ತೊಕ್ಕೊಟ್ಟು ಪ್ಲೈ ಓವರ್ ರಸ್ತೆ ಕಾಮಗಾರಿ ಮಾರ್ಚ್ ತಿಂಗಳಲ್ಲಿ ಪೂರ್ಣ: ಡಿಸಿ ಸಸಿಕಾಂತ್ ಸೆಂಥಿಲ್

ಮಂಗಳೂರು.ಡಿ.19: ಪಂಪ್‌ವೆಲ್ ಹಾಗೂ ತೊಕ್ಕೊಟ್ಟಿನ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ನಿರ್ಮಾಣಗೊಳ್ಳುತ್ತಿರುವ ಪ್ಲೈ ಓವರ್ ರಸ್ತೆ ಕಾಮಗಾರಿ ಮಾರ್ಚ್ 2019ರಲ್ಲಿ ಹಾಗೂ ಪಂಪ್‌ವೆಲ್ ಪ್ಲೈ ಓವರ್ ರಸ್ತೆ ಕಾಮಗಾರಿ ಮೇ 2019ರೊಳಗೆ ಪುರ್ಣಗೊಳ್ಳಲಿದೆ ಎಂದು ಜಿಲ್ಲಾಧಿಕಾರಿಯ ಸಸಿಕಾಂತ್ ಸೆಂಥಿಲ್ ತಿಳಿಸಿದ್ದಾರೆ.
ಜಿಲ್ಲಾಧಿಕಾರಿ ಕಚೇರಿಯಲ್ಲಿ ಇಂದು ನಡೆದ ರಸ್ತೆ ಅಭಿವೃದ್ಧಿ ಪ್ರಾಧಿಕಾರದ ಸಭೆಯಲ್ಲಿ ಅವರು ಇಂದು ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.
ಕಳೆದ 5 ವರ್ಷಗಳಿಂದ ಬಹುತೇಕ ಸ್ಥಗಿತಗೊಂಡಿದ್ದ ಕಾಮಗಾರಿ ಈಗ ಪುನಾರಂಭಗೊಂಡಿದ್ದು ಶೀಘ್ರದಲ್ಲಿ ಪೂರ್ಣಗೊಳ್ಳಲಿದೆ ಎಂದು ಸಭೆಯಲ್ಲಿ ತಿಳಿಸಿದರು. ಖಾಸಗಿ ಬಸ್ ಗಳ ಚಾಲಕರ ಮತ್ತು ಬಸ್ ಓಡಾಟಕ್ಕೆ ಸಂಬಂದಿಸಿದ ದೂರುಗಳನ್ನು ಗಮನಿಸಿದ ಜಿಲ್ಲಾಧಿಕಾರಿ ಈ ಸಮಸ್ಯೆಗಳನ್ನು ನಿವಾರಿಸಲು ಪಾರದರ್ಶಕವಾಗಿರುವ ತಾಂತ್ರಿಕತೆಯನ್ನು ಬಳಸಿಕೊಳ್ಳಲು ಚಿಂತನೆ ಇದೆ ಎಂದರು.
ಟ್ರಾಫಿಕ್ ಸರ್ವೆ: ನಗರದಲ್ಲಿ ಸಾರ್ಟ್ ಸಿಟಿ ಯೋಜನೆಯ ಅಂಗವಾಗಿ ವಾಹನ ದಟ್ಟನೆಯ ಸರ್ವೇನಡೆಯುತ್ತಿದೆ.ಶೇ 50 ಪೂರ್ಣಗೊಂಡಿದೆ. ಶೀಘ್ರದಲ್ಲಿ ಪುರ್ಣಗೊಂಡಾಗ ನಗರದ ಸಾರಿಗೆ ವ್ಯವಸ್ಥೆ ಸಮರ್ಪಕವಾಗಲಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಸಭೆಯಲ್ಲಿ ಪ್ರಮುಖವಾಗಿ, ಬಸ್ ಚಾಲಕರು ಟಿಕೇಟ್ ನೀಡದಿರುವ ಬಗ್ಗೆ ದೂರುಗಳು ಕೇಳಿ ಬಂತು. ಬಸ್ ತಂಗುದಾಣಗಳಿದ್ದರು ಕೆಲವು ಖಾಸಗಿ ಬಸ್‌ಗಳು ಚಾಲಕರು ಬಸ್ ತಂಗುದಾಣಕ್ಕೆ ಬಾರದೆ ಹೊರಗಿನಿಂದಲೇ ಚಲಿಸುವುದರ ಬಗ್ಗೆ ದೂರು, ಕಂಕನಾಡಿ ರೈಲ್ವೇ ನಿಲ್ದಾಣಕ್ಕೆ ಪಡೀಲ್ ಜಂಕ್ಷನ್‌ನಿಂದ ನಿಯಮಿತವಾಗಿ ಬಸ್ ಓಡಿಸಿದರೆ ಪ್ರಯಾಣಿಕರಿಗೆ ಅನುಕೂಲವೆನ್ನುವ ಅಭಿಪ್ರಾಯ. ಸ್ಟೇಟ್ ಬ್ಯಾಂಕ್-ಮಂಜನಾಡಿ-ಮುಡಿಪು ನಡುವೆ ನರ್ಮ್ ಬಸ್ ಹೆಚ್ಚು ಓಡಿಸಬೇಕು ಎನ್ನುವ ಆಗ್ರಹ ಕೇಳಿಬಂತು
ನಗರದಲ್ಲಿ ಸಿಗ್ನಲ್‌ಗಳ ಅಸಮರ್ಪಕ ಕಾರ್ಯ ನಿರ್ವಹಣೆಯಿಂದ ವಾಹನ ದಟ್ಟನೆ ಯಾಗುತ್ತಿರುವ ಬಗ್ಗೆ ಆಟೊ ಚಾಲಕರ ದೂರು, ನಗರದಲ್ಲಿ ಹೆಚ್ಚುತ್ತಿರುವ ರಿಕ್ಷಾಗಳಿಗೆ ಕಡಿವಾಣ ಹಾಕಲು ಗ್ರಾಮಾಂತರ ಪ್ರದೇಶದ ರಿಕ್ಷಾಗಳಿಗೆ ನಿರ್ಬಂಧ ವಿಧಿಸಲು ಸಲಹೆ, ಬಿ.ಸಿ ರೋಡಿನಿಂದ ಅಮ್ಮೆಂಬಳ ದರ್ಗಾಕ್ಕೆ ಸೂಕ್ತ ಸಮಯದಲ್ಲಿ ಬಸ್ ಓಡಿಸಬೇಕು, ಹಾಗೂ ತೊಕ್ಕೊಟ್ಟಿನಲ್ಲಿ ರಾತ್ರಿ ವೇಳೆ ಖಾಸಗಿ ಬಸ್‌ಗಳು ಬಸ್ ನಿಲ್ದಾಣ ಪ್ರವೇಶಿಸದೆ ಹೋಗುವುದರ ವಿರುದ್ಧ ಸೂಕ್ತ ಕ್ರಮ ಕಯಗೊಳ್ಳಲು ಆಗ್ರಹಿಸಲಾಯಿತು.
ಸಭೆಯಲ್ಲಿ ಆರ್‌ಟಿಒ ಜಾನ್ ಮಿಸ್ಕತ್, ಹೆಚ್ಚುವರಿ ಜಿಲ್ಲಾಧಿಕಾರಿ ಕುಮಾರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ರವಿಕಾಂತೇಗೌಡ ಮೊದಲಾದವರು ಉಪಸ್ಥಿತರಿದ್ದರು.