲ್‌ಗಳ ಗುಚ್ಛಗಳನ್ನು ರಚಿಸಿದ್ದು ಇವುಗಳಲ್ಲಿ ತಮ್ಮ ಜನಪ್ರಿಯ ವಾಹಿನಿಗಳ ಜೊತೆಗೆ ಅಷ್ಟಾಗಿ ವೀಕ್ಷಕರನ್ನು ಹೊಂದದ ವಾಹಿನಿಗಳನ್ನೂ ಸೇರಿಸಿವೆ. ಇದರಿಂದ ಗ್ರಾಹಕರು ತಮ್ಮಿಷ್ಟದ ಚಾನಲ್ ಖರೀದಿಸುವಾಗ ಹಲವು ಬೇಡದ ಚಾನಲ್‌ಗಳೂ ಸಿಗಲಿದ್ದು, ಅವುಗಳಿಗೂ ಶುಲ್ಕ ಪಾವತಿಸುವುದು ಅನಿವಾರ್ಯವಾಗುತ್ತದೆ.
ಹೊಸ ದರ ಪಟ್ಟಿಯ ಪ್ರಕಾರ, ಗ್ರಾಹಕರು ಮೊದಲ ನೂರು ಉಚಿತ ಚಾನಲ್‌ಗಳಿಗೆ 130 ರೂ. (ತೆರಿಗೆ ಪ್ರತ್ಯೇಕ) ಪಾವತಿಸಬೇಕು. ಇದರಲ್ಲಿ ಸ್ಟಾರ್ ಇಂಡಿಯಾ, ಝೀ ವಾಹಿನಿ, ಸೋನಿ ವಾಹಿನಿಯ ಯಾವುದೇ ಜನಪ್ರಿಯ ಚಾನಲ್‌ಗಳು ಸೇರಿಲ್ಲ. ಗ್ರಾಹಕರಿಗೆ ಪಾವತಿ ಚಾನಲ್‌ಗಳು ಬೇಕಿದ್ದಲ್ಲಿ ಪ್ರಸಾರಕರು ನಿಗದಿಪಡಿಸಿದ ದರವನ್ನು ಪಾವತಿಸಬೇಕಾಗುತ್ತದೆ. 95 ಪಾವತಿ ಚಾನಲ್‌ಗಳಿಗೆ ಗ್ರಾಹಕ ಹೆಚ್ಚುವರಿ 184 ರೂ. ಪಾವತಿಸುವ ಜೊತೆಗೆ 100 ರೂ. ನೆಟ್‌ವರ್ಕ್ ? ಶುಲ್ಕ (ಪ್ರತಿ 20 ಚಾನಲ್‌ಗಳಿಗೆ 25 ರೂ.ನಂತೆ) ವನ್ನು ಪಾವತಿಸಬೇಕಾಗಿದೆ. ಒಟ್ಟಾರೆಯಾಗಿ ಕೇಬಲ್ ಟಿವಿ ಗ್ರಾಹಕ ಪ್ರಾದೇಶಿಕ ಅಥವಾ ಕ್ರೀಡಾ ವಾಹಿನಿಗಳ ಹೊರತಾಗಿ ಕೇವಲ ಪ್ರಮುಖ ಚಾನಲ್‌ಗಳನ್ನು ವೀಕ್ಷಿಸಲು ಮಾಸಿಕ 450 ರೂ. ಪಾವತಿಸಬೇಕಾಗಿದೆ.
ಎಲ್ಲ ವಾಹಿನಿಗಳ ಗುಚ್ಚವನ್ನು ಪಡೆಯಬಯಸಿದರೆ ಗ್ರಾಹಕ ತನ್ನ ಜೇಬಿನಿಂದ 800 ರೂ. ನೀಡಬೇಕು (ವಾಹಿನಿಗಳ ಗುಚ್ಛದ ಮೇಲೆ ಶೇ.35-55 ರಿಯಾಯಿತಿ ಇದೆ). ಈ ಬೆಳವಣಿಗೆಯ ಬಗ್ಗೆ ಕಳವಳ ವ್ಯಕ್ತಪಡಿಸಿರುವ ಕೇಬಲ್ ಆಪರೇಟರ್‌ಗಳು, ಟ್ರಾಯ್ ಹೇಳಿದ ಮಾತ್ರಕ್ಕೆ ಗ್ರಾಹಕರು ಹೆಚ್ಚುವರಿ ಶುಲ್ಕವನ್ನು ಪಾವತಿಸಲು ಸಿದ್ಧರಾಗುವುದಿಲ್ಲ. ಮೆಟ್ರೊ ನಗರಗಳ ಗ್ರಾಹಕರು ಒಪ್ಪಿದರೂ ಇತ್ತೀಚೆಗಷ್ಟೇ ಕೇಬಲ್ ಟಿವಿ ಡಿಜಟಲೀಕರಣದಿಂದಾಗಿ ದುಪ್ಪಟ್ಟು ಹಣ ಪಾವತಿಸಲು ಆರಂಭಿಸಿರುವ ಮೂರು ಮತ್ತು ನಾಲ್ಕನೇ ಹಂತದ ನಗರಗಳ ಗ್ರಾಹಕರು ಮತ್ತೆ ಹೆಚ್ಚುವರಿ ಶುಲ್ಕ ಕೇಳಿದರೆ ದಂಗೆಯೇಳುವುದು ಖಂಡಿತ ಎಂಬ ಆತಂಕ ವ್ಯಕ್ತಪಡಿಸಿದ್ದಾರೆ.