ಮಂಗಳೂರು: ರಫೇಲ್ ಕುರಿತು ಕಾಂಗ್ರೆಸ್ ಆರೋಪ ಖಂಡಿಸಿ ಬಿಜೆಪಿ ಪ್ರತಿಭಟನೆ
ಮಂಗಳೂರು,ಡಿ.19: ಮುಂದಿನ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸುವ ಷಡ್ಯಂತ್ರದ ಭಾಗವಾಗಿ ಕಾಂಗ್ರೆಸ್ ಪಕ್ಷವು ರಫೇಲ್ ಯುದ್ಧ ವಿಮಾನ ಖರೀದಿ ಬಗ್ಗೆ ಅಪಪ್ರಚಾರದಲ್ಲಿ ತೊಡಗಿವೆ ಎಂದು ವಿಧಾನಸಭೆಯ ಮಾಜಿ ಉಪ ಸಭಾಪತಿ ಎನ್.ಯೋಗೀಶ್ ಭಟ್ ಆರೋಪಿಸಿದ್ದಾರೆ.
ದ.ಕ.ಜಿಲ್ಲಾಧಿಕಾರಿ ಕಚೇರಿ ಮುಂದೆ ಬುಧವಾರ ದ.ಕ.ಜಿಲ್ಲಾ ಬಿಜೆಪಿ ಹಮ್ಮಿಕೊಂಡ ಪ್ರತಿಭಟನೆಯಲ್ಲಿ ಪಾಲ್ಗೊಂಡು ಅವರು ಮಾತನಾಡುತ್ತಿದ್ದರು.
ರಫೇಲ್ ಯುದ್ಧ ವಿಮಾನ ಖರೀದಿ ಪಾರದರ್ಶಕವಾಗಿ ನಡೆದಿದೆ. ಸರ್ವೋಚ್ಛ ನ್ಯಾಯಾಲಯ ಕೂಡಾ ರಫೇಲ್ ಖರೀದಿ ಒಪ್ಪಂದವು ನ್ಯಾಯಯುತವಾಗಿದೆ ಎಂದಿದೆ. ಹಾಗಿದ್ದರೂ ಕೂಡ ಕಾಂಗ್ರೆಸ್ ಪಕ್ಷವು ಕೇಂದ್ರದ ಎನ್‌ಡಿಎ ಸರಕಾರದ ಮೇಲೆ ಆಧಾರ ರಹಿತ ಆರೋಪಗಳನ್ನು ಮಾಡುತ್ತಿದೆ ಎಂದು ಯೋಗೀಶ್ ಭಟ್ ಹೇಳಿದರು.
ದ.ಕ.ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ರವಿಶಂಕರ ಮಿಜಾರ್ ಮತ್ತು ಕೋಶಾಧಿಕಾರಿ ಸಂಜಯ ಪ್ರಭು ಮಾತನಾಡಿದರು. ಕೊಡಿಯಾಲಬೈಲ್ ದಿನಕರ ಶೆಟ್ಟಿ ಮನವಿ ವಾಚಿಸಿದರು.
ಮಂಗಳೂರು ಕ್ಷೇತ್ರದ ಬಿಜೆಪಿ ಅಧ್ಯಕ್ಷ ಸಂತೋಷ್ ಕುಮಾರ್ ರೈ, ಕಾರ್ಪೋರೇಟರ್‌ಗಳಾದ ಪ್ರೇಮಾನಂದ ಶೆಟ್ಟಿ, ರಾಜೇಂದ್ರಕುಮಾರ್, ಸುಧೀರ್ ಶೆಟ್ಟಿ, ಜಯಂತಿ ಆಚಾರ್, ವಿಜಯಕುಮಾರ್, ವಕ್ತಾರ ಸತೀಶ್ ಪ್ರಭು ಪ್ರತಿಭಟನೆಯ ನೇತೃತ್ವ ವಹಿಸಿದ್ದರು.





