ಭಕ್ತಿ, ಧಾರ್ಮಿಕತೆ ಸಂಶಯಾತ್ಮಕವಾಗಿದೆ: ಪ್ರೊ.ಬಿ.ಎ.ವಿವೇಕ ರೈ
‘ಮಸಾಲೆ ಮೀಮಾಂಸೆ’ ಕೃತಿ ಬಿಡುಗಡೆ

ಮಂಗಳೂರು, ಡಿ.19: ಪ್ರಸ್ತುತ ನಿಜವಾದ ಧಾರ್ಮಿಕತೆ, ಭಕ್ತಿ ಇವೆಲ್ಲ ಸಂಶಯಾತ್ಮಕವಾಗಿವೆ. ಪ್ರತಿಷ್ಟೆ, ಹಣ ಹಾಗೂ ಧಾರ್ಮಿಕತೆ ಮಿಶ್ರವಾಗಿ ಹೇಗೆ ನಮ್ಮ ಬದುಕನ್ನು ಕನಿಷ್ಠವಾಗಿಸುತ್ತದೆ ಎನ್ನುವುದಕ್ಕೆ ಸುಳ್ವಾಡಿ ವಿಷ ಪ್ರಸಾದ ಪ್ರಕರಣ ಒಂದು ರೂಪಕ ಎಂದು ಹಂಪಿ ವಿವಿಯ ವಿಶ್ರಾಂತ ಕುಲಪತಿ ಪ್ರೊ.ಬಿ.ಎ.ವಿವೇಕ ರೈ ಹೇಳಿದರು.
ಮಂಗಳೂರು ವಿವಿ ಪದವಿ ಕಾಲೇಜು ಕನ್ನಡ ಅಧ್ಯಾಪಕರ ಸಂಘ ‘ವಿಕಾಸ’, ಆಕೃತಿ ಆಶಯ ಪಬ್ಲಿಕೇಶನ್ಸ್, ಸಂತ ಆ್ಯಗ್ನೆಸ್ ಕಾಲೇಜು ಕನ್ನಡ ಸಂಘದ ಸಹಯೋಗದಲ್ಲಿ ಸಂತ ಆ್ಯಗ್ನೆಸ್ ಕಾಲೇಜಿನ ಕನ್ನಡ ಉಪನ್ಯಾಸಕ ಡಾ. ಸಂಪೂರ್ಣಾನಂದ ಬಳ್ಕೂರು ಅವರ ‘ಮಸಾಲೆ ಮೀಮಾಂಸೆ’ ಲಲಿತ ಪ್ರಬಂಧಗಳ ಸಂಕಲನವನ್ನು ಕಾಲೇಜಿನ ಕಾನ್ಫರೆನ್ಸ್ ಹಾಲ್‌ನಲ್ಲಿ ಬುಧವಾರ ನಡೆದ ಕಾರ್ಯಕ್ರಮದಲ್ಲಿ ಬಿಡುಗಡೆಗೊಳಿಸಿ ಅವರು ಮಾತನಾಡಿದರು.
ಕನ್ನಡದ ಎಲ್ಲ ಪ್ರಾದೇಶಿಕ ಭಾಷೆಗಳೂ ಸೃಜನಶೀಲತೆಯಿಂದ ಕೂಡಿವೆ. ಈ ಭಾಷೆಗಳಲ್ಲಿಯೇ ಬದುಕಿನ ಒಳ-ಹೊರಗುಗಳನ್ನು ಬರಹಕ್ಕೆ ಬಳಸಿಕೊಂಡರೆ ಉತ್ತಮ ಲೇಖಕನಾಗಿ ಬೆಳೆಯಲು ಸಾಧ್ಯವಿದೆ ಎಂದು ಅಭಿಪ್ರಾಯಪಟ್ಟ ಪ್ರೊ.ಬಿ.ಎ.ವಿವೇಕ ರೈ, ಸಾಹಿತ್ಯವು ನೇರವಾಗಿ ಯಾವುದನ್ನೂ ಹೇಳುವುದಿಲ್ಲ. ಆದರೆ ಸಮಾಜಕ್ಕೆ ಚಿಕಿತ್ಸಾತ್ಮಕ ಔಷಧಿಯಾಗುವ ಪರೋಕ್ಷ ಸಂದೇಶವನ್ನು ಅದು ಸಾರುತ್ತದೆ. ‘ಮಸಾಲೆ ಮೀಮಾಂಸೆ’ ಕೃತಿಯೂ ಈ ನೆಲೆಗಟ್ಟಿನಲ್ಲಿ ರೂಪಿತಗೊಂಡಿವೆ. ಧರ್ಮ, ಹಣ, ಮೂಢನಂಬಿಕೆ, ಮೋಸ ವಂಚನೆ ಮತ್ತು ಅವುಗಳ ಮೂಲಕ ಮಾಡುವ ಲಾಭಗಳಿಂದ ಬದುಕು ಅರ್ಥ ಕಳೆದುಕೊಂಡು ಕಲುಷಿತಗೊಂಡಿರುವ ಜೀವನದ ವಿಷಾದದ ಸಂಗತಿಗಳು ಈ ಕೃತಿಯಲ್ಲಿ ವ್ಯಂಗ್ಯವಾಗಿವೆ ಎಂದು ನುಡಿದರು.
ಕೃತಿ ಪರಿಚಯಿಸಿದ ಮಂಗಳೂರು ಆಕಾಶವಾಣಿಯ ಕಾರ್ಯಕ್ರಮ ನಿರ್ವಾಹಕ ಡಾ. ಬಿ.ಎಂ.ಶರಭೇಂದ್ರ ಸ್ವಾಮಿ ಮಾತನಾಡಿ, ‘ಮಸಾಲೆ ಮೀಮಾಂಸೆ’ ಸಂಕಲನದಲ್ಲಿರುವ ಒಳಗುಗಳು ಬದುಕಿನ ಭಾಗವೇ ಆಗಿದೆ. ಮಸಾಲೆದೋಸೆಯನ್ನು ಮುಂದಿಟ್ಟುಕೊಂಡು ಸಮಾಜವನ್ನು ಚಿಕಿತ್ಸಕವಾಗಿ ನೋಡುವ ಪ್ರಯತ್ನವನ್ನು ಲೇಖಕರು ಮಾಡಿದ್ದಾರೆ ಎಂದರು.
ಕಾಲೇಜಿನ ಪ್ರಾಂಶುಪಾಲೆ ಡಾ.ಸಿ.ಸಿ.ಎಂ. ಜೆಸ್ವೀನಾ ಅಧ್ಯಕ್ಷತೆ ವಹಿಸಿದ್ದರು. ಲೇಖಕ ಡಾ. ಸಂಪೂರ್ಣಾನಂದ ಬಳ್ಕೂರು ಉಪಸ್ಥಿತರಿದ್ದರು. ಮಂಗಳೂರು ವಿವಿ ಪದವಿ ಕಾಲೇಜು ಕನ್ನಡ ಅಧ್ಯಾಪಕರ ಸಂಘ ‘ವಿಕಾಸ’ದ ಅಧ್ಯಕ್ಷ ಪ್ರೊ. ಕೃಷ್ಣಮೂರ್ತಿ ಪಿ. ಸ್ವಾಗತಿಸಿದರು. ಅನನ್ಯಾ ಕಾರ್ಯಕ್ರಮ ನಿರೂಪಿಸಿದರು.