ಕೇಸರಿ ಪಡೆಗಳ ದಾಳಿಯಿಂದ ಮೃತಪಟ್ಟಿದ್ದ ಮೊಹ್ಸಿನ್ ಶೇಖ್ ತಂದೆ ನಿಧನ
ಸಂತ್ರಸ್ತ ಕುಟುಂಬಕ್ಕೆ ಇನ್ನೂ ಸಿಕ್ಕಿಲ್ಲ ನ್ಯಾಯ

ಮುಂಬೈ, ಡಿ.19: 2014ರಲ್ಲಿ ಪುಣೆಯಲ್ಲಿ ಕೇಸರಿ ಸಂಘಟನೆ ಕಾರ್ಯಕರ್ತರ ಥಳಿತಕ್ಕೊಳಗಾಗಿ ಮೃತಪಟ್ಟ ಪುಣೆ ಮೂಲಕ ಟೆಕ್ಕಿ ಮೊಹ್ಸಿನ್ ಶೇಖ್ ತಂದೆ ಸಾದಿಕ್ ಶೇಖ್ ಡಿ.17ರಂದು ಹೃದಯಾಘಾತದಿಂದ ಮೃತರಾಗಿದ್ದಾರೆ.
ಮರಾಠ ದೊರೆ ಶಿವಾಜಿ ಮತ್ತು ಶಿವಸೇನೆ ಮುಖಂಡ ಬಾಳಠಾಕ್ರೆ ವಿರುದ್ಧ ಸಾಮಾಜಿಕ ಮಾಧ್ಯಮದಲ್ಲಿ ಅವಹೇಳನಕಾರಿಯಾದ ಬರಹಗಳು ಪ್ರಸಾರವಾಗುತ್ತಿದೆ ಎಂದು ದೂರಿದ್ದ ಹಿಂದೂ ರಾಷ್ಟ್ರಸೇನಾ ಪ್ರತಿಭಟನೆ ನಡೆಸಿತ್ತು. ಈ ವೇಳೆ ಸಂಘಟನೆಯ ಮುಖಂಡರು ನಡೆಸಿದ್ದ ಪ್ರಚೋದನಕಾರಿ ಭಾಷಣದಿಂದ ಪ್ರೇರೇಪಿತಗೊಂಡ ಗುಂಪೊಂದು ಆ ವೇಳೆ ಅಲ್ಲಿದ್ದ ಮೊಹ್ಸಿನ್ ಶೇಖ್ ಹಾಗೂ ಮತ್ತೊಬ್ಬ ಯುವಕನ ಮೇಲೆ ಹಲ್ಲೆ ನಡೆಸಿತ್ತು. ಮಸೀದಿಯಲ್ಲಿ ಪ್ರಾರ್ಥನೆ ಮುಗಿಸಿಕೊಂಡು ಮನೆಗೆ ಬರುತ್ತಿದ್ದಾಗ ನಡೆದ ಗುಂಪು ದಾಳಿಯಿಂದ ತೀವ್ರ ಗಾಯಗೊಂಡಿದ್ದ ಮೊಹ್ಸಿನ್ ಬಳಿಕ ಮೃತಪಟ್ಟಿದ್ದರು.
ಸ್ಥಳದಲ್ಲಿದ್ದ ಇನ್ನೊಬ್ಬ ಯುವಕ ಗಂಭೀರ ಗಾಯಗೊಂಡಿದ್ದ. ತನ್ನ ಮಗನ ಸಾವಿಗೆ ನ್ಯಾಯ ದೊರಕಬೇಕೆಂದು ಸಾದಿಕ್ ಶೇಖ್ ಹಲವು ಅಧಿಕಾರಿಗಳನ್ನು ಭೇಟಿಯಾಗಿ ಮನವಿ ಸಲ್ಲಿಸಿದ್ದರಲ್ಲದೆ ಹಲವೆಡೆ ಅರ್ಜಿ ಸಲ್ಲಿಸಿದ್ದರು. ಮಾಧ್ಯಮಗಳಿಗೆ ನೀಡಿದ್ದ ಸಂದರ್ಶನದಲ್ಲೂ ಇದೇ ಮಾತನ್ನು ಹೇಳಿದ್ದರು. ಅಲ್ಲದೆ ಈ ಪ್ರಕರಣದಲ್ಲಿ ನಡೆದ ನ್ಯಾಯಾಲಯದ ಕಲಾಪಗಳಿಗೆ ತಪ್ಪದೆ ಹಾಜರಾಗುತ್ತಿದ್ದರು.
ಮೃತಪಟ್ಟ ಮೊಹ್ಸಿನ್ ಕುಟುಂಬದ ಏಕೈಕ ದುಡಿಯುವ ಸದಸ್ಯನಾಗಿದ್ದ ಹಿನ್ನೆಲೆಯಲ್ಲಿ ತನಗೆ ಆರ್ಥಿಕ ಪರಿಹಾರ ನೀಡಬೇಕು ಹಾಗೂ ಕಿರಿಯ ಪುತ್ರನಿಗೆ ಉದ್ಯೋಗ ನೀಡಬೇಕು ಎಂಬ ವೀಡಿಯೊ ಸಂದೇಶವನ್ನೂ ಪೋಸ್ಟ್ ಮಾಡಿದ್ದರು. ಆರ್ಥಿಕ ಪರಿಹಾರ ಹಾಗೂ ಕಿರಿಯ ಪುತ್ರನಿಗೆ ಉದ್ಯೋಗ ನೀಡುವುದಾಗಿ ಮಹಾರಾಷ್ಟ್ರ ಮುಖ್ಯಮಂತ್ರಿ ನೀಡಿದ್ದ ಭರವಸೆ ಈಡೇರಿರಲಿಲ್ಲ. ನ್ಯಾಯಕ್ಕಾಗಿ ನಡೆಸಿದ ಹೋರಾಟದಲ್ಲಿ ಆರ್ಥಿಕ ಸಮಸ್ಯೆ, ಭಾವನಾತ್ಮಕ, ದೈಹಿಕ ಸಮಸ್ಯೆಗಳಿಂದ ಸಾದಿಕ್ ಕುಗ್ಗಿಹೋಗಿದ್ದರು. ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ ಸಾದಿಕ್ 63ನೆಯ ವಯಸ್ಸಿನಲ್ಲಿ ಮೃತರಾಗಿದ್ದಾರೆ.







