ತೊಕ್ಕೊಟು: ಲಾರಿ ಮಗುಚಿ ಕ್ಲೀನರ್ ಸಾವು ಪ್ರಕರಣ; ಎಸ್‌ಡಿಪಿಐ ಪ್ರತಿಭಟನೆ
ಮೃತ ವಸಂತ್ ಕುಟುಂಬಕ್ಕೆ 25 ಲಕ್ಷ ಪರಿಹಾರಕ್ಕೆ ಆಗ್ರಹ

ಉಳ್ಳಾಲ,ಡಿ.19: ಸೋಶಿಯಲ್ ಡೆಮೋಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ ಇದರ ನಗರ ಸಭಾ ಸಮಿತಿಯ ವತಿಯಿಂದ ತೊಕ್ಕೊಟ್ಟುವಿನಲ್ಲಿ ಲಾರಿ ಮಗುಚಿ ಅಮಾಯಕ ವಸಂತ್ ಅವರು ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿ ಮೃತ ಕುಟುಂಬಕ್ಕೆ ಪರಿಹಾರ ಹಾಗೂ ಹೆದ್ದಾರಿ ಇಂಜಿನಿಯರ್, ಟ್ರಾಫಿಕ್ ಪೊಲೀಸರ ವಿರುದ್ದ ಕ್ರಮಕ್ಕೆ ಆಗ್ರಹಿಸಿ ಬುಧವಾರ ತೊಕ್ಕೊಟ್ಟುವಿನಲ್ಲಿ ಪ್ರತಿಭಟನೆ ನಡೆಸಿತು.
ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಪಕ್ಷದ ರಾಜ್ಯ ಕಾರ್ಯದರ್ಶಿ ಅಕ್ರಮ್ ಹಸನ್ ಅವರು, ಹೆದ್ದಾರಿ ಕಾಮಗಾರಿಯ ಅಜಾಗರೂಕತೆಯಿಂದಾಗಿ ಬೈಂದೂರಿನಿಂದ ಹಿಡಿದು ತಲಪಾಡಿ ತನಕ ನೂರಾರು ಜೀವಗಳು ಹಾನಿಯಾಗಿವೆ. ಕೂಡಲೇ ಈ ಕಂಪೆನಿಯ ವಿರುದ್ದ ಜಿಲ್ಲಾಡಳಿತ ಪ್ರಕರಣ ದಾಖಲಿಸಬೇಕೆಂದು ಹಾಗೂ ಮೃತ ವಸಂತ್ ಕುಟುಂಬಕ್ಕೆ 25 ಲಕ್ಷ ಪರಿಹಾರ ನೀಡಬೇಕೆಂದು ಒತ್ತಾಯಿಸಿದರು.
ಜಿಲ್ಲಾ ಕಾರ್ಯದರ್ಶಿ ಅಶ್ರಫ್ ಮಂಚಿ ಮಾತನಾಡಿ, ಕಳಪೆ ಕಾಮಗಾರಿ ನಡೆಸಿದ ಹೆದ್ದಾರಿ ಆಯೋಗದ ಇಂಜಿನಿಯರ್ ಹಾಗೂ ಜನನಿಬಿಡ ಪ್ರದೇಶದಲ್ಲಿ ಟ್ರಾಫಿಕ್ ಲಾರಿಯನ್ನು ನಿಲ್ಲಿಸಿ ಅವಘಡಕ್ಕೆ ಕಾರಣವಾದ ಪೊಲೀಸರ ವಿರುದ್ದ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ನಗರ ಸಮಿತಿ ಅಧ್ಯಕ್ಷ ಅಬ್ಬಾಸ್ ಎ.ಆರ್, ಗಡಿನಾಡ ರಕ್ಷಣಾ ವೇದಿಕಯ ಸಿದ್ಧೀಕ್ ತಲಪಾಡಿ. ಉಳ್ಳಾಲ ವಿಧಾನಸಭಾ ಕ್ಷೇತ್ರದ ಸಮಿತಿ ಅಧ್ಯಕ್ಷ ಅಬ್ಬಾಸ್ ಕಿನ್ಯ, ಕಾರ್ಯದರ್ಶಿ ಲತೀಫ್ ಕೋಡಿಜಾಲ್, ಎಸ್‌ಡಿಪಿಐ ಕೌನ್ಸಿಲರ್‌ಗಳಾದ ರಮೀರ್ ಕೋಡಿ, ಅಸ್ಗರ್ ಆಲಿ ಅಳೇಕಳ ಮೊದಲಾದವರು ಉಪಸ್ಥಿತರಿದ್ದರು