ಮಹಿಳೆಗೆ ವಂಚಿಸಿದ ಆರೋಪಿಗೆ ಕಠಿಣ ಶಿಕ್ಷೆ

ಮಂಗಳೂರು, ಡಿ.19: ಮನೆ ಕಟ್ಟಿಸಿ ಕೊಡುವುದಾಗಿ ನಂಬಿಸಿ ಮಹಿಳೆಯಿಂದ ಸುಮಾರು 60 ಲಕ್ಷ ರೂ. ಪಡೆದು ವಂಚಿಸಿದ ಮತ್ತು ಬೆದರಿಕೆಯೊಡ್ಡಿದ ಪ್ರಕರಣದ ಅಪರಾಧಿ ಮುಲ್ಕಿ ಕಾರ್ನಾಡು ನಿವಾಸಿ ಮನೋಜ್ ಕುಮಾರ್ (36)ನಿಗೆ ಮಂಗಳೂರಿನ 6ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಬುಧವಾರ 3.2 ವರ್ಷ ಕಠಿಣ ಶಿಕ್ಷೆ ಹಾಗೂ 15,000 ರೂ. ದಂಡ ವಿಧಿಸಿ ತೀರ್ಪು ನೀಡಿದೆ.
ವಂಚನೆಯ (ಐಪಿಸಿ ಸೆಕ್ಷನ್ 420) ಆರೋಪಕ್ಕೆ 3 ವರ್ಷ 2 ತಿಂಗಳ ಕಠಿಣ ಶಿಕ್ಷೆ ಮತ್ತು 15,000ರೂ. ದಂಡ ಹಾಗೂ ದಂಡ ತೆರಲು ತಪ್ಪಿದರೆ ಮತ್ತೆ 1 ತಿಂಗಳು ಸಾದಾ ಜೈಲು ಶಿಕ್ಷೆ, ಬೆದರಿಕೆ ಒಡ್ಡಿರುವ (ಐಪಿಸಿ ಸೆಕ್ಷನ್ 506) ಆರೋಪಕ್ಕೆ 4 ತಿಂಳ ಸಾದಾ ಸಜೆಯನ್ನು ವಿಧಿಸಲಾಗಿದೆ.
ಪ್ರಕರಣದ ಹಿನ್ನೆಲೆ: ದಿಲ್ಲಿಯ ವೀಸಾ ಕ್ಲಿಯರೆನ್ಸ್ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ ಮತ್ತು ಮಹಾರಾಷ್ಟ್ರದ ದೊಂಬಿವಿಲಿಯಲ್ಲಿ ಪುತ್ರನ ಜತೆ ವಾಸವಿದ್ದ ನಂದಿಕೂರು ಮೂಲದ ಮಹಿಳೆ ಊರಿನಲ್ಲಿ ಮನೆ ನಿರ್ಮಾಣಕ್ಕೆ ನಿರ್ಧರಿಸಿ ಮನೋಜ್ ಕುಮಾರ್‌ನ ಸಂಸ್ಥೆಯನ್ನು ಸಂಪರ್ಕಿಸಿದ್ದರು. ಆತ ಬಪ್ಪನಾಡು ಬಳಿ 9 ಸೆಂಟ್ಸ್ ಜಮೀನು ತೋರಿಸಿ ಅಲ್ಲಿ ಮನೆ ಕಟ್ಟಿಸಿ 60 ಲಕ್ಷ ರೂ.ಗೆ ಮಾರಾಟ ಮಾಡುವುದಾಗಿ ಹೇಳಿದ್ದ. ಮಹಿಳೆ ಆತನ ಮಾತಿಗೆ ಒಪ್ಪಿಕೊಂಡು 50,000 ರೂ. ಮುಂಗಡ ನೀಡಿದ್ದಲ್ಲದೆ ಬಳಿಕ ಆತನ ಖಾತೆಗೆ ಸುಮಾರು 60 ಲಕ್ಷ ರೂ.ಗಿಂತಲೂ ಅಧಿಕ ಹಣ ಜಮೆ ಮಾಡಿದ್ದರು. ಆದರೆ ಕರಾರು ಪತ್ರ ಮಾಡಿಸಿರಲಿಲ್ಲ. 2014 ಮೇ 2ರಂದು ಗೃಹ ಪ್ರವೇಶ ನಡೆಸಿದ್ದರೂ ಮನೆಯನ್ನು ನೋಂದಣಿ ಮಾಡಿಸಿ ಕೊಟ್ಟಿರಲಿಲ್ಲ. ಹಣವನ್ನೂ ಹಿಂತಿರುಗಿಸಿರಲಿಲ್ಲ. ಈ ಮಧ್ಯೆ ಆತ ಆ ಮನೆಯ ದಾಖಲಾತಿಯನ್ನು ಸಿಂಡಿಕೇಟ್ ಬ್ಯಾಂಕ್‌ನಲ್ಲಿರಿಸಿ 25 ಲಕ್ಷ ರೂ. ಸಾಲ ಪಡೆದಿದ್ದ.
ಈ ಬಗ್ಗೆ ಮಹಿಳೆಯು 2014 ಡಿ.12ರಂದು ಮುಲ್ಕಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಅದರಂತೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದರು. ಅಂದಿನ ಪೊಲೀಸ್ ಇನ್ಸ್‌ಪೆಕ್ಟರ್ ರಾಮಚಂದ್ರ ನಾಯಕ್ ತನಿಖೆ ನಡೆಸಿ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಿದ್ದರು.
ನ್ಯಾಯಾಧೀಶ ಡಿ.ಟಿ.ಪುಟ್ಟರಂಗ ಸ್ವಾಮಿ ಪ್ರಕರಣದ ವಿಚಾರಣೆ ನಡೆಸಿ ಬುಧವಾರ ಶಿಕ್ಷೆಯ ಪ್ರಮಾಣವನ್ನು ಪ್ರಕಟಿಸಿದರು. ಸರಕಾರದ ಪರವಾಗಿ ಪಬ್ಲಿಕ್ ಪ್ರಾಸಿಕ್ಯೂಟರ್ ಜುಡಿತ್ ಒ.ಎಂ. ಕ್ರಾಸ್ತಾ ವಾದಿಸಿದ್ದರು.